
ಕೊಯಿಲದ ಪಶು ವೈದ್ಯಕೀಯ ಕಾಲೇಜು ಕಟ್ಟಡ
ಮಂಗಳೂರು: ಶೈಕ್ಷಣಿಕ ಹಬ್ ಆಗಿ ಗುರುತಿಸಿಕೊಂಡಿರುವ ಮಂಗಳೂರಿನಲ್ಲಿ ಮೆರಿಟೈಮ್ ವಿಶ್ವವಿದ್ಯಾಲಯ, ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವಗಳು ಮುನ್ನೆಲೆಗೆ ಬಂದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಇದಕ್ಕೆ ಹಸಿರು ನಿಶಾನೆ ಸಿಗಬಹುದೆಂಬ ನಿರೀಕ್ಷೆ ಗರಿಗೆದರಿದೆ.
ಜೊತೆಗೆ, ಕಡಬ ತಾಲ್ಲೂಕು ಕೊಯಿಲದಲ್ಲಿ ನಿರ್ಮಾಣವಾಗಿರುವ ಪಶುವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಹೆಚ್ಚುವರಿ ಅನುದಾನವೂ ರಾಜ್ಯ ಬಜೆಟ್‌ನಲ್ಲಿ ದೊರೆಯುವಂತಾಗಲು ಜನಪ್ರತಿನಿಧಿಗಳು ವಿಶೇಷ ಪ್ರಯತ್ನ ನಡೆಸಬಹುದೆಂಬ ಭರವಸೆ ಜನರದ್ದಾಗಿದೆ.
ಕಡಲ ಕ್ಷೇತ್ರದ ಅಧ್ಯಯನ ಮತ್ತು ಸಂಶೋಧನೆಗೆ ಪೂರಕವಾಗಿ ಮತ್ತು ರಾಣಿ ಅಬ್ಬಕ್ಕ ಜಯಂತಿಯ 500ನೇ ವರ್ಷಾಚರಣೆ ಪ್ರಯುಕ್ತ ಮಂಗಳೂರಿನಲ್ಲಿ ಮೆರಿಟೈಮ್ ವಿವಿ ಸ್ಥಾಪನೆಗೆ ಅನುಮೋದನೆ ನೀಡುವಂತೆ ವಿನಂತಿಸಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ಅವರಿಗೆ ಮನವಿ ಸಲ್ಲಿಸಿದ್ದರು.
320 ಕಿ.ಮೀ ಉದ್ದದ ವಿಶಾಲ ಕಡಲ ತೀರ ಹೊಂದಿರುವ ಕರ್ನಾಟಕ ಕರಾವಳಿಯಲ್ಲಿ ಸಣ್ಣ– ದೊಡ್ಡ ಸೇರಿ ಒಟ್ಟು 13 ಬಂದರುಗಳಿವೆ. ವಾಣಿಜ್ಯ ವಹಿವಾಟು ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕಡಲ ಅಧ್ಯಯನಕ್ಕೆ ಪೂರಕವಾಗಿ ವಿವಿ ಬೇಕು ಎನ್ನುವುದು ಜನರ ಬೇಡಿಕೆಯಾಗಿದೆ.
ಇನ್ನೂ ಬೇಕು ₹18 ಕೋಟಿ: ಕೊಯಿಲದಲ್ಲಿ ನಿರ್ಮಾಣವಾಗಿರುವ ಬೃಹತ್ ಕಟ್ಟಡದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಿಸಲು ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪಿಯಲ್ಲಿ ಬರುವ ಈ ಕಾಲೇಜಿಗೆ ಒಟ್ಟು 77 ಬೋಧಕ ಸಿಬ್ಬಂದಿ ಅಗತ್ಯವಿದೆ. ಪ್ರಸ್ತುತ 25 ಬೋಧಕರ ನೇಮಕಕ್ಕೆ ಅನುಮತಿ ದೊರೆತಿದೆ. 15 ಪ್ರಯೋಗಾಲಯ ಸಹಾಯಕರು ಸೇರಿ ಒಟ್ಟು 32 ಬೋಧಕೇತರ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಕಾಲೇಜಿನ ಅಧಿಕಾರಿಯೊಬ್ಬರು ತಿಳಿಸಿದರು.
