ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಧಕಾರ್ಯ ನಡೆಯುತ್ತಿರುವ ಜಾಗಕ್ಕೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಬುಧವಾರ ಭೇಟಿ ನೀಡಿದರು ಪ್ರ
ಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆಗಾಗಿ ನೇತ್ರಾವತಿ ನದಿ ಪಕ್ಕದ ದಟ್ಟ ಕಾಡಿನ ಒಳಗೆ ಬುಧವಾರ ನಾಲ್ಕು ಕಡೆ ಜಾಗ ಅಗೆದರೂ ಎಲ್ಲೂ ಮೃತದೇಹದ ಅವಶೇಷಗಳು ಪತ್ತೆಯಾಗಲಿಲ್ಲ.
ಪ್ರಕರಣದ ಸಾಕ್ಷಿ ದೂರುದಾರ ಶವ ಹೂತು ಹಾಕಿರುವ 12 ಜಾಗಗಳನ್ನು ಕಾಡಿನೊಳಗೆ ಹಾಗೂ ಇನ್ನೊಂದು ಜಾಗವನ್ನು ಸ್ನಾನಘಟ್ಟದ ಸಮೀಪದಲ್ಲಿರುವ ಅಣೆಕಟ್ಟೆ ಬಳಿಯ ಬಯಲು ಪ್ರದೇಶದಲ್ಲಿ ತೋರಿಸಿದ್ದರು. ಆತ ತೋರಿಸಿದ್ದ ಒಂಬತ್ತು ಜಾಗಗಳು ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿಯೇ ಇದ್ದು, ಅವುಗಳಲ್ಲಿ ಮಂಗಳವಾರ ಅಗೆದ ನಾಲ್ಕು ಜಾಗಗಳು ಸೇರಿ ಒಟ್ಟು ಐದು ಕಡೆ ಅಗೆಯುವ ಕಾರ್ಯ ಮುಗಿದಿದೆ. ಇಷ್ಟೂ ಜಾಗಗಳಲ್ಲಿ ಶವದ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದು ವಿಶೇಷ ತನಿಖಾ ತಂಡದ (ಎಸ್ಐಟಿ) ಮೂಲಗಳು ತಿಳಿಸಿವೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಧಕಾರ್ಯ ನಡೆಯುತ್ತಿರುವ ಜಾಗಕ್ಕೆ ಭೇಟಿ ನೀಡಿದ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಮಾಧ್ಯಮದವರಿಗೆ ಹೇಳಿಕೆ ನೀಡಲು ನಿರಾಕರಿಸಿದರು
ಕಾಡಿನಲ್ಲಿ ಗುರುತಿಸಿರುವ ಜಾಗಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಲುಪಲು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಇಲ್ಲಿಗೆ ನೆಲ ಅಗೆಯುವ ಯಂತ್ರ ಒಯ್ಯುವುದು ಕಷ್ಟ. ಆದ್ದರಿಂದ ಬುಧವಾರ ಸುಮಾರು 20 ಕಾರ್ಮಿಕರನ್ನು ಬಳಸಿಕೊಂಡು ಹಾರೆ, ಪಿಕ್ಕಾಸಿ ಬಳಸಿಯೇ ಈ ಜಾಗಗಳನ್ನು ಅಗೆಯಲಾಯಿತು.
ಸಾಕ್ಷಿ ದೂರುದಾರನನ್ನು ಎಸ್ಐಟಿ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆ 11.15ರ ವೇಳೆಗೆ ಕಾಡಿನ ಒಳಕ್ಕೆ ಕರೆದೊಯ್ಯಿತು. ಮಧ್ಯಾಹ್ನದವರೆಗೆ ಎರಡು ಕಡೆ ಅಗೆಯುವ ಕಾರ್ಯ ಪೂರ್ಣಗೊಂಡಿತು. ಮಧ್ಯಾಹ್ನದ ಬಳಿಕ ಮತ್ತೆರಡು ಜಾಗಗಳನ್ನು ಅಗೆಯಲಾಯಿತು. ಪ್ರತಿ ಜಾಗದಲ್ಲಿ ಸುಮಾರು 6 ಅಡಿಗಳಷ್ಟು ಆಳಕ್ಕೆ ಗುಂಡಿ ತೆಗೆಯಲಾಗಿದೆ ಎಂದು ಎಸ್‌ಐಟಿ ಮೂಲಗಳು ’ಪ್ರಜಾವಾಣಿ‘ಗೆ ತಿಳಿಸಿವೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೋಧಕಾರ್ಯ ನಡೆಯುತ್ತಿರುವ ಜಾಗಕ್ಕೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಬುಧವಾರ ಭೇಟಿ ನೀಡಿದರು
ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಸ್ಥಳದಲ್ಲಿದ್ದರು. ಸಾಕ್ಷಿ ದೂರುದಾರ ವ್ಯಕ್ತಿಯೂ ಮುಖಕ್ಕೆ ಮುಸುಕು ಧರಿಸಿಕೊಂಡು ಶೋಧ ಕಾರ್ಯ ನಡೆದ ಸ್ಥಳದಲ್ಲಿ ಹಾಜರಿದ್ದರು. ಆತನ ವಕೀಲರ ತಂಡವೂ ಸ್ಥಳಕ್ಕೆ ಬಂದಿತ್ತು.
