ಮಂಗಳೂರು: ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುವ ಹೇಳಿಕೆ, ಸಾಮಾಜಿಕ ಮಾಧ್ಯಮಗಳ ವರದಿಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ದೂರಿನ ಆಧಾರದಲ್ಲಿ ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ಎಸ್ಐಟಿ ಶೋಧ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳನ್ನು ಹರಿದು ಬಿಡುವವರು ತನಿಖೆ ಹೇಗೆ ನಡೆಯಬೇಕು ಎಂದು ನಿರ್ದೇಶಿಸುವ, ಅಂತಿಮ ತೀರ್ಪು ನೀಡುವಂಥ ಅತಿರೇಕದ ವರ್ತನೆ ತೋರುತ್ತಿದ್ದಾರೆ. ಇದನ್ನು ನಿಯಂತ್ರಿಸಲೇ ಬೇಕು ಎಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ವತಿಯಿಂದ ರಾಜ್ಯದ ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ, ಕೆರೆ ಅಭಿವೃದ್ಧಿ, ರುದ್ರಭೂಮಿಗಳ ನವೀಕರಣ, ಸ್ತ್ರೀ ಸಬಲೀಕರಣ, ಮದ್ಯ ವಿರೋಧಿ ಶಿಬಿರ ಮೊದಲಾದ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ. ಇಂತಹ ಕ್ಷೇತ್ರದ ಬಗ್ಗೆ ಪೂರ್ವಾಗ್ರಹ ಪೀಡಿತ ಮನಸ್ಥಿತಿಯವರು ಅಪಪ್ರಚಾರ ನಡೆಸುತ್ತಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿ ಭಕ್ತರು ಸಹನೆ ಕಳೆದುಕೊಳ್ಳಲು ಕಾರಣವಾಗುತ್ತಿದೆ. ಬೇರೆ ಧರ್ಮದ ಶ್ರದ್ಧಾಕೇಂದ್ರಗಳ ವಿರುದ್ಧ ಇಂಥ ಕುಪ್ರಚಾರ ನಡೆದಿದ್ದರೆ ಏನೇನು ಸಂಭವಿಸುತ್ತಿತ್ತು ಎಂದು ಪ್ರಶ್ನಿಸಿರುವ ಅವರು ಕುತಂತ್ರ ಮುಂದುವರಿದರೆ ಹಿಂದೂಗಳು ಎದ್ದು ನಿಲ್ಲಲಿದ್ದಾರೆ. ನಂತರ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.
ಎಡಪಂಥೀಯರು ಹಾಗೂ ಹಿಂದೂ ವಿರೋಧಿ ಶಕ್ತಿಗಳು ಒಟ್ಟು ಸೇರಿ ರಾಮಸೇತು, ತಿರುಪತಿ, ಕಾಶಿ, ಶಬರಿಮಲೆ, ಅನಂತಪದ್ಮನಾಭ ದೇವಸ್ಥಾನ ಸೇರಿದಂತೆ ಹಿಂದೂ ಶ್ರದ್ಧಾಕೇಂದ್ರಗಳ ವಿರುದ್ಧ ಈ ಹಿಂದೆ ಷಡ್ಯಂತರ ರೂಪಿಸಿದ್ದರು. ಈಗ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡಿದ್ದಾರೆ. ತನಿಖೆಯಲ್ಲಿ ಸತ್ಯಾಂಶ ಹೊರಬಂದು ಶ್ರೀಕ್ಷೇತ್ರದ ಕಡೆಯಿಂದ ಲೋಪವಾಗಿಲ್ಲ ಎಂದು ಬಹಿರಂಗವಾದರೆ ತೇಜೋವಧೆ ಮಾಡಿ ಭಕ್ತರ ನಂಬಿಕೆಯನ್ನು ಘಾಸಿಗೊಳಿಸಿದವರ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರ್ಕಾರ ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.