ADVERTISEMENT

₹1.06 ಕೋಟಿ ತೆರಿಗೆ ವಸೂಲಿ ಮಾಡಿದ ಧರ್ಮಸ್ಥಳ ಪಂಚಾಯಿತಿ: ಉಪಾಧ್ಯಕ್ಷ ಶ್ರೀನಿವಾಸ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 6:03 IST
Last Updated 10 ಜುಲೈ 2025, 6:03 IST
ಧರ್ಮಸ್ಥಳದ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾಹಿತಿ ನೀಡಿದರು
ಧರ್ಮಸ್ಥಳದ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾಹಿತಿ ನೀಡಿದರು   

ಉಜಿರೆ: ‘ಕಳೆದ ಆರ್ಥಿಕ ವರ್ಷದಲ್ಲಿ ₹ 1.06 ಕೋಟಿ ತೆರಿಗೆ ವಸೂಲಿ ಮಾಡಿದ ಧರ್ಮಸ್ಥಳ ಗ್ರಾಮ ಪಂಚಾಯಿತಿ ರಾಜ್ಯದಲ್ಲೆ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ಪಂಚಾಯಿತಿ ಎಂಬ ಗೌರವಕ್ಕೆ ಪಾತ್ರವಾಗಿದೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಹೇಳಿದರು.

ಧರ್ಮಸ್ಥಳದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರದಿಂದ ₹ 1.18 ಕೋಟಿ ಅನುದಾನ ಬಂದಿದೆ. ಪಂಚಾಯಿತಿ ನಿಧಿಯಡಿ ₹ 4.77 ಕೋಟಿಯ ಕಾಮಗಾರಿ ನಡೆಸಲಾಗಿದೆ. ಕಾಂಕ್ರೀಟ್‌ ರಸ್ತೆ, ತಡೆಗೋಡೆ, ಮೋರಿ ರಚನೆಗಾಗಿ ₹6.75 ಕೋಟಿ ಬಳಸಲಾಗಿದೆ ಎಂದರು.

ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಏಕಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮ ಎಂದು ಸರ್ಕಾರದಿಂದ ಮಾನ್ಯತೆ ಪಡೆದಿದೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಮುಳಿಕ್ಕಾರು ಬಳಿ ಇರುವ ಹೊಳೆಯಿಂದ ₹ 26.15 ಕೋಟಿ ವೆಚ್ಚದಲ್ಲಿ ಧರ್ಮಸ್ಥಳ ದೇವಸ್ಥಾನ ಮತ್ತು ಗ್ರಾಮದ ನಿವಾಸಿಗಳಿಗೆ ನೀರು ಸರಬರಾಜು ಸೌಲಭ್ಯ ಕಲ್ಪಿಸಲಾಗಿದೆ. ಅಶೋಕನಗರ ಮತ್ತು ಮುಳಿಕ್ಕಾರು ಅಭಿವೃದ್ಧಿಗೆ ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ನಿಧಿಯಿಂದ ₹ 2.91 ಕೋಟಿ ಮೀಸಲಿಟ್ಟಿದ್ದಾರೆ ಎಂದರು.

ADVERTISEMENT

ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ 26,020 ಪುಸ್ತಕಗಳಿದ್ದು, 4,740 ಮಂದಿ ಸದಸ್ಯತ್ವ ಹೊಂದಿದ್ದಾರೆ.
ಅಶೋಕನಗರದಲ್ಲಿರುವ ಪರಿಶಿಷ್ಟ ಜಾತಿ, ಪಂಗಡದ ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಬಗ್ಗೆ ಪ್ರಸಾರವಾಗುತ್ತಿರುವ ವರದಿ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ, ‘ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ, ಜಾರಿ ಬಿದ್ದು ಸಾವು, ನೆರೆ ನೀರಿನಲ್ಲಿ ಕೊಚ್ಚಿ ಹೋಗುವುದು, ನೇಣು ಹಾಕಿಕೊಂಡು ಆತ್ಮಹತ್ಯೆ, ಅನಾಥ ಶವ ಪತ್ತೆ ಮೊದಲಾದ ಅಸಹಜ ಪ್ರಕರಣಗಳಾದಾಗ ಮೊದಲು ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಅವರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿ, ವಾರಸುದಾರರು ಇದ್ದರೆ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ನೀಡುತ್ತಾರೆ. ಅಸಹಜ ಸಾವು ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರ ಅನುಮತಿಯೊಂದಿಗೆ ಸಾರ್ವಜನಿಕ ರುದ್ರಭೂಮಿಯಲ್ಲಿ ಶವದ ದಫನ ಮಾಡಲಾಗುತ್ತದೆ’ ಎಂದರು.

‘ಶವಸಂಸ್ಕಾರದ ವಿಧಿ-ವಿಧಾನಗಳನ್ನು ಗ್ರಾಮಪಂಚಾಯಿತಿ ವತಿಯಿಂದ ನೇಮಕಗೊಂಡ ಅಧಿಕೃತ ಸಫಾಯಿ ಕರ್ಮಚಾರಿಗಳೇ ನಡೆಸುತ್ತಾರೆ. ಇದರ ವೆಚ್ಚವನ್ನೂ ಗ್ರಾಮ ಪಂಚಾಯಿತಿ ಭರಿಸುತ್ತದೆ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ನಿರ್ವಹಿಸುತ್ತಿದ್ದು, ಆಡಿಟ್ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗುತ್ತದೆ’ ಎಂದು ವಿವರ ನೀಡಿದರು.

‘ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಮಾಹಿತಿ ಧರ್ಮಸ್ಥಳ ದೇವಸ್ಥಾನ, ಗ್ರಾಮ ಹಾಗೂ ಗ್ರಾಮಸ್ಥರಿಗೂ ಕಪ್ಪು ಚುಕ್ಕೆಯಾಗಿದೆ’ ಎಂದ‌ರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ಶ್ರೀನಿವಾಸ ರಾವ್, ಪಿಡಿಒ ದಿನೇಶ್, ಲೆಕ್ಕ ಸಹಾಯಕಿ ಪ್ರಮೀಳಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.