ADVERTISEMENT

ಮಂಗಳೂರು | ಹುಲಿ ವಿನಿಮಯಕ್ಕೂ ಕೋವಿಡ್ ಅಡ್ಡಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 5:23 IST
Last Updated 29 ಜುಲೈ 2020, 5:23 IST
ಪಿಲಿಕುಳದಲ್ಲಿ ಹುಲಿಯ ಗಾಂಭೀರ್ಯದ ವಿಹಂಗಮ ನೋಟ
ಪಿಲಿಕುಳದಲ್ಲಿ ಹುಲಿಯ ಗಾಂಭೀರ್ಯದ ವಿಹಂಗಮ ನೋಟ   
""

ಮಂಗಳೂರು: ಎಲ್ಲವೂ ನಿಗದಿಯಂತೆ ನಡೆದಿದ್ದರೆ, ವಿಶ್ವ ಹುಲಿ ದಿನವಾದ (ಜು.29) ಬುಧವಾರ ಇಲ್ಲಿನ ಪಿಲಿಕುಳ ನಿಸರ್ಗಧಾಮದ ಜೈವಿಕ ಉದ್ಯಾನದಲ್ಲಿ ಬಿಳಿ ಹುಲಿಗಳೆರಡು ಘರ್ಜಿಸುತ್ತಿರಬೇಕಿತ್ತು. ಆದರೆ, ಹುಲಿ ವಿನಿಮಯಕ್ಕೂ ಕೋವಿಡ್ -19 ಅಡ್ಡಿಯಾಗಿದೆ.

ಆಂಧ್ರಪ್ರದೇಶದ ತಿರುಪತಿಯ ವೆಂಕಟೇಶ್ವರ ಮೃಗಾಲಯ ಹಾಗೂ ಗುಜರಾತ್ ರಾಜ್ ಕೋಟ್ ಮೃಗಾಲಯಗಳಿಂದ ತಲಾ ಒಂದೊಂದು ಬಿಳಿ ಹುಲಿ ತರುವ ಬಗ್ಗೆ ಮಾರ್ಚ್‌ಗೆ ಮೊದಲೇ ಒಪ್ಪಂದ ಹಾಗೂ ಸಿದ್ಧತೆಗಳು ನಡೆದಿದ್ದವು. ಕೊರೊನಾ ಲಾಕ್‌ಡೌನ್ ಪರಿಣಾಮ ವಿನಿಮಯದ ಯೋಜನೆ ಮುಂದೂಡಲಾಗಿದೆ.

ಸದ್ಯ ಪಿಲಿಕುಳದಲ್ಲಿ ವಿಕ್ರಮ, ನೇತ್ರಾವತಿ, ಒಲಿವರ್, ಅಮರ್, ಅಕ್ಬರ್, ರಾಣಿ, ರಾವ, ಸುಧಾ, ಜೈರಾಮ್, ಸಂಜಯ್, ವಿಜಯ್ ಎಂಬ 11 ಹುಲಿಗಳಿವೆ. ಹುಲಿಗಳಿಗೂ ಸೌಹಾರ್ದತೆಯ ಹೆಸರುಗಳನ್ನು ಇಡಲಾಗಿದೆ.

ADVERTISEMENT

ಇಲ್ಲಿಂದ ಹೈದರಾಬಾದ್ ಮೃಗಾಲಯಕ್ಕೆ ಒಂದು ಹುಲಿ ಕಳುಹಿಸಿ ಕೊಡಬೇಕಾಗಿದ್ದು, ಕೋವಿಡ್ ಕಾರಣ ಮುಂದೆ ಹೋಗಿದೆ ಎಂದು ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಪ್ರಜಾವಾಣಿ ಗೆ ತಿಳಿಸಿದರು.

‘ಪಿಲಿಕುಳ’ಎಂದರೆ ತುಳು ಭಾಷೆಯಲ್ಲಿ ಹುಲಿಯ ಕೊಳ ಎಂದಾಗಿದೆ. ಈ ಸ್ಥಳವೇ ಮೂಲತಃ ಹುಲಿಯ ಆವಾಸ್ಥಾನವಾಗಿದೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿನ ನಿಸರ್ಗಧಾಮದಲ್ಲಿ ಹುಲಿ ದತ್ತು ಪಡೆಯಲೂ ಅವಕಾಶ ಇದೆ.

ಲಾಕ್‌ಡೌನ್ ಪರಿಣಾಮ ನಿಸರ್ಗಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದ ಕಾರಣ ₹2 ಕೋಟಿಗೂ ಅಧಿಕ ನಷ್ಟ ಈಗಾಗಲೇ ಅಂದಾಜಿಸಲಾಗಿದೆ. ಶೀಘ್ರದಲ್ಲೇ ಪ್ರವಾಸಿಗರಿಗೆ ಮುಕ್ತವಾಗಲಿದೆ.

ಪಿಲಿಕುಳದಲ್ಲಿ ಹುಲಿಯ ಗಾಂಭೀರ್ಯದ ವಿಹಂಗಮ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.