ADVERTISEMENT

Dharmasthala Case | 10 ವರ್ಷದ ಹಿಂದೆ ಬಾಲಕಿ ನಾಪತ್ತೆ: ಎಸ್‌ಐಟಿಗೆ ದೂರು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 23:30 IST
Last Updated 14 ಆಗಸ್ಟ್ 2025, 23:30 IST
ಧರ್ಮಸ್ಥಳದಲ್ಲಿ ಸಾಕ್ಷಿ ದೂರುದಾರ ಉಳಿದುಕೊಂಡಿದ್ದ ಎನ್ನಲಾದ ಸ್ಥಳದ ಮಹಜರು ಕಾರ್ಯ ಗುರುವಾರ ನಡೆಯಿತು
ಧರ್ಮಸ್ಥಳದಲ್ಲಿ ಸಾಕ್ಷಿ ದೂರುದಾರ ಉಳಿದುಕೊಂಡಿದ್ದ ಎನ್ನಲಾದ ಸ್ಥಳದ ಮಹಜರು ಕಾರ್ಯ ಗುರುವಾರ ನಡೆಯಿತು   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ), ಬಂಟ್ವಾಳ ತಾಲ್ಲೂಕಿನ ಕಾವಳ ಮೂಡೂರು ಗ್ರಾಮದ ಬಾಲಕಿಯೊಬ್ಬಳು  2012ರಲ್ಲಿ ನಾಪತ್ತೆಯಾದ ಬಗ್ಗೆ ಗುರುವಾರ ದೂರು ಸಲ್ಲಿಕೆ ಆಗಿದೆ. 

ಬಾಲಕಿ ಹೇಮಾವತಿಯ ಅಣ್ಣ ನಿತಿನ್‌ ದೇವಾಡಿಗ ಅವರು ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತೆರಳಿ ದೂರು ನೀಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಮ್ಮ ತಂಗಿ ಧರ್ಮಸ್ಥಳಕ್ಕೆ ಹೋಗುತ್ತೇನೆ ಎಂದು ಹೇಳಿ 10 ವರ್ಷ ಹಿಂದೆ ಮನೆ ಸಮೀಪದ ಮಹಿಳೆಯೊಬ್ಬರ ಜೊತೆ ಹೋಗಿದ್ದವಳು ಇವರೆಗೂ ಮನೆಗೆ ಮರಳಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ ಅವರು ದೂರು ಸ್ವೀಕರಿಸಿಲ್ಲ. ದೂರು ನೀಡಿದ ಕುರಿತ ದಾಖಲಾತಿಗಳೂ ಈಗ  ನಮ್ಮಲ್ಲಿ ಇಲ್ಲ. ಕಾಣೆಯಾದಾಗ ತಂಗಿಗೆ 17 ವರ್ಷ’ ಎಂದು  ಮಾಹಿತಿ ನೀಡಿದರು.

‘ಧರ್ಮಸ್ಥಳಕ್ಕೆ ತೆರಳಿದ್ದಾಗ ಕಾಣೆಯಾಗಿರುವವರ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳುವಂತೆ ಎಸ್‌ಐಟಿಯವರು ಪ್ರಕಟಣೆ ನೀಡಿದ್ದಾರೆ. ಹಾಗಾಗಿ ಎಸ್‌ಐಟಿ ಕಚೇರಿಗೆ ಬಂದು ದೂರು ನೀಡಿದ್ದೇವೆ. ತಂಗಿ ಏನಾದಳು, ಆಕೆಗೆ ಏನಾದರೂ ಹೆಚ್ಚು ಕಮ್ಮಿ ಆಗಿದೆಯೇ ಎಂಬುದು ನಮಗೆ ಗೊತ್ತಾಗಬೇಕು. ಮಗಳನ್ನು ಕಳೆದುಕೊಂಡ ನಮ್ಮ ತಾಯಿ ಈಗಲೂ ಕೊರಗುತ್ತಿದ್ದಾರೆ. ಆ ಚಿಂತೆಯಲ್ಲೇ ಮಾನಸಿಕ ಸಮಸ್ಯೆಗೆ ಒಳಗಾಗಿದ್ದಾರೆ’ ಎಂದರು.

ADVERTISEMENT

‘ತಂಗಿ ಎಂಟನೇ ತರಗತಿವರೆಗೆ ಕಲಿತಿದ್ದಳು. ಬಳಿಕ ಓದನ್ನು ಅರ್ಧದಲ್ಲೇ ತ್ಯಜಿಸಿ, ಮನೆಯಲ್ಲಿ ಬೀಡಿ ಕಟ್ಟುತ್ತಿದ್ದಳು. ಆಕೆ ಬಳಿ ಮೊಬೈಲ್ ಇರಲಿಲ್ಲ. ಆಕೆಯನ್ನು ಕರೆದೊಯ್ದಿದ್ದ ಮನೆಯ ಸಮೀಪದ ಮಹಿಳೆ ನನಗೆ ಫೋನ್‌ ಮಾಡಿ, ‘ತಂಗಿಯನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ’ ಎಂದು ತಿಳಿಸಿದ್ದರು. ಆ ಮಹಿಳೆ ಅಲ್ಲಿಂದ ಮರಳಿದ ಬಳಿಕ ತಂಗಿಯ ಸುಳಿವಿಲ್ಲ. ಆ ಮಹಿಳೆ ಬಳಿ ವಿಚಾರಿಸಿದಾಗ, ‘ನನಗೆ ಏನೂ ಗೊತ್ತಿಲ್ಲ’ ಎಂದೇ ಹೇಳಿದ್ದರು. ಅವರು ಈಗ ನಮ್ಮ ಜೊತೆ ಮಾತನಾಡುತ್ತಿಲ್ಲ’ ಎಂದು ತಿಳಿಸಿದ್ದಳು. ನಿತಿನ್ ಅವರ ಸೋದರ ನಿತೇಶ್‌ ದೇವಾಡಿಗ ಕೂಡಾ ಜೊತೆಯಲ್ಲಿದ್ದರು.

