ADVERTISEMENT

ಧರ್ಮಸ್ಥಳ ಪ್ರಕರಣ: ತಿಮರೋಡಿ, ಮಟ್ಟೆಣ್ಣವರ ಸೇರಿ ಹಲವರಿಗೆ ನೋಟಿಸ್‌

ಧರ್ಮಸ್ಥಳ ಬೆಳವಣಿಗೆ: ಎಸ್‌ಐಟಿ ಮುಖ್ಯಸ್ಥರ ಭೇಟಿ, ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 23:30 IST
Last Updated 25 ಅಕ್ಟೋಬರ್ 2025, 23:30 IST
ಮಹೇಶ್‌ ಶೆಟ್ಟಿ ತಿಮರೋಡಿ
ಮಹೇಶ್‌ ಶೆಟ್ಟಿ ತಿಮರೋಡಿ   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳ ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಇದೇ 27ಕ್ಕೆ ಬೆಳ್ತಂಗಡಿ ಕಚೇರಿಗೆ ವಿಚಾರಣೆಗೆ ಬರುವಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. 

‘ಪ್ರಕರಣದ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ಜಯಂತ್‌ ಟಿ. ಹಾಗೂ ವಿಠಲ ಗೌಡ ಅವರಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

ಈ ನಾಲ್ವರಿಗೆ ಹಿಂದೆಯೂ ನೋಟಿಸ್‌ ನೀಡಲಾಗಿತ್ತು. ಇತ್ತೀಚೆಗೆ ಕಂಡುಕೊಂಡ ಕೆಲವು ಅಂಶಗಳ ಪ್ರಕಾರ ಹಾಗೂ ಪ್ರಕರಣದಲ್ಲಿ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಸಿಕ್ಕಿರುವ ಪೂರಕ ಸಾಕ್ಷ್ಯಗಳ ಆಧಾರದಲ್ಲಿ ಮತ್ತೆ ನೋಟಿಸ್‌ ನೀಡಲಾಗಿದೆ ಎಂದು ಗೊತ್ತಾಗಿದೆ.  

ADVERTISEMENT

ಎಸ್‌ಐಟಿ ಮುಖ್ಯಸ್ಥರ ಭೇಟಿ: 

ಎಸ್‌ಐಟಿ ಮುಖ್ಯಸ್ಥ ಪ್ರಣವ್‌ ಮೊಹಾಂತಿ ಅವರು ಬೆಳ್ತಂಗಡಿ ಕಚೇರಿಗೆ ಶನಿವಾರ ಭೇಟಿ ನೀಡಿ, ಪ್ರಕರಣದ ತನಿಖೆಯ ಪ್ರಗತಿಯನ್ನು ಪರಿಶೀಲಿಸಿದರು.

‘ಪ್ರಕರಣದ ಕುರಿತು ಕೋರ್ಟ್‌ಗೆ ಸಮಗ್ರ ವರದಿ ಸಲ್ಲಿಸಲು ಎಸ್‌‌ಐಟಿ ಸಿದ್ಧತೆ ನಡೆಸಿದೆ. ಶೋಧ ಕಾರ್ಯದಲ್ಲಿ ಕಂಡ ಅಂಶಗಳು, ಸಾಕ್ಷಿದಾರರ ಹೇಳಿಕೆ, ಇದುವರೆಗೆ ಕಲೆ ಹಾಕಿರುವ ತಾಂತ್ರಿಕ ಪುರಾವೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.  

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಸಿಕ್ಕಿರುವ ಶವಗಳ ಅವಶೇಷಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿಗಳು ಎಸ್‌ಐಟಿಗೆ ಇನ್ನಷ್ಟೇ ತಲುಪಬೇಕಿವೆ. ಕೆಲ ಸಾಮಗ್ರಿಗಳು, ಜೈವಿಕ ಮಾದರಿಗಳನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಎನ್‌ವಿರಾನ್ಮೆಂಟಲ್ ಡಿಎನ್‌ಎ ತಜ್ಞರಿಗೆ ಕಳುಹಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತ್ವರಿತವಾಗಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ ಎಂಬುದನ್ನು ಮೂಲಗಳು ಅಲ್ಲಗಳೆದಿವೆ. .

ಸುಜಾತಾ ಭಟ್‌ ಅವರಿಗೂ ನೋಟಿಸ್‌:
 ‘ಮಗಳು ಕಾಣೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸಿದ್ದ ಸುಜಾತಾ ಭಟ್‌ ಅವರಿಗೂ  ನೋಟಿಸ್‌ ಜಾರಿಗೊಳಿಸಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.