ADVERTISEMENT

ಉಪ್ಪಿನಂಗಡಿ | ವಿದ್ಯಾವಂತರು ಆಚಾರವಂತರಾಗಿ: ಸಲಹೆ

ಕಾಂಚನ: ಶಾಲಾ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 7:08 IST
Last Updated 15 ಜುಲೈ 2025, 7:08 IST
ಉಪ್ಪಿನಂಗಡಿ ಸಮೀಪದ ಕಾಂಚನದಲ್ಲಿ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು
ಉಪ್ಪಿನಂಗಡಿ ಸಮೀಪದ ಕಾಂಚನದಲ್ಲಿ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಉದ್ಘಾಟಿಸಿದರು   

ಉಪ್ಪಿನಂಗಡಿ: ‘ನಮ್ಮಲ್ಲಿ ಇದೀಗ ವಿದ್ಯಾವಂತರಾಗುತ್ತಾರೆ, ವಿಚಾರವಂತರಾಗುತ್ತಾರೆ. ಆದರೆ, ಆಚಾರವಂತರಾಗುತ್ತಿಲ್ಲ. ಇದು ವಿಷಾದನೀಯ’ ಎಂದು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಹೇಳಿದರು.

ಬಜತ್ತೂರು ಗ್ರಾಮದ ಕಾಂಚನದಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಡಳಿತದ ಲಕ್ಷ್ಮೀನಾರಾಯಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯೆ ಇದ್ದರೆ ಎಲ್ಲಿಯೂ ಬದುಕಬಹುದು. ಆದರೆ ಆಚಾರ ಇಲ್ಲದ ಬದುಕು ಸಾರ್ಥಕ ಆಗಲಾರದು. ಕಾಂಚನ ಸಂಗೀತ ಮನೆತನದ ವೆಂಕಟಕೃಷ್ಣ ಅಯ್ಯರ್ ಅವರು 1954ರಲ್ಲಿ ನಿರ್ಮಿಸಿದ ಈ ಶಾಲೆಯನ್ನು ಅವರ ಕುಟುಂಬದವರಿಗೆ ಮುಂದುವರಿಸಲು ಸಮಸ್ಯೆ ಉಂಟಾದ ಕಾರಣ 2007ರಲ್ಲಿ ಧರ್ಮಸ್ಥಳ ಸಂಸ್ಥೆಗೆ ನೀಡಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇಲ್ಲಿನ ಕೊರತೆ ನೀಗಿಸಲು ₹1.80 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದರು.

ADVERTISEMENT

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ, ವಿದ್ಯಾದಾನ ಶ್ರೇಷ್ಠವಾದ ದಾನವಾಗಿದ್ದು, ಶಿಕ್ಷಣ ಬದುಕಿನ ಕೊನೆಯವರೆಗೂ ಇರುವ ಮತ್ತು ಕದಿಯಲಾರದ ವಸ್ತುವಾಗಿರುತ್ತದೆ. ಪೋಷಕರು ಮಕ್ಕಳನ್ನು ಮೊಬೈಲ್‌ನಿಂದ ದೂರ ಇರಿಸಿದರೆ ವಿದ್ಯಾರ್ಥಿಗಳಿಂದ ಮತ್ತಷ್ಟು ಸಾಧನೆ ನೀರೀಕ್ಷಿಸಬಹುದಾಗಿದೆ ಎಂದರು.

ಶಾಲೆಯ ಸಂಸ್ಥಾಪಕಿ ರೋಹಿಣಿ ಸುಬ್ಬರತ್ನಂ ಮಾತನಾಡಿ, ಶಾಲಾ ಸ್ಥಾಪನೆ ಮತ್ತು ಅದರ ಬಳಿಕ ಎದುರಿಸುತ್ತಿದ್ದ ಸಮಸ್ಯೆಗಳನ್ನು ಮನಗಂಡು ಧರ್ಮಸ್ಥಳ ಸಂಸ್ಥೆಯವರನ್ನು ಕೇಳಿಕೊಂಡಿದ್ದು, ಇದೀಗ ಶಾಲೆ ಅಭಿವೃದ್ಧಿ ಹೊಂದುತ್ತಿರುವುದು ಸಂತೋಷ ತಂದಿದೆ ಎಂದರು.

ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ, ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಮಧುಶ್ರೀ ಯಾದವ ಗೌಡ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಮೇಶ್ ಮಯ್ಯ, ಕಟ್ಟಡ ಕಾಮಗಾರಿಯ ಎಂಜಿನಿಯರ್ ಯಶೋಧರ, ಗುತ್ತಿಗೆದಾರ ಅಬ್ದುಲ್ಲ ಭಾಗವಹಿಸಿದ್ದರು.

ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್.ಸ್ವಾಗತಿಸಿ, ಮುಖ್ಯ ಶಿಕ್ಷಕ ಎ.ಲಕ್ಷ್ಮಣ ಗೌಡ ವಂದಿಸಿದರು. ಉಪನ್ಯಾಸಕ ಮೋಹನಚಂದ್ರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.