ಪಶುವೈದ್ಯಕೀಯ ಕಾಲೇಜು ಸ್ಥಾಪನೆಗೆ 2016ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದರು. ಅನುದಾನ ಕೊರತೆಯಿಂದ ಆಮೆಗತಿಯಲ್ಲಿ ಕಾಮಗಾರಿ ಸಾಗಿ ಅಂತೂ ಪೂರ್ಣಗೊಂಡಿದೆ. ಆದರೆ, ತರಗತಿ ಪ್ರಾರಂಭಕ್ಕೆ ಅಗತ್ಯವಿರುವ ಪ್ರಯೋಗಾಲಯ ಸಾಮಗ್ರಿ, ಯಂತ್ರೋಪಕರಣಗಳ ಖರೀದಿಗೆ ಅನುದಾನಕ್ಕೆ ಕಾಯುತ್ತಿದ್ದೇವೆ. ಒಟ್ಟು ₹164 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗಿತ್ತು. ಅದರಲ್ಲಿ ₹25 ಕೋಟಿ ತುರ್ತಾಗಿ ಬೇಕೆಂದು ಕೇಳಿದ್ದೆವು. ₹5 ಕೋಟಿ ಮಂಜೂರು ಆಗಿದೆ. ಆ ಅನುದಾನದಲ್ಲಿ ಪದವಿ ಪ್ರಥಮ ವರ್ಷಕ್ಕೆ ಅಗತ್ಯವಿರುವ ಕೆಲವು ಯಂತ್ರೋಪಕರಣಗಳನ್ನು ಖರೀದಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಯೋಗಾಲಯ ಸಾಮಗ್ರಿ, ತರಗತಿ ಕೊಠಡಿಗಳಿಗೆ ಅಗತ್ಯ ಫರ್ನೀಚರ್, ವಸತಿ ನಿಲಯಕ್ಕೆ ಅಗತ್ಯವಿರುವ ಸಾಮಗ್ರಿ ಖರೀದಿಸಲು ₹18 ಕೋಟಿ ತುರ್ತಾಗಿ ಬೇಕಾಗಿದೆ. ಕಾಲೇಜು ಪ್ರಾರಂಭಿಸಲು ಭಾರತೀಯ ಪಶು ವೈದ್ಯಕೀಯ ಪರಿಷತ್‌ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಪರಿಷತ್ ಅಧಿಕಾರಿಗಳ ಪರಿಶೀಲನೆ ವೇಳೆ ಪೂರ್ಣ ಪ್ರಮಾಣದ ಸೌಲಭ್ಯಗಳು ಇದ್ದಾಗ ಮಾತ್ರ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿ ಪ್ರಾರಂಭಿಸಲು ಅನುಮತಿ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.
ಮನ್ನಣೆ ದೊರೆಯುವ ನಿರೀಕ್ಷೆ: ಮಂಗಳೂರಿನಲ್ಲಿರುವ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಬೇಕು ಎಂಬುದು ಬಹುಕಾಲದ ಬೇಡಿಕೆಯಾಗಿದೆ. ಮೀನುಗಾರಿಕಾ ವಿವಿ ಸ್ಥಾಪನೆಗೆ ಸಿದ್ಧವಿರುವುದಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಮತ್ಸ್ಯಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು, ಕರಾವಳಿಗರ ಬೇಡಿಕೆಗೆ ಮನ್ನಣೆ ದೊರೆಯುವ ನಿರೀಕ್ಷೆ ಮೂಡಿಸಿದೆ.
ನಿಯಮದಂತೆ ಪ್ರತ್ಯೇಕ ವಿವಿ ಸ್ಥಾಪನೆಗೆ ಇನ್ನೊಂದು ಮೀನುಗಾರಿಕಾ ಕಾಲೇಜು ಹಾಗೂ ಕನಿಷ್ಠ ನಾಲ್ಕು ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಪ್ರಾರಂಭವಾಗಬೇಕು ಎನ್ನುತ್ತಾರೆ ಅಧಿಕಾರಿಗಳು. ಇದಕ್ಕೆ ಪೂರಕ ಕ್ರಮಗಳ ಬಗ್ಗೆ ರಾಜ್ಯ ಬಜೆಟ್‌ನಲ್ಲಿ ಯೋಜನೆಗಳು ಘೋಷಣೆಯಾಗಬಹುದೆಂದು ನಿರೀಕ್ಷಿಸಲಾಗಿದೆ.
ಮೆರಿಟೈಮ್ ವಿವಿ ಪ್ರಾರಂಭಿಸಬೇಕು ಅಥವಾ ಚೆನ್ನೈನಲ್ಲಿ ಇರುವ ಭಾರತೀಯ ಮೆರಿಟೈಮ್ ವಿವಿಯ ಘಟಕವನ್ನು ಮಂಗಳೂರಿನಲ್ಲಿ ಪ್ರಾರಂಭಿಸಿ ನಂತರ ಅದನ್ನು ಪೂರ್ಣ ಪ್ರಮಾಣದಲ್ಲಿ ವಿವಿಯಾಗಿ ಪರಿವರ್ತಿಸುವ ಬಗ್ಗೆ ಬೇಡಿಕೆ ಇಡಲಾಗಿದೆ.ಕ್ಯಾ. ಬ್ರಿಜೇಶ್ ಚೌಟ ಸಂಸದ
ಪಶು ವೈದ್ಯಕೀಯ ಕಾಲೇಜಿಗೆ ಅಗತ್ಯ ₹49 ಕೋಟಿ ಅನುದಾನ ಒದಗಿಸಲಾಗಿದೆ. ಹೆಚ್ಚುವರಿ ಬೇಡಿಕೆ ಪೂರೈಸಲು ಬಜೆಟ್ ಅಥವಾ ಪಶುವೈದ್ಯಕೀಯ ಇಲಾಖೆ ಅನುದಾನದಲ್ಲಿ ಪ್ರಯತ್ನಿಸಲಾಗುವುದು.ಅಶೋಕ್‌ಕುಮಾರ್ ರೈ ಪುತ್ತೂರು ಶಾಸಕ
ಮುಂದಿನ ಶೈಕ್ಷಣಿಕ ವರ್ಷದಿಂದ ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ಪ್ರಾರಂಭಿಸುವ ಸಂಬಂಧ ವಿವಿ ಕುಲಪತಿ ಕುಲಸಚಿವರು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.ಶಿವಕುಮಾರ್ ಎಂ.ಸಿ ವಿಶೇಷ ಕರ್ತವ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.