ADVERTISEMENT

ವ್ಯವಸ್ಥೆಯ ಪರಿವರ್ತನೆಯೇ ಪರಿಹಾರ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಕ್ರಮ’ ಕುರಿತ ಸಂವಾದದಲ್ಲಿ ಸ್ಪೀಕರ್

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 13:08 IST
Last Updated 1 ಏಪ್ರಿಲ್ 2022, 13:08 IST
ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಚುನಾವಣಾ ಸುಧಾರಣಾ ಕ್ರಮಗಳು’ ಕುರಿತ ಸಂವಾದದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ
ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಚುನಾವಣಾ ಸುಧಾರಣಾ ಕ್ರಮಗಳು’ ಕುರಿತ ಸಂವಾದದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ   

ಮಂಗಳೂರು: ‘ಎಸ್‌ಡಿಎಂಸಿಯಿಂದ (ಶಾಲಾಭಿವೃದ್ಧಿ ಸಮಿತಿ) ಸಂಸತ್ತಿನವರೆಗೆ ಎಲ್ಲ ಚುನಾವಣೆಗಳಲ್ಲಿ ಹಣ ಬಲ, ಜಾತಿ ಬಲ, ತೋಳ್ಬಲಗಳೇ ಪ್ರಧಾನ್ಯತೆ ಪಡೆದು, ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆ ದೂರವಾಗುವ ಈ ಆತಂಕದ ಸಂದರ್ಭದಲ್ಲಿ, ‘ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಘೋಷಣೆ ಜನಸಮೂಹಕ್ಕೆ ತಲುಪಬೇಕಾಗಿದೆ’ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಎಸ್‍ಡಿಎಂ ಕಾಲೇಜು, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಆಶ್ರಯದಲ್ಲಿ ಶುಕ್ರವಾರ ಇಲ್ಲಿ ನಡೆದ ‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ಕ್ರಮ’ ಕುರಿತ ಸಂವಾದದಲ್ಲಿ ಅವರು ಮಾನತನಾಡಿದರು. ‘ಎಲ್ಲ ಕ್ಷೇತ್ರಗಳಲ್ಲಿ ಮೌಲ್ಯಗಳ ಅಧಃಪ‍ತನ ಆಗುತ್ತಿದೆ. ನಾವೆಲ್ಲ ವಿಷ ವರ್ತುಲದಲ್