ಪ್ರಾತಿನಿಧಿಕ ಚಿತ್ರ
ಮಂಗಳೂರು: ಧರ್ಮಸ್ಥಳ ಗ್ರಾಮ ಪಂಚಾಯಿತಿಯವರು 1987ರಿಂದ 2025 ಮಾರ್ಚ್‌ವರೆಗೆ ಗುರುತು ಪತ್ತೆಯಾಗದ ಒಟ್ಟು 279 ಮೃತದೇಹಗಳನ್ನು ವಿಲೇವಾರಿ ಮಾಡಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ 1987ರಿಂದ ಇಲ್ಲಿಯವರೆಗೆ ಎಷ್ಟು ಮೃತದೇಹಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಹೂಳಲಾಗಿದೆ ಎಂದು ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಪತ್ರಿಕೆ ವತಿಯಿಂದ ಮಾಹಿತಿ ಕೇಳಲಾಗಿತ್ತು.
‘ಈ ಅವಧಿಯಲ್ಲಿ, ಗುರುತು ಪತ್ತೆಯಾಗದ 279 ಮೃತದೇಹಗಳಲ್ಲಿ 219 ಗಂಡು, 46 ಹೆಣ್ಣಿನ ಶವಗಳು. 13 ಮೃತದೇಹಗಳ ಲಿಂಗ ಪತ್ತೆಯಾಗಿಲ್ಲ. ಒಂದು ನವಜಾತ ಶಿಶು’ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಪಂಚಾಯಿತಿಯ ಮಾಹಿತಿ ಅಧಿಕಾರಿ ಉತ್ತರಿಸಿದ್ದಾರೆ.
ಮಾಹಿತಿ ಪ್ರಕಾರ 2003–04, 2006–07, 2014–15ನೇ ಸಾಲಿನಲ್ಲಿ ಅತಿ ಹೆಚ್ಚು (ತಲಾ 17) ಮೃತದೇಹಗಳನ್ನು ವಿಲೇ ಮಾಡಲಾಗಿದೆ. ಈ ವರ್ಷಗಳನ್ನು ಹೊರತುಪಡಿಸಿದರೆ ಪಂಚಾಯಿತಿಯವರು ಅತಿ ಹೆಚ್ಚು (14) ಮೃತದೇಹಗಳನ್ನು ಹೂತಿರುವುದು 2024–25ರಲ್ಲಿ.
2009–10, 2011–12ರಲ್ಲಿ ತಲಾ 13 ಹಾಗೂ 1990–91, 2005–06, 2007–08, 2018–19 ಹಾಗೂ 2023–24ರಲ್ಲಿ ತಲಾ 12, 2008–09 ಮತ್ತು 2022–23ರಲ್ಲಿ ತಲಾ 11 ಹಾಗೂ 2020–21ರಲ್ಲಿ 10 ಮೃತದೇಹಗಳನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ವಿಲೇ ಮಾಡಲಾಗಿದೆ. 16 ವರ್ಷಗಳಲ್ಲಿ ತಲಾ 10ಕ್ಕೂ ಹೆಚ್ಚು ಮೃತದೇಹಗಳನ್ನು ವಿಲೇ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.