ADVERTISEMENT

‘ತಲೆಬುರುಡೆ’ ದೂರುದಾರ ಸೆರೆ! ಧರ್ಮಸ್ಥಳ ಕೇಸ್‌ನಲ್ಲಿ ಇದುವರೆಗೆ ಏನೇನಾಯಿತು?

ಪ್ರವೀಣ್‌ ಕುಮಾರ್‌ ಪಿ.ವಿ
Published 24 ಆಗಸ್ಟ್ 2025, 0:00 IST
Last Updated 24 ಆಗಸ್ಟ್ 2025, 0:00 IST
ಸಾಕ್ಷಿ ದೂರುದಾರನನ್ನು ಬೆಳ್ತಂಗಡಿಯ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಿದ ಬಳಿಕ ಎಸ್ಐಟಿ ಅಧಿಕಾರಿಗಳು ತಮ್ಮ‌ ಕಚೇರಿಗೆ ಕರೆದೊಯ್ದರು  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಸಾಕ್ಷಿ ದೂರುದಾರನನ್ನು ಬೆಳ್ತಂಗಡಿಯ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಿದ ಬಳಿಕ ಎಸ್ಐಟಿ ಅಧಿಕಾರಿಗಳು ತಮ್ಮ‌ ಕಚೇರಿಗೆ ಕರೆದೊಯ್ದರು  ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಸಾಕ್ಷಿ ದೂರುದಾರನನ್ನು ಬಂಧಿಸಿದೆ. 

ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯ ಅವರನ್ನು 12 ದಿನ ಎಸ್‌ಐಟಿ ವಶಕ್ಕೆ ಶನಿವಾರ ಒಪ್ಪಿಸಿದೆ.

‘ಹೂತಿದ್ದ ಮೃತದೇಹವನ್ನು ಅಗೆದು ತೆಗೆದಿದ್ದಾಗಿ ಹೇಳಿದ್ದ ಸಾಕ್ಷಿ ದೂರುದಾರ, ತಲೆಬುರುಡೆ ಹಾಜರು
ಪಡಿಸಿದ್ದರು. ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಶುಕ್ರವಾರ ವಿಚಾರಣೆಗೆ ಒಳಪಡಿಸಿದಾಗ, ‘ತಂದು ಒಪ್ಪಿಸಿದ್ದ ತಲೆಬುರುಡೆ ನಾನು ಹೂತು ಹಾಕಿದ್ದ ಮೃತದೇಹದ್ದಲ್ಲ’ ಎಂದು ಹೇಳಿದ್ದರು. ಸುಳ್ಳು ಹೇಳಿದ್ದನ್ನು ಒಪ್ಪಿಕೊಂಡ ಬಳಿಕ ಎಸ್ಐಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು, ತಡರಾತ್ರಿಯವರೆಗೆ ತೀವ್ರವಾಗಿ ವಿಚಾರಣೆಗೊಳಪಡಿಸಿದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಶನಿವಾರ ಬೆಳಿಗ್ಗೆ ಅವರನ್ನು ಬಂಧಿಸಿದ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಬೆಳ್ತಂಗಡಿಯ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಧೀಶರಾದ ವಿಜಯೇಂದ್ರ ಟಿ.ಎಚ್‌. ಅವರ ಎದುರು ಹಾಜರು
ಪಡಿಸಿದರು.

ಎಸ್‌ಐಟಿ ಕೋರಿಕೆಯಂತೆ ಕೋರ್ಟ್‌ ಆತನನ್ನು ಸೆ. 3ರ ವರೆಗೆ ಎಸ್‌ಐಟಿ ವಶಕ್ಕೆ ನೀಡಿತು.

ನಂತರ ಆತನನ್ನು ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಕರೆದೊಯ್ಯಲಾಯಿತು. ಎಸ್ಐಟಿ ಎಸ್ಪಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಜೊತೆಯಲ್ಲಿದ್ದರು. ಕೋರ್ಟ್‌ಗೆ ಹಾಜರುಪಡಿಸಿದ ವೇಳೆ ಸಾಕ್ಷಿದೂರುದಾರನ ಮುಖಕ್ಕೆ ಬಟ್ಟೆಯ ಮುಸುಕು ಹಾಕಲಾಗಿತ್ತು.

