ADVERTISEMENT

ಧರ್ಮಸ್ಥಳ ಪ್ರಕರಣ: ಆರೋಪಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಲು ಕೋರ್ಟ್ ನಕಾರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 3:09 IST
Last Updated 4 ಜನವರಿ 2026, 3:09 IST
<div class="paragraphs"><p>ಧರ್ಮಸ್ಥಳ ಪ್ರಕರಣ</p></div>

ಧರ್ಮಸ್ಥಳ ಪ್ರಕರಣ

   

ಬೆಳ್ತಂಗಡಿ (ದಕ್ಷಿಣ ಕನ್ನಡ): ಧರ್ಮಸ್ಥಳ ಗ್ರಾಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯನ್ವಯ ಆರೋಪಿಗಳ ವಿರುದ್ಧ ಕ್ರಮಕ್ಕೆ ಅನುಮತಿ ನೀಡಬೇಕು ಎಂಬ ಕೋರಿಕೆಯನ್ನು ಪುರಸ್ಕರಿಸಿಲ್ಲ.

ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವರದಿ ಸಲ್ಲಿಕೆಯಾದ ಬಳಿಕವೇ ಈ ಬಗ್ಗೆ ಆದೇಶ ಮಾಡುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ. ಗ್ರಾಮದಲ್ಲಿ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳ ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಂಬಂಧ ಎಸ್‌ಐಟಿ ವರದಿ ಸಲ್ಲಿಸಿತ್ತು. 

ADVERTISEMENT

ಆರೋಪಿಯನ್ನು ಬಂಧಿಸಿದ 90 ದಿನಗಳಲ್ಲಿ ಎಸ್‌ಐಟಿ ವರದಿ ಸಲ್ಲಿಸಬೇಕಾಗಿತ್ತು. ಆರೋಪಿ ಚಿನ್ನಾ ಸಿ.ಎನ್‌ ನ್ಯಾಯಾಂಗ ಬಂಧನದಲ್ಲಿದ್ದಾಗ ಎಸ್‌ಐಟಿಯು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್‌) ಸೆಕ್ಷನ್ 215 ಅಡಿ  3,900 ಪುಟಗಳ ವರದಿಯನ್ನು ನ.20ರಂದು ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಸುಳ್ಳು ಪುರಾವೆಗಳನ್ನು ಸಲ್ಲಿಸಿ ಯಾವ ರೀತಿ ನ್ಯಾಯಾಲಯದ ದಾರಿ ತಪ್ಪಿಸಲಾಗಿದೆ ಎಂದು ಎಸ್‌ಐಟಿ ವಿವರಿಸಿತ್ತು.

ಆರೋಪಿ ಚಿನ್ನ ಸಿ.ಎನ್, ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ಜಯಂತ್‌ ಟಿ., ವಿಠಲ ಗೌಡ, ಸುಜಾತಾ ಭಟ್‌ ನ್ಯಾಯಾಲಯದ ದಾರಿ ತಪ್ಪಿಸಿರುವ ಕುರಿತು ಬಿಎನ್‌ಎಸ್ಎಸ್ ಸೆಕ್ಷನ್ 379ರ ಅಡಿ ತನಿಖೆಗೆ ನಿರ್ದೇಶನ ನೀಡುವಂತೆ ಎಸ್‌ಐಟಿ ಕೋರಿತ್ತು. 

‘ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ಜಯಂತ್‌ ಟಿ., ವಿಠಲ ಗೌಡ ಮತ್ತು ಸುಜಾತಾ ಭಟ್‌ ತನಿಖೆಗೆ ಸಹಕರಿಸಿಲ್ಲ’ ಎಂದು ಎಸ್‌ಐಟಿಯು ವರದಿಯಲ್ಲಿ ಉಲ್ಲೇಖಿಸಿರುವುದನ್ನು ನ್ಯಾಯಾಲಯವು ಗಮನಿಸಿದೆ. ಎಸ್‌ಐಟಿಯು ಈಗ ಸಲ್ಲಿಸಿರುವ ವರದಿ ಅನ್ವಯ ನ್ಯಾಯಾಲಯವು ಈ ಹಂತದಲ್ಲಿ ಯಾವುದೇ ಆದೇಶ ಪ್ರಕಟಿಸುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ಸಲ್ಲಿಸಿ’ ಎಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಟಿ.ಎಚ್‌.ವಿಜಯೇಂದ್ರ ತಿಳಿಸಿದರು.  

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ದೇವಸ್ಥಾನವನ್ನು ಈ ಪ್ರಕರಣದಲ್ಲಿ ‘ಸಂತ್ರಸ್ತ’ ಎಂದು ಪರಿಗಣಿಸಿ, ವಿಚಾರಣೆ ವೇಳೆ ಕ್ಷೇತ್ರದ ಪರವಾಗಿ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಕೋರಿ ದೇವಸ್ಥಾನದ ವಕ್ತಾರ ಪಾರ್ಶ್ವನಾಥ್ ಜೈನ್‌ 2025ರ ಡಿ.31ರಂದು ಅರ್ಜಿ ಸಲ್ಲಿಸಿದ್ದರು. ದೇವಸ್ಥಾನದ ಕಡೆಯ ಅರ್ಜಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರಾದ ದಿವ್ಯರಾಜ ಹೆಗ್ಡೆ  ಕೋರಿದ್ದರಿಂದ ನ್ಯಾಯಾಧೀಶರು, ಆ ಕುರಿತ ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.