ADVERTISEMENT

ಧರ್ಮಸ್ಥಳ: ಫೆ. 26ರಂದು ಶಿವರಾತ್ರಿ ವೈಭವ

ಆರ್.ಎನ್.ಪೂವಣಿ
Published 23 ಫೆಬ್ರುವರಿ 2025, 0:36 IST
Last Updated 23 ಫೆಬ್ರುವರಿ 2025, 0:36 IST
ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಸ್ವಾಗತ ಕಚೇರಿ ಹಾಗೂ ಮಾಹಿತಿ ಕಚೇರಿ ಆರಂಭಿಸಲಾಗಿದೆ
ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದಲ್ಲಿ ಸ್ವಾಗತ ಕಚೇರಿ ಹಾಗೂ ಮಾಹಿತಿ ಕಚೇರಿ ಆರಂಭಿಸಲಾಗಿದೆ   

ಉಜಿರೆ (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಫೆ.26ರಂದು ಶಿವರಾತ್ರಿ ಆಚರಣೆ ನಡೆಯಲಿದೆ. ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಭಜನೆ, ಪ್ರಾರ್ಥನೆ, ಧ್ಯಾನದೊಂದಿಗೆ ಭಕ್ತರು ಉಪವಾಸ ಹಾಗೂ ಜಾಗರಣೆ ಮಾಡಲಿದ್ದಾರೆ. ಸಂಜೆ 6ರಿಂದ 27ರ ನಸುಕಿನವರೆಗೆ ದೇವಸ್ಥಾನದಲ್ಲಿ ಭಕ್ತರು ಶತರುದ್ರಾಭೀಷೇಕ ಹಾಗೂ ಎಳನೀರಿನ ಅಭಿಷೇಕ ನೆರವೇರಿಸುವರು. 27ರಂದು ಬೆಳಿಗ್ಗೆ ರಥೋತ್ಸವ ನಡೆಯಲಿದೆ.

ಮುಖ್ಯ ಪ್ರವೇಶದ್ವಾರದಲ್ಲಿ ಮಾಹಿತಿ ಕಚೇರಿ ತೆರೆಯಲಾಗಿದ್ದು, ಉಚಿತ ವೈದ್ಯಕೀಯ ಸೇವೆ ಲಭ್ಯವಿದೆ. ಪೊಲೀಸ್ ಹೊರ ಠಾಣೆ ಆರಂಭಿಸಲಾಗಿದ್ದು, ಕೆಎಸ್‌ಆರ್‌ಟಿಸಿಯು ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

ಪಾದಯಾತ್ರೆ: ಪ್ರತಿ ವರ್ಷದಂತೆ ಈ ಬಾರಿಯೂ ಧರ್ಮಸ್ಥಳಕ್ಕೆ ಸುಮಾರು ಐವತ್ತು ಸಾವಿರ ಪಾದಯಾತ್ರಿಗಳು ಬರಲಿದ್ದು, 30 ಸಾವಿರ ಮಂದಿ ಹೆಸರು ನೋಂದಾಯಿಸಿದ್ದಾರೆ. ಉಜಿರೆಯಲ್ಲಿರುವ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಧರ್ಮಸ್ಥಳದಲ್ಲಿ ಗಾಯತ್ರಿ, ಶರಾವತಿ, ರಜತಾದ್ರಿ, ಸಹ್ಯಾದ್ರಿ, ವೈಶಾಲಿ, ಸಾಕೇತ ಹಾಗೂ ಗಂಗೋತ್ರಿ ವಸತಿಛತ್ರಗಳಲ್ಲಿ ಪಾದಯಾತ್ರಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.

ADVERTISEMENT

ಎಸ್‌ಡಿಎಂ ಮೆಡಿಕಲ್ ಟ್ರಸ್ಟ್ ಆಶ್ರಯದಲ್ಲಿ ಚಾರ್ಮಾಡಿ, ಮುಂಡಾಜೆ, ಸೋಮಂತಡ್ಕ, ಕಲ್ಮಂಜ ಹಾಗೂ ಉಜಿರೆಯಲ್ಲಿ ತುರ್ತುಚಿಕಿತ್ಸಾ ಘಟಕಗಳ ಮೂಲಕ ಉಚಿತ ಚಿಕಿತ್ಸೆ ನೀಡಲಾಗುವುದು. ಬೂಡುಜಾಲು, ಮುಂಡಾಜೆ, ಉಜಿರೆ, ಚಾರ್ಮಾಡಿಯಲ್ಲಿ ಪಾದಯಾತ್ರಿಗಳಿಗೆ ತಂಗಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಊಟ ಮಾಡಿ ರಾತ್ರಿ ವಿಶ್ರಾಂತಿ ಪಡೆದು ಮರುದಿನ ಪಾದಯಾತ್ರೆ ಮುಂದುವರಿಸಬಹುದಾಗಿದೆ.

ಧರ್ಮಸ್ಥಳ ಪಾದಯಾತ್ರಿಗಳ ಸಂಘ: ಬೆಂಗಳೂರು, ಮೈಸೂರು, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತಿತರ ‘ಧರ್ಮಸ್ಥಳ ಪಾದಯಾತ್ರಿಗಳ ಸಂಘ’ದ ನೇತೃತ್ವದಲ್ಲಿ ಪಾದಯಾತ್ರಿಗಳು ಬರುತ್ತಿದ್ದಾರೆ. ಬಹುತೇಕ ಪಾದಯಾತ್ರಿಗಳು ಕೊಟ್ಟಿಗೆಹಾರ, ಚಾರ್ಮಾಡಿ, ಉಜಿರೆ ಹಾಗೂ ಕೊಕ್ಕಡ ತಲುಪಿ, 26ರಂದು ಬೆಳಿಗ್ಗೆ ಧರ್ಮಸ್ಥಳ ತಲುಪುತ್ತಾರೆ. ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ, ಬಳಿಕ ದೇವರ ದರ್ಶನ, ಸೇವೆ ಮಾಡಿ ರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಮಾಡುವರು.

ಅಂದು ಸಂಜೆ 6 ಗಂಟೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಆಶೀರ್ವಚನ ನೀಡಿ ಜಾಗರಣೆಗೆ ಚಾಲನೆ ನೀಡುವರು.

ಚಾರ್ಮಾಡಿ ಘಾಟಿ ಮೂಲಕ ಧರ್ಮಸ್ಥಳಕ್ಕೆ ಬರುತ್ತಿರುವ ಪಾದಯಾತ್ರಿಗಳು

Highlights -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.