ADVERTISEMENT

ಧರ್ಮಸ್ಥಳ ಪ್ರಕರಣ| ಸತ್ಯ ಹೊರಬಂದಿದೆ, ಸರ್ಕಾರ ಕ್ಷಮೆ ಯಾಚಿಸಲಿ: ಆರಗ ಜ್ಞಾನೇಂದ್ರ

ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು: ಆರಗ ಜ್ಞಾನೇಂದ್ರ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 4:33 IST
Last Updated 24 ಆಗಸ್ಟ್ 2025, 4:33 IST

ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಭಕ್ತರು, ಅಭಿಮಾನಿಗಳು ಶನಿವಾರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು

ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಭಕ್ತರು, ಅಭಿಮಾನಿಗಳು ಶನಿವಾರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದರು

ಉಜಿರೆ: ‘ದೇವರ ಅನುಗ್ರಹದಿಂದ ಈಗ ಸತ್ಯ ಹೊರಬಂದಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ರಾಜ್ಯ ಸರ್ಕಾರ ಜನರ ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ADVERTISEMENT

ತೀರ್ಥಹಳ್ಳಿ ಕ್ಷೇತ್ರದಿಂದ ಶನಿವಾರ ಭಕ್ತರೊಂದಿಗೆ ಬಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

‘ಬುರುಡೆ ಪ್ರಕರಣದಿಂದ ಕ್ಷೇತ್ರದ  ಅಪಪ್ರಚಾರವಾಗಿದೆ. ಇದರಲ್ಲಿ ವಿಚಾರವಂತರು, ಎಡಪಂಥೀಯರ ಕೈವಾಡವಿದೆ. ಆರಂಭದಲ್ಲೆ ಸಾಕ್ಷಿ ದೂರುದಾರನ ಬಾಯಿ ಬಿಡಿಸಿದ್ದರೆ ಸತ್ಯ ತಿಳಿಯುತ್ತಿತ್ತು’ ಎಂದರು.

ತೀರ್ಥಹಳ್ಳಿಯ ಪೂಜ್ಯಪಾದ ಚಿಕಿತ್ಸಾಲಯದ ಡಾ.ಜೀವಂಧರ ಕುಮಾರ್, ಮುಖಂಡ ನವೀನ್ ಇದ್ದರು.

ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ತಿರುವು ಪಡೆಯುತ್ತಿದ್ದಂತೆ, ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ಸಂಸದ ಬಸವರಾಜ ಬೊಮ್ಮಾಯಿ ಅವರು ಎನ್‌ಐಎ ತನಿಖೆಗೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಆರ್‌.ಅಶೋಕ, ‘ದೂರುದಾರನ ಹಿನ್ನೆಲೆ ಪರಿಶೀಲಿಸದೆ ಎಸ್‌ಐಟಿ ರಚಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಪ್ಪು. ಮುಸುಕುಧಾರಿಯನ್ನು ಬಂಧಿಸಿದರೆ ಸಾಲದು, ಅವರ ಹಿಂದೆ ಇರುವವರನ್ನು ಪತ್ತೆ ಮಾಡಬೇಕು. ಪ್ರಗತಿಪರರು ಕರೆ ತಂದಿರುವ ಶಂಕೆ ಇದೆ. ಅದಕ್ಕಾಗಿ ಎಸ್‌ಐಟಿ ರಚಿಸಬೇಕು. ಅಪಪ್ರಚಾರಕ್ಕೆ ವಿದೇಶದಿಂದ ಹಣ ಬಂದಿರುವ ಸಾಧ್ಯತೆ ಇದೆ. ಹಾಗಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಎಸ್‌ಐಟಿ ರಚಿಸುವ ಮೊದಲು ಮುಸುಕುಧಾರಿಯ ಪೂರ್ವಾಪರ ತಿಳಿದುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಅವರು ಪ್ರಗತಿಪರರ ಮಾತು ಕೇಳಿಕೊಂಡು ಎಸ್‌ಐಟಿ ರಚಿಸಿದರು. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ. ಸರ್ಕಾರದ ತಪ್ಪು ಸಾಬೀತಾಗಿದೆ. ಈ ಹಣವನ್ನು ಕಾಂಗ್ರೆಸ್‌ ಭರಿಸಬೇಕು. ಈ ಘಟನೆಯಿಂದ ಭಕ್ತರು ಅನುಭವಿಸಿದ ನೋವು ಶಮನಗೊಳಿಸಲು ಸಾಧ್ಯವಿಲ್ಲ’ ಎಂದರು.

‘ಯೂಟ್ಯೂಬರ್‌ ಸಮೀರ್‌ ವಿಡಿಯೊ ಮಾಡಿ ಅಪಪ್ರಚಾರ ಮಾಡಿದ್ದಾನೆ. ಮೊದಲು ಆತನನ್ನು ಮೊದಲು ಬಂಧಿಸಬೇಕು. ಜಾಮೀನು ರದ್ದು ಮಾಡಲು ಮೇಲ್ಮನವಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಸೂತ್ರಧಾರಿಗಳನ್ನು ಬಂಧಿಸಿ’

‘ಮುಸುಕುಧಾರಿ ಹೇಳಿರುವ ಸೂತ್ರಧಾರಿಗಳನ್ನು ತಕ್ಷಣ ಬಂಧಿಸಿ, ವಿಚಾರಣೆಗೆ ಒಳಪಡಿಸಬೇಕು. ಇಲ್ಲದಿದ್ದರೆ ಷಡ್ಯಂತ್ರದಲ್ಲಿ ಸರ್ಕಾರವೂ ಭಾಗಿಯಾಗಿದೆ ಎಂದು ಜನರು ಭಾವಿಸುತ್ತಾರೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಧರ್ಮಸ್ಥಳದ ವಿಚಾರದಲ್ಲಿ ಎಸ್‌ಐಟಿ ಮೊದಲು ಮಾಡಬೇಕಿದ್ದ ಕೆಲಸವನ್ನು ಕೊನೆಯಲ್ಲಿ ಮಾಡುತ್ತಿದೆ. ದಕ್ಷ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿರಲಿಲ್ಲ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.