ಪ್ರಾತಿನಿಧಿಕ ಚಿತ್ರ
ಮಂಗಳೂರು: ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವು, ಕೊಲೆ ಪ್ರಕರಣಗಳ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಸೌಜನ್ಯಾ ತಾಯಿ ಕುಸುಮಾವತಿ, ಇತರ ಸಂತ್ರಸ್ತ ಕುಟುಂಬಗಳ ಸದಸ್ಯರು ಶನಿವಾರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರು ನೀಡಿದರು.
ಅನೇಕ ಪ್ರಕರಣಗಳಲ್ಲಿ ಸಾವು ಸಂಭವಿಸಿದ ದಿನ ಅಥವಾ ಮರುದಿನವೇ ಶವಗಳನ್ನು ವಿಲೇ ಮಾಡಲಾಗಿದೆ. ಇದು ನಿಯಮಗಳಿಗೆ ವಿರುದ್ಧವಾದುದು. ಧರ್ಮಸ್ಥಳದ ವಸತಿ ಗೃಹದಲ್ಲಿ 2007ರಲ್ಲಿ ನಡೆದ ಕೊಲೆ ಪ್ರಕರಣ ಒಂದರಲ್ಲಿ ‘ಮೃತರ ಗುರುತು ಪತ್ತೆಯಾಗಿಲ್ಲ’ ಎಂದು ಮೃತದೇಹವನ್ನು ಅದೇ ದಿನ ವಿಲೇ ಮಾಡಲಾಗಿದೆ. ಇದು ಹೇಗೆ ಸಾಧ್ಯ ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ.
2012ರಲ್ಲಿ ನಡೆದ ಆನೆ ಮಾವುತ ನಾರಾಯಣ ಮತ್ತು ಆತನ ಸಹೋದರಿ ಯಮುನಾ ಕೊಲೆ, 1986ರಲ್ಲಿ ನಡೆದ ಪದ್ಮಾವತಿ ಕೊಲೆ, 1979ರಲ್ಲಿ ನಡೆದ ವೇದವಲ್ಲಿ ಕೊಲೆ ಪ್ರಕರಣಗಳನ್ನೂ ಮರು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಗ್ರಾಮ ಪಂಚಾಯಿತಿ, ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗಳಿಂದ ಮಾಹಿತಿ ಹಕ್ಕಿನಡಿ ಪಡೆದ ವಿವರಗಳನ್ನು ಅವರು ದೂರಿನ ಜೊತೆ ಸಲ್ಲಿಸಿದ್ದಾರೆ. ನಿಯಮ ಮೀರಿ ಮೃತದೇಹಗಳನ್ನು ವಿಲೇ ಮಾಡಲಾಗಿದೆ ಎನ್ನಲಾದ 75 ಪ್ರಕರಣಗಳ ಮಾಹಿತಿಯನ್ನು ಒದಗಿಸಿದ್ದಾರೆ.
ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಗಿರೀಶ ಮಟ್ಟೆಣ್ಣವರ, ‘ನಾಲ್ಕೈದು ದಶಕಗಳಿಂದ ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಕೊಲೆಗಳು ನಡೆದಿವೆ. ಆರೋಪಿಗಳು ಯಾರು ಎಂದು ಪತ್ತೆ ಹಚ್ಚುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ವಿಫಲ ಆಗಿವೆ’ ಎಂದು ದೂರಿದರು.
ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಗಬೇಕು ಎಂದು ಕಾನೂನು ತಜ್ಞರು, ನಿವೃತ್ತ ನ್ಯಾಯಾಧೀಶರು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಂವಿಧಾನ ತಜ್ಞರು ಸ್ಥಳೀಯರ ಜೊತೆ ಚರ್ಚಿಸಿವಿಸ್ತೃತ ವರದಿ ಸಿದ್ಧಪಡಿಸಲಾಗಿದೆ. ಅದರ ಆಧಾರದಲ್ಲಿ ಎಸ್‌ಐಟಿಗೆ ದೂರು ನೀಡಲಾಗಿದೆ’ ಎಂದರು.
‘ಧರ್ಮಸ್ಥಳದಲ್ಲಿ ಶವಗಳನ್ನುಹೂಳಲಾಗಿದೆ ಎನ್ನಲಾದ ಪ್ರಕರಣದ ಸಾಕ್ಷಿ ದೂರುದಾರ ಹಿಂದೆ ನ್ಯಾಯಾಧೀಶರ ಮುಂದೆ, ವಿಚಾರಣೆ ವೇಳೆ ಹೇಳಿಕೆ ನೀಡಿದ್ದ. ಬಳಿಕ ಏಕಾಏಕಿ ಹಿಂಜರಿದಿದ್ದಾನೆ. ಅದರ ಹಿಂದಿರುವ ಷಡ್ಯಂತ್ರವನ್ನು ಎಸ್ಐಟಿ ಪತ್ತೆ ಹಚ್ಚಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.