‘ಸಹೋದರಿಯು ಧರ್ಮಸ್ಥಳ ದೇವಸ್ಥಾನಕ್ಕೆ 2012ರಲ್ಲಿ ತೆರಳಿದ್ದು, ಬಳಿಕ ಮನೆಗೆ ಹಿಂತಿರುಗಿಲ್ಲ. ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿ ಎಂದು ನಿವಾಸಿ ನಿತಿನ್ ದೇವಾಡಿಗ ಅವರು ಪುಂಜಾಲಕಟ್ಟೆ ಪೊಲೀಸ್‌ ಠಾಣೆಗೂ ದೂರು ನೀಡಿದ್ದಾರೆ. 

ಹೊಸ ಜಾಗದಲ್ಲಿ ಶೋಧ:

ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರ  ಕನ್ಯಾಡಿ ಬಳಿ ನೇತ್ರಾವತಿ ನದಿ ಪಕ್ಕದಲ್ಲಿ ಹೊಸ ಜಾಗವನ್ನು ಗುರುವಾರ ಎಸ್‌ಐಟಿ ಅಧಿಕಾರಿಗಳಿಗೆ ತೋರಿಸಿದ್ದು, ಅಲ್ಲಿ ನಡೆದ ಶೋಧ ಕಾರ್ಯದಲ್ಲೂ ಮೃತದೇಹದ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಗೊತ್ತಾಗಿದೆ.

ಸ್ನಾನಘಟ್ಟದ ಪಕ್ಕದಲ್ಲಿ ಹರಿಯುವ ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿ ಈ ಜಾಗ ಇದೆ. ಉಜಿರೆ– ಧರ್ಮಸ್ಥಳ ರಸ್ತೆಯಿಂದ ಸುಮಾರು 1 ಕಿ.ಮೀ ದೂರವನ್ನು ಕಿರಿದಾದ ರಸ್ತೆಯಲ್ಲಿ ಕ್ರಮಿಸಿ ಈ ಜಾಗವನ್ನು ತಲುಪಬೇಕಿದೆ.

ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‌ ಹಾಗೂ ಎಸ್‌ಐಟಿ ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿದ್ದರು. ನೆಲವನ್ನು ಅಗೆಯುವ ಯಂತ್ರವನ್ನೂ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು. ಈ ಜಾಗಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿತ್ತು.

ಸಾಕ್ಷಿ ದೂರುದಾರ ಇದುವರೆಗೆ ಶವಗಳನ್ನು ಹೂತಿರುವುದಾಗಿ ಹೇಳಿ 18 ಜಾಗಗಳನ್ನು ತೋರಿಸಿದ್ದು, ಅವುಗಳಲ್ಲಿ ಶೋಧ ನಡೆಸಿದಾಗ ಎರಡು ಕಡೆ ಮೃತದೇಹದ ಅವಶೇಷ ಪತ್ತೆಯಾಗಿವೆ. ಒಂದು ಕಡೆ (ಸಾಕ್ಷಿ ದೂರುದಾರ ತೋರಿಸಿದ 11ನೇ ಜಾಗಕ್ಕಿಂತ 100 ಮೀ ದೂರದಲ್ಲಿದ್ದ ಜಾಗ)  ನೆಲದ ಮೇಲೆಯೇ ಮೃತದೇಹ ಸಿಕ್ಕಿತ್ತು. ಒಟ್ಟು 17 ಜಾಗಗಳಲ್ಲಿ ಎಸ್‌ಐಟಿಯವರು ನೆಲವನ್ನು ಅಗೆದು ಶೋಧ ನಡೆಸಿದ್ದಾರೆ.

ಸಾಕ್ಷಿ ದೂರುದಾರ ವಾಸವಾಗಿದ್ದ ಸ್ಥಳ ಮಹಜರು
ಸಾಕ್ಷಿ ದೂರುದಾರ ವ್ಯಕ್ತಿ ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ವಾಸವಾಗಿದ್ದಾಗ ಆತ ಉಳಿದುಕೊಂಡಿದ್ದ ಎನ್ನಲಾದ ಜಾಗದಲ್ಲಿ ಎಸ್‌ಐಟಿಯವರು ಗುರುವಾರ ಮಹಜರು ನಡೆಸಿದರು. ಧರ್ಮಸ್ಥಳದ ಮಾಹಿತಿ ಕೇಂದ್ರದ ಸಮೀಪದಲ್ಲಿ ಕೊಠಡಿಯೊಂದರಲ್ಲಿ ಸಾಕ್ಷಿ ದೂರುದಾರ 10 ವರ್ಷಗಳ ಹಿಂದೆ ವಾಸವಾಗಿದ್ದ. ಅಲ್ಲಿಗೆ ಆತನನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.