ADVERTISEMENT

ಯಾವ ತಪ್ಪು ಮಾಡದ ನನ್ನ ಮೇಲೆ ಏಕಿಷ್ಟು ಕೋಪ..? ವೀರೇಂದ್ರ ಹೆಗ್ಗಡೆ ಪ್ರಶ್ನೆ

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರಶ್ನೆ * ಧರ್ಮಸ್ಥಳ ಊರ ಜನರಿಂದ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ *

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 2:47 IST
Last Updated 27 ಸೆಪ್ಟೆಂಬರ್ 2025, 2:47 IST
<div class="paragraphs"><p>ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ&nbsp;ವೀರೇಂದ್ರ ಹೆಗ್ಗಡೆ ಮಾತನಾಡಿದರು.&nbsp;ಡಿ.ಹರ್ಷೇಂದ್ರ ಕುಮಾರ್ ಹೇಮಾವತಿ ವೀ.ಹೆಗ್ಗಡೆ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅನಿತಾ ಸುರೇಂದ್ರ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು</p></div>

ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾತನಾಡಿದರು. ಡಿ.ಹರ್ಷೇಂದ್ರ ಕುಮಾರ್ ಹೇಮಾವತಿ ವೀ.ಹೆಗ್ಗಡೆ ಸುಪ್ರಿಯಾ ಹರ್ಷೇಂದ್ರ ಕುಮಾರ್ ಅನಿತಾ ಸುರೇಂದ್ರ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು

   

ಉಜಿರೆ (ದಕ್ಷಿಣ ಕನ್ನಡ): ‘ಯಾವ ತಪ್ಪು ಮಾಡದೆ, ಯಾರನ್ನೂ ನೋಯಿಸದೆ ಕರ್ತವ್ಯ ನಿಭಾಯಿಸುತ್ತ ಬಂದಿದ್ದೇನೆ. ನನ್ನ ಮೇಲೆ ಕೆಲವರು ಏಕೆ ದ್ವೇಷ ಕಾರುತ್ತಿದ್ದಾರೆ? ಏಕೆ ನಿಷ್ಠುರವಾಗಿ ವರ್ತಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ’ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಧರ್ಮಸ್ಥಳದಲ್ಲಿ ಊರ ಜನರು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಶ್ರೀ ಮಂಜುನಾಥಸ್ವಾಮಿ ಸನ್ನಿಧಿ ಹಾಗೂ ಅಣ್ಣಪ್ಪಸ್ವಾಮಿ ಬೆಟ್ಟದ ಎದುರು ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಅವರು ಮಾತನಾಡಿದರು.

ADVERTISEMENT

‘ಕೆಲ ವಿಷಯಗಳ ಹಿಂದೆ ಏನೆಲ್ಲ ಇದೆ, ಯಾಕೆ ಏಕೆ ಇದೆ ಎಂಬುದು ತಿಳಿದಿದೆ. ಆದರೆ ಕೋಪ ಯಾಕೆ ಎಂಬುದು ತಿಳಿದಿಲ್ಲ. ಬೆಂಬಿಡದೆ ಕಾಡುವ ಬೇತಾಳನಂತೆ ಅಪಚಾರಗಳು ಬಂದಾಗ ಊರ ಜನರು, ಕ್ಷೇತ್ರದ ಭಕ್ತರು ತೋರಿದ ಪ್ರೀತಿ, ವಿಶ್ವಾಸ ನನ್ನ ಜೀವಂತವಾಗಿರಿಸಿದೆ’ ಎಂದರು. 

‘ಬಹಳ ಮಂದಿ ನಿರಂತರವಾಗಿ ಬೈದರು. ಆದರೆ ಯಾಕೆ ಬೈಯುತ್ತಿದ್ದಾರೆ ಎಂದು ಹೇಳಲೇ ಇಲ್ಲ. ತಪ್ಪು ಮಾಡಲಿಲ್ಲ, ಯಾರನ್ನೂ ಹೀಯಾಳಿಸಿಲ್ಲ ಎಂಬ ಆತ್ಮವಿಶ್ವಾಸ ಮತ್ತು ಊರವರು ಇರಿಸಿದ ನಂಬಿಕೆಯಿಂದ ನಿಶ್ಚಿಂತನಾಗಿದ್ದೇನೆ’ ಎಂದೂ ಹೇಳಿದರು.   

ವಿಶೇಷ ಪೂಜೆ, ಪ್ರಾರ್ಥನೆ: ಕ್ಷೇತ್ರದ ವಿರುದ್ಧದ ಅಪಪ್ರಚಾರ ಇಲ್ಲದಾಗಬೇಕು ಎಂದು ನಾಗರಿಕರು ದೇವಸ್ಥಾನದ ಎದುರು ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಣ್ಣಪ್ಪಸ್ವಾಮಿ ಬೆಟ್ಟದ ಬಳಿಯೂ ಪ್ರಾರ್ಥಿಸಿದರು.