ಪ್ರತ್ಯೇಕ ಊಟ: ಸಾಕ್ಷಿ ದೂರುದಾರನಿಗೆ ಎಸ್‌ಐಟಿ ಸಿಬ್ಬಂದಿಗೆ ಪೂರೈಸಿದ ಊಟದ ಬದಲು ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಬುಧವಾರ ಮಧ್ಯಾಹ್ನವೂ ಸ್ನಾನಘಟ್ಟದಲ್ಲಿ ಜನರಿಂದ ದೂರಕ್ಕೆ ಸಾಗಿದ ಅವರು ವಕೀಲರ ತಂಡವು ಹೋಟೆಲ್‌ನಿಂದ ತರಿಸಿದ ಊಟವನ್ನು ಸೇವಿಸಿದರು.
ಶೋಧಕಾರ್ಯದ ಸಲುವಾಗಿ ಧರ್ಮಸ್ಥಳದ ನೇತ್ರಾವತಿ ನದಿ ಪಕ್ಕದ ಕಾಡಿನೊಳಗೆ ತೆರಳಿದ್ದ ವಿಧಿವಿಜ್ಞಾನ ತಜ್ಞೆಯೊಬ್ಬರಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಬುಧವಾರ ನೆರವಾದರು
ಧರ್ಮಸ್ಥಳದಲ್ಲಿ ಹೂತು ಹಾಕಿದೆ ಎನ್ನಲಾದ ಶವಗಳ ಪತ್ತೆಗೆ ಶೋಧ ನಡೆಯುತ್ತಿರುವ ಸ್ಥಳಕ್ಕೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಬುಧವಾರ ಭೇಟಿ ನೀಡಿದರು. ನೇತ್ರಾವತಿ ನದಿ ಪಕ್ಕದ ಕಾಡಿನ ಒಳಗೆ ಸುಮಾರು ಅರ್ಧ ಕಿ.ಮೀ ದೂರ ನಡೆದು ಸಾಗಿದ ಅವರು ಶವಗಳ ಅವಶೇಷ ಪತ್ತೆಗಾಗಿ ಅಗೆದ ಸ್ಥಳಗಳನ್ನು ಪರಿಶೀಲಿಸಿದರು. ಎಸ್ಐಟಿ ಡಿಐಜಿ ಎಂ.ಎನ್.ಅನುಚೇತ್ ಎಸ್.ಪಿ.ದರ್ಜೆಯ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಸಿ.ಎ.ಸೈಮನ್ ಮತ್ತಿತರರ ಅಧಿಕಾರಿಗಳು ಜೊತೆಯಲ್ಲಿದ್ದರು. ಸುದೀರ್ಘ ಸಭೆ: ಸ್ಥಳ ಪರಿಶೀಲನೆ ನಡೆಸಿದ ಬಳಿಕ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ತೆರಳಿದ ಅವರು ಮುಂದಿನ ತನಿಖೆಯ ಬಗ್ಗೆ ತಂಡದ ಹಿರಿಯ ಅಧಿಕಾರಿಗಳ ಜೊತೆಗೆ ಸುಮಾರು 2 ಗಂಟೆಗೂ ಹೆಚ್ಚುಕಾಲ ಸಮಾಲೋಚನೆ ನಡೆಸಿದರು. ಮೊಹಾಂತಿಯವರು ಆ.1ರವರೆಗೆ ಇಲ್ಲೇ ಉಳಿದುಕೊಂಡು ತನಿಖೆಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ವಿಶೇಷ ತನಿಖಾ ತಂಡ ಮಂಗಳೂರಿನಲ್ಲೂ ಕಚೇರಿ ಆರಂಭಿಸಿದೆ.ಎಸ್‌ಐಟಿ ಸಂಪರ್ಕಿಸಲು ಅಥವಾ ಪ್ರಕರಣ ಸಂಬಂಧ ಮಾಹಿತಿ ನೀಡಲು ಸಹಾಯವಾಣಿ ಆರಂಭಿಸಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಈ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ವಿಳಾಸ: ನಿರೀಕ್ಷಣಾ ಮಂದಿರ ಮಲ್ಲಿಕಟ್ಟೆ ಕದ್ರಿ ಮಂಗಳೂರು ನಗರ ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಸಂಖ್ಯೆ : 0824–2005301; ಮೊಬೈಲ್/ವಾಟ್ಸ್ಆ್ಯಪ್ ಸಂಖ್ಯೆ: 8277986369ಚ ಇ–ಮೇಲ್ ವಿಳಾಸ: sitdps@ksp.gov.in
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮಂಗಳವಾರ ನೆಲವನ್ನು ಅಗೆಯುವಾಗ ಪುರುಷನ ಹೆಸರಿನಲ್ಲಿರುವ ಪಾನ್ ಕಾರ್ಡ್, ಮಹಿಳೆಯ ಹೆಸರಿನಲ್ಲಿರುವ ರೂಪೇ ಡೆಬಿಟ್ ಕಾರ್ಡ್ ಸಿಕ್ಕಿದೆ. ಅದರ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್‌ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.