ADVERTISEMENT

ಬಡವರ ಬದುಕಿಗೆ ನೆರವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸಂಜೀವ ಮಠಂದೂರು

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 2:41 IST
Last Updated 21 ಜನವರಿ 2026, 2:41 IST
ಉಪ್ಪಿನಂಗಡಿ ವಲಯದ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ವಾರ್ಷಿಕೋತ್ಸವದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು
ಉಪ್ಪಿನಂಗಡಿ ವಲಯದ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ವಾರ್ಷಿಕೋತ್ಸವದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು   

ಉಪ್ಪಿನಂಗಡಿ: ಬಡವರ, ಜನ ಸಾಮಾನ್ಯರ ಬದುಕಿನಲ್ಲಿ ಧರ್ಮಸ್ಥಳ ಕ್ಷೇತ್ರದ ಸೇವೆ ಮಹತ್ತರವಾಗಿದೆ. ಬಡವರು‌, ಮಹಿಳೆಯರು ಸ್ವಾವಲಂಬಿಗಳಾಗಲು, ಅವರಲ್ಲಿ ನೆಮ್ಮದಿ ಮೂಡಿಸಲು ವೀರೇಂದ್ರ ಹೆಗ್ಗಡೆ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಸಂಜೀವ ಮಠಂದೂರು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಪ್ಪಿನಂಗಡಿ ವಲಯದ ದುರ್ಗಾಗಿರಿ ಮತ್ತು ರಾಮನಗರ ಒಕ್ಕೂಟಗಳ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ಪುತ್ತೂರು ತಾಲ್ಲೂಕಿನಲ್ಲಿ ಧರ್ಮಸ್ಥಳ ಕ್ಷೇತ್ರದ ಯೋಜನೆ ಆರಂಭವಾಗಿ ಮುಂದಿನ ವರ್ಷಕ್ಕೆ 25 ವರ್ಷ ಆಗುತ್ತಿದ್ದು, ಇದನ್ನು ಅರ್ಥಪೂರ್ಣವಾಗಿಸಲು ಉಪ್ಪಿನಂಗಡಿಯಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಯೋಜನೆ ರೂಪಿಸಬೇಕು ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಕಾಂಚನ-ಪೆರ್ಲ ಷಣ್ಮುಖ ದೇವಸ್ಥಾನದ ಮೊಕ್ತೇಸರ ಧನ್ಯಕುಮಾರ್ ರೈ ಮಾತನಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಿಂದ ನಾಡಿನಾದ್ಯಂತ ಬಡಜನರ ಬದುಕು ಸಮೃದ್ಧಿಯಾಗಿದೆ ಎಂದರು.

ಯೋಜನಾಧಿಕಾರಿ ಶಶಿಧರ್ ಎಂ.ಮಾತನಾಡಿ, ಸಮಾಜದಲ್ಲಿ ಕೆಲವೊಂದು ಶಕ್ತಿಗಳು ಕ್ಷೇತ್ರದ ಬಗ್ಗೆ ಅಪಚಾರದಲ್ಲಿ ತೊಡಗಿದೆ. ಕ್ಷೇತ್ರದ ಭದ್ರತೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ನೀಡುತ್ತಿವೆ. ಈ ವ್ಯವಹಾರದ ಲಾಭಾಂಶವನ್ನು ಟ್ರಸ್ಟ್ ಪಡೆದುಕೊಂಡು ಸ್ವಸಹಾಯ ಸಂಘಗಳಿಗೂ ವಿತರಿಸುತ್ತಿದೆ. ಸಾಮಾಜಿಕ ಕಾರ್ಯಗಳಿಗೂ ಸಹಾಯಧನದ ಮೂಲಕ ಸ್ಪಂದಿಸುತ್ತಿದೆ ಎಂದರು.

ದುರ್ಗಾಗಿರಿ ಒಕ್ಕೂಟದ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಸುವರ್ಣ, ವೈದ್ಯರಾದ ಡಾ.ನಿರಂಜನ್ ರೈ, ಡಾ.ರಾಜಾರಾಮ್, ರಾಮನಗರ ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ, ಒಕ್ಕೂಟಗಳ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷೆ ಉಷಾಚಂದ್ರ ಮುಳಿಯ ಮಾತನಾಡಿದರು. ಶ್ರೀರಾಮ ಭಟ್ ಪಾತಾಳ, ಕಂಗ್ವೆ ವಿಶ್ವನಾಥ ಶೆಟ್ಟಿ, ವೆಂಕಟ್ರಮಣ ಭಟ್ ಭಾಗವಹಿಸಿದ್ದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರಾದ ಆನಂದ, ಸುಂದರ, ಸಾಮಾಜಿಕ ಕಾರ್ಯಕರ್ತರಾದ ಎನ್.ಉಮೇಶ್ ಶೆಣೈ, ಹರಿರಾಮಚಂದ್ರ, ಹೊನ್ನಪ್ಪ ಗೌಡ ವರೆಕ್ಕಾ, ಮೆಸ್ಕಾಂ ಸಿಬ್ಬಂದಿ ಭೀಮಣ್ಣ ಬಿರಾದಾರ್, ಹನುಮಂತ, ಜಯಂತ್ ಕುಮಾರ್, ಸೇವಾ ನಿರತರಾದ ಉಷಾ, ರಕ್ಷಿತಾ ಅವರನ್ನು ಗೌರವಿಸಲಾಯಿತು. ಯೋಜನೆಯ ಬೇಬಿ ಲೋಕೇಶ್ ಓನಡ್ಕ ಸ್ವಾಗತಿಸಿ, ಶ್ಯಾಮಿಲಿ ಉಮೇಶ್ ವಂದಿಸಿದರು. ಜಗದೀಶ್ ಬಾರಿಕೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.