ಅಮೃತವರ್ಷಿಣಿ ಸಭಾಭವನಕ್ಕೆ ಮೆರವಣಿಗೆಯಲ್ಲಿ ತೆರಳಿ ಸಾಮೂಹಿಕ ಲಲಿತಾ ಪಂಚಾಕ್ಷರಿ ಪಠಣ ಮಾಡಿದರು. ಮಹಿಳೆಯರಿಗೆ ಬಾಗಿನ ನೀಡಿ ಗೌರವಿಸಲಾಯಿತು.

ಜಮಾ ಉಗ್ರಾಣದ ಬಿ. ಭುಜಬಲಿ ಕಾರ್ಯಕ್ರಮ ಉದ್ಘಾಟಿಸಿದರು. ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರದ್ಧಾ ಅಮಿತ್, ನಂದೀಶ್, ಮೈತ್ರಿ ನಂದೀಶ್, ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ, ಧರ್ಮಸ್ಥಳ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಧರ್ಮಸ್ಥಳ ಕ್ಷೇತ್ರ ವಿರುದ್ಧದ ಅಪಪ್ರಚಾರ ಇಲ್ಲದಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಲಾಯಿತು
ಎಸ್‌ಐಟಿ ತನಿಖೆಯ ಕಾರ್ಯ ಅರ್ಧ ಮುಗಿದಿದೆ. ಎತ್ತರದಲ್ಲಿ ನಿಂತ ನೀರು ಹೇಗೆ ಕೆಳಗೆ ಹರಿದು ಹೋಗುತ್ತದೆಯೋ ಅದೇ ರೀತಿ ಅಪವಾದಗಳು ಇಳಿದುಹೋಗುತ್ತಿವೆ
ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ ಧರ್ಮಸ್ಥಳ ಕ್ಷೇತ್ರ

‘ಸರ್ಕಾರಕ್ಕೆ ಕೃತಜ್ಞ...’

‘ಎಸ್‌ಐಟಿ ತನಿಖೆ ಪ್ರಗತಿಯಲ್ಲಿರುವಾಗ ಯಾವ ಬಗೆಯ ಹೇಳಿಕೆಯನ್ನೂ ನೀಡಬೇಡಿ ಎಂದು ವಕೀಲರು ತಿಳಿಸಿದ್ದರು. ಈಗ ನಿರ್ಭಯನಾಗಿರುವುದರಿಂದ ಮಾತನಾಡುತ್ತಿದ್ದೇನೆ. ಎಸ್‌ಐಟಿ ರಚಿಸಿದ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ’ ಎಂದ ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ‘ಧರ್ಮಸ್ಥಳದಲ್ಲಿ ಕೆಟ್ಟ ಕೆಲಸಗಳು ನಡೆಯಲು ಸಾಧ್ಯವೇ ಇಲ್ಲ ಎಂದು ಭಕ್ತರು ಸ್ವಾಮೀಜಿಗಳು ಹೇಳಿದ್ದಾರೆ. ತಪ್ಪು ಮಾಡಿದವರನ್ನು  ಮಂಜುನಾಥಸ್ವಾಮಿ ಮತ್ತು ಅಣ್ಣಪ್ಪಸ್ವಾಮಿ ನೋಡಿಕೊಳ್ಳುತ್ತಾರೆ’ ಎಂದರು. ‘ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸೇವೆಯಲ್ಲಿ ಪ್ರಚಾರದ ಉದ್ದೇಶ ಇಲ್ಲ. ನಿಸ್ವಾರ್ಥ ಸೇವೆ ಸಲ್ಲಿಸಿದ್ದು ನನ್ನ ಆರೋಗ್ಯ ಚೆನ್ನಾಗಿದೆ. ಕ್ಷೇತ್ರದಿಂದ ನಡೆಯುವ ಎಲ್ಲ ಕಾರ್ಯಗಳು ಸಮಾಜದ ಗಮನ ಸೆಳೆದಿವೆ. ಎಲ್ಲರೂ ಸೇರಿ ಮಾಡಿದ ಕಾರ್ಯಗಳಿಗೆ ನಾನು ನೆಪ ಮಾತ್ರ. ಇಲ್ಲಿ ಊರವರು ಬೇರೆ ಧರ್ಮಸ್ಥಳ ಬೇರೆ ಎಂಬ ಬೇಧವಿಲ್ಲ. ಎಲ್ಲವೂ ನಮ್ಮದು ಎಂಬ ಭಾವನೆ ಎಲ್ಲರಲ್ಲೂ ಇದೆ. ಇಂಥ ವಾತಾವರಣದಲ್ಲಿ ಮಾಡಿದ ಕರ್ತವ್ಯವೇ ಕೈಲಾಸ’ ಎಂದು ಅವರು ಭಾವುಕರಾದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.