ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಶೋಧ ಕಾರ್ಯ ಶುಕ್ರವಾರವೂ ಮುಂದುವರಿದಿದೆ.
ಈ ಪ್ರಕರಣದ ಸಾಕ್ಷಿ ದೂರುದಾರ ಕಾಡಿನಲ್ಲಿ ತೋರಿಸಿದ ಏಳನೇ ಜಾಗವನ್ನು ಆತನ ಸಮ್ಮುಖದಲ್ಲಿ ವಿಶೇಷ ತನಿಖಾ ತಂಡದವರು (ಎಸ್ಐಟಿ) ಅಗೆಯಿಸುತ್ತಿದ್ದಾರೆ. ಎಸ್ಐಟಿ ಈ ಸಲುವಾಗಿ ತಂಡದ ಜೊತೆ ಸುಮಾರು 20 ಕಾರ್ಮಿಕರು ಹಾರೆ ಪಿಕಾಸಿಯೊಂದಿಗೆ ಕಾಡಿನ ಒಳಗೆ ತೆರಳಿದ್ದಾರೆ. ಅಗೆಯಲು ಯಂತ್ರವನ್ನು ಕಾಡಿನೊಳಗೆ ಕೊಂಡೊಯ್ಯಲಾಗಿದೆ
'ಸಾಕ್ಷಿ ದೂರುದಾರ ತೋರಿಸಿರುವ ಏಳನೇ ಜಾಗದಲ್ಲಿ ಇದುವರೆಗೆ ಮೃತದೇಹದ ಯಾವುದೇ ಕುರುಹು ಕಂಡುಬಂದಿಲ್ಲ' ಎಂದು ಎಸ್ಐಟಿ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.
'ಸಾಕ್ಷಿ ದೂರುದಾರ, ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದಾರೆ.
ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಪಕ್ಕದಲ್ಲಿ ಸಾಕ್ಷಿ ದೂರುದಾರ ಗುರುವಾರದವರೆಗೆ ಒಟ್ಟು 13 ಜಾಗಗಳನ್ನು ತೋರಿಸಿ, ಅಲ್ಲಿ ಮೃತದೇಹಗಳನ್ನು ಹೂತಿದ್ದೆ ಎಂದು ಎಸ್ಐಟಿಗೆ ತಿಳಿಸಿದ್ದ. ಅವುಗಳಲ್ಲಿ ಒಟ್ಟು ಆರು ಜಾಗಗಳನ್ನು ಅಗೆಯಲಾಗಿದೆ. ಆತ ತೋರಿಸಿದ್ದ ಆರನೇ ಜಾಗದಲ್ಲಿ ಗುರುವಾರ ಗಂಡಸಿನ ಮೃತದೇಹದ ಅವಶೇಷ ಸಿಕ್ಕಿತ್ತು. ಉಳಿದ ಐದು ಕಡೆ ಯಾವುದೇ ಅವಶೇಷ ಸಿಕ್ಕಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.