‘ಸಾಕ್ಷಿ ದೂರುದಾರ ತಾನು ತಂದೊಪ್ಪಿಸಿದ್ದ ತಲೆ ಬುರುಡೆಯ ಕುರಿತು ಸರಿಯಾದ ಮಾಹಿತಿ ನೀಡಿರಲಿಲ್ಲ. ವಿಚಾರಣೆ ನಡೆಸಿದಾಗ, ‘ಅದು ತಾನು ಹೂತಿದ್ದ ಮೃತದೇಹದ ತಲೆ ಬುರುಡೆ ಅಲ್ಲ’ ಎಂದು ಒಪ್ಪಿಕೊಂಡ. ಈ ಬಗ್ಗೆ ಹೆಚ್ಚಿನ ವಿಚಾರಣೆಗೆ ವಶಕ್ಕೆ ಒಪ್ಪಿಸುವಂತೆ ಕೋರಿದ್ದೆವು. ಆತ ಎಲ್ಲಿಂದ ತಲೆಬುರುಡೆ ತಂದ, ಅದರ ಪೂರ್ವಪರಗಳೇನು ಎಂಬ ಬಗ್ಗೆ ತನಿಖೆ ನಡೆಸಲಿದ್ದೇವೆ’ ಎಂದು ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ಸಾಕ್ಷಿ ದೂರುದಾರ ಧರ್ಮಸ್ಥಳ ಗ್ರಾಮದಲ್ಲಿ ತೋರಿಸಿದ್ದ 18 ಜಾಗಗಳಲ್ಲಿ ಎಸ್ಐಟಿಯವರು 17 ಕಡೆ ನೆಲವನ್ನು ಅಗೆದು ಶೋಧ ನಡೆಸಿದ್ದರು. ಈ ಪೈಕಿ ಒಂದು ಜಾಗದಲ್ಲಿ ಹಾಗೂ ಒಂದು ಕಡೆ ನೆಲದ ಮೇಲೆ ಮೃತದೇಹದ ಅವಶೇಷ ಪತ್ತೆಯಾಗಿದ್ದವು. ಅವುಗಳನ್ನು ಎಸ್ಐಟಿಯವರು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅವುಗಳ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಧರ್ಮಸ್ಥಳ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿ, ಸಾಕ್ಷಿ ದೂರುದಾರನ ಜೊತೆಗೆ ಮೃತದೇಹ ವಿಲೇವಾರಿ ಕಾರ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾದ ಸ್ವಚ್ಛತಾ ಕಾರ್ಮಿಕರು,  ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ಪತ್ತೆಯಾಗಿದ್ದ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಮೊದಲಾದವರನ್ನು ಎಸ್‌ಐಟಿ ಇದುವರೆಗೆ ವಿಚಾರಣೆಗೆ ಒಳಪಡಿಸಿದೆ.

ಎಸ್‌ಐಟಿ ಪರ ಸರ್ಕಾರಿ ವಕೀಲ ದಿವ್ಯರಾಜ್‌ ಹೆಗ್ಡೆ ಪುತ್ತೂರು ವಾದ ಮಂಡಿಸಿದರು.

‘ರಕ್ಷಣೆ ಮುಂದುವರಿಕೆ’

‘ಸದ್ಯಕ್ಕೆ ನಾವು ಸಾಕ್ಷಿ ದೂರುದಾರ ತಂದೊಪ್ಪಿಸಿರುವ ತಲೆಬುರುಡೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕು
ವುದಕ್ಕೆ ಸೀಮಿತವಾಗಿ ಬಂಧಿಸಿದ್ದೇವೆ. ಅವರು ಇದುವರೆಗೆ ತೋರಿಸಿದ ಜಾಗಗಳಲ್ಲಿ ನಡೆಸಿದ ಶೋಧಕ್ಕೆ ಸಂಬಂಧಿಸಿದ ತನಿಖೆ ಮುಂದುವರಿಯಲಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. 

‘ಸಾಕ್ಷಿ ದೂರುದಾರನಿಗೆ ಸಾಕ್ಷಿ ಸಂರಕ್ಷಣಾ ಕಾಯ್ದೆ ಯಡಿ ನೀಡಲಾಗಿರುವ ರಕ್ಷಣೆ ಈಗಲೂ ಮುಂದು ವರಿದಿದೆ. ಹಾಗಾಗಿ ಅವರ ಗುರುತನ್ನು ಈಗಲೂ ಬಹಿರಂಗಪಡಿಸುವಂತಿಲ್ಲ’ ಎಂದು ಮೂಲಗಳು ತಿಳಿಸಿವೆ.

ಧರ್ಮಸ್ಥಳ ಪ್ರಕರಣ: ಇದುವರೆಗೆ ಏನೇನಾಯಿತು?

