ADVERTISEMENT

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ಮುಂದೆ 30ಕ್ಕೂ ಹೆಚ್ಚು ದೂರು

ಕೆಲ ದೂರುಗಳ ಸಮಗ್ರ ತನಿಖೆಗೆ ಸಿದ್ಧತೆ– ಮೊಹಾಂತಿ ನೇತೃತ್ವದಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 20:29 IST
Last Updated 14 ಸೆಪ್ಟೆಂಬರ್ 2025, 20:29 IST
<div class="paragraphs"><p>ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ಸ್ನಾನಘಟ್ಟದ ಬಳಿ ಮೃತದೇಹಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣದ ಶೋಧ ಕಾರ್ಯದ ಸಂದರ್ಭದ&nbsp;ಚಿತ್ರ</p></div>

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೇತ್ರಾವತಿ ಸ್ನಾನಘಟ್ಟದ ಬಳಿ ಮೃತದೇಹಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣದ ಶೋಧ ಕಾರ್ಯದ ಸಂದರ್ಭದ ಚಿತ್ರ

   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪ ಕುರಿತು ತನಿಖೆ ನಡೆಸುತ್ತಿರುವ ಎಸ್ಐಟಿಗೆ, ಇದುವರೆಗೆ 30ಕ್ಕೂ ಹೆಚ್ಚು ದೂರುಗಳು ಸಲ್ಲಿಕೆಯಾಗಿವೆ. ಅವುಗಳಲ್ಲಿ ಅರ್ಹ ದೂರುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸ್‌ಐಟಿ ಮುಂದಾಗಿದೆ.

ನಾಪತ್ತೆ ಪ್ರಕರಣಗಳು, ಅಸಹಜ ಸಾವುಗಳು, ಶಂಕಿತ ಕೊಲೆ ಪ್ರಕರಣಗಳು, ಮೃತದೇಹಗಳನ್ನು ಗ್ರಾಮ ಪಂಚಾಯಿತಿ ಹಾಗೂ ಹಾಗೂ ಪೊಲೀಸರ ಸಹಕಾರದಿಂದ ಅಕ್ರಮವಾಗಿ ವಿಲೇವಾರಿ ಮಾಡಿದ ಆರೋಪಗಳಿಗೆ ಸಂಬಂಧಿಸಿದ ದೂರುಗಳು ಇವುಗಳಲ್ಲಿ ಸೇರಿವೆ.

ADVERTISEMENT

‘ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಸಂಚು ರೂಪಿಸಲಾಗಿದೆ ಹಾಗೂ ಇದಕ್ಕೆ ವಿದೇಶದಿಂದ ಹಣಕಾಸು ಪೂರೈಕೆ ಆಗಿದೆ’ ಎಂದು ಆರೋಪಿಸಿ ಕೆಲವರು ದೂರು ನೀಡಿದ್ದರು.

ಪ್ರಕರಣದ ತನಿಖೆಯ ಪ್ರಗತಿ ಹಾಗೂ ಸಲ್ಲಿಕೆಯಾಗಿರುವ ದೂರುಗಳ ವಿಲೇವಾರಿ ಕುರಿತು ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ  ಬೆಳ್ತಂಗಡಿಯ ಕಚೇರಿಯಲ್ಲಿ ಭಾನುವಾರ  ತಂಡದ ಎಸ್ಪಿಗಳಾದ ಜಿತೇಂದ್ರ ಕುಮಾರ್‌ ದಯಾಮ, ಸಿ.ಎ. ಸೈಮನ್‌ ಮತ್ತಿತರ ಅಧಿಕಾರಿಗಳ ಜೊತೆ ಸಮಾಲೋಚಿಸಿದರು.

ಕೆಲ ದೂರುಗಳ ಬಗ್ಗೆ ಈಗಾಗಲೇ ತನಿಖಾಧಿಕಾರಿಗಳು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಅವುಗಳಲ್ಲಿ ಯಾವುವು ತನಿಖೆಗೆ ಯೋಗ್ಯವಾಗಿವೆ, ಯಾವ ದೂರುಗಳಿಗೆ ಹಿಂಬರಹ ನೀಡಿ ಮುಕ್ತಾಯಗೊಳಿಸಬಹುದು ಎಂಬ ಬಗ್ಗೆಯೂ ಮೊಹಾಂತಿಯವರು ಅಧಿಕಾರಿಗಳ ಜೊತೆ ಚರ್ಚಿಸಿದರು ಎಂದು ಗೊತ್ತಾಗಿದೆ. 

‘ನಮಗೆ 30ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಪರಿಶೀಲಿಸಲಾಗುತ್ತಿದೆ. ತನಿಖೆ ಅಗತ್ಯ ಇಲ್ಲದ ದೂರುಗಳಿದ್ದರೆ, ಹಿಂಬರಹ ನೀಡಿ ಇತ್ಯರ್ಥಪಡಿಸಬೇಕಿದೆ. ಕೆಲ ದೂರುಗಳಲ್ಲಿ ಸಮಗ್ರ ತನಿಖೆಯ ಅಗತ್ಯ ಕಂಡು ಬಂದಿದ್ದು, ಇನ್ನಷ್ಟು ಮಾಹಿತಿ ಕಲೆಹಾಕುವ ಅಗತ್ಯವಿದೆ’ ಎಂದು ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.