‘ಧರ್ಮಸ್ಥಳ ಗ್ರಾಮದಲ್ಲಿ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿವೆ. ನನಗೆ ಜೀವಬೆದರಿಕೆ ಒಡ್ಡಿ ಈ ಕೃತ್ಯಗಳ ಮೃತದೇಹಗಳನ್ನು ರಹಸ್ಯವಾಗಿ ವಿಲೇ ಮಾಡಿಸಿದ್ದಾರೆ’ ಎಂದು ಸಾಕ್ಷಿ ದೂರುದಾರ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಹಾಗೂ ಧರ್ಮಸ್ಥಳ ಠಾಣೆಗೆ ಜುಲೈ 3ರಂದು ದೂರು ನೀಡಿದ್ದ. ಈ ಬಗ್ಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 211 (ಎ) ಅಡಿಯಲ್ಲಿ ಜುಲೈ 4ರಂದು ಪ್ರಕರಣ ದಾಖಲಾಗಿತ್ತು. ವಕೀಲರ ಜೊತೆ ಬೆಳ್ತಂಗಡಿ ಕೋರ್ಟ್‌ಗೆ ಜುಲೈ 11ರಂದು ಹಾಜರಾಗಿ ಹೇಳಿಕೆ ದಾಖಲಿಸಿದ್ದ. ಸಾಕ್ಷಿ ದೂರುದಾರನ ಆರೋಪಗಳ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಡ ಆ ಬಳಿಕ ಹೆಚ್ಚಾಯಿತು. ರಾಜ್ಯ ಮಹಿಳಾ ಆಯೋಗವೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಸರ್ಕಾರ ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಜುಲೈ 19ರಂದು ಎಸ್‌ಐಟಿಯನ್ನು ರಚಿಸಿ ಆದೇಶ ಮಾಡಿತ್ತು. ಎಸ್‌ಐಟಿ ಅಧಿಕಾರಿಗಳು ಡಿಐಜಿ ಎಂ.ಎನ್‌.ಅನುಚೇತ್‌ ನೇತೃತ್ವದಲ್ಲಿ ಜುಲೈ 26 ಮತ್ತು 27ರಂದು ಸಾಕ್ಷಿದೂರುದಾರನಿಂದ ಹೇಳಿಕೆ ದಾಖಲಿಸಿಕೊಂಡಿದ್ದರು. ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ  ಸಮೀಪ ನದಿ ಪಕ್ಕದ ಕಾಡಿನಲ್ಲಿ 12 ಕಡೆ ಹಾಗೂ ಸ್ನಾನಘಟ್ಟದ ಪಕ್ಕದ ಬಯಲಿನ ಇನ್ನೊಂದು ಜಾಗ ಸೇರಿ ಒಟ್ಟು 13 ಜಾಗಗಳನ್ನು ಸಾಕ್ಷಿ ದೂರುದಾರ ತೋರಿಸಿ ಅಲ್ಲಿ ಶವ ಹೂತಿದ್ದೆ ಎಂದು ಜುಲೈ 28ರಂದು ತಿಳಿಸಿದ್ದ.  ಜು 29ರಿಂದ ಅವಶೇಷಗಳಿಗಾಗಿ ಶೋಧ ಆರಂಭವಾಗಿತ್ತು. ಬಳಿಕ ಐದು ಹೊಸ ಜಾಗಗಳನ್ನು ಆತ ತೋರಿಸಿದ್ದ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‌ ಹಾಗೂ ಎಸ್‌ಐಟಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ಸಮ್ಮುಖದಲ್ಲಿ 17 ಕಡೆ ನೆಲ ಅಗೆದು ಅವಶೇಷಗಳಿಗಾಗಿ ಶೋಧ ನಡೆಸಲಾಗಿದೆ. ಅವುಗಳಲ್ಲಿ ಒಂದು ಕಡೆ ನೆಲದಡಿಯಲ್ಲಿ ಹಾಗೂ ಒಂದು ಕಡೆ ನೆಲದ ಮೇಲೆ ಮೃತದೇಹದ ಅವಶೇಷಗಳು ಸಿಕ್ಕಿವೆ.

ಡಿ. ವೀರೇಂದ್ರ ಹೆಗ್ಗಡೆ 

‘‘ಸತ್ಯ ಹೊರಗೆ ಬರುತ್ತಿದೆ. ಎಲ್ಲವನ್ನೂ ತೊಳೆದಿಟ್ಟಂತಾಗಿದೆ. ಬಹಳ ಸಂತೋಷವಾಯಿತು. ಜನರ ಅಭಿಮಾನ, ಪ್ರೀತಿ ವಿಶ್ವಾಸ ಹೀಗೆಯೇ ಇರಲಿ. ಎಲ್ಲರಿಗೂ ಧನ್ಯವಾದ‘‘

–ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ ಕ್ಷೇತ್ರ

–––––––––––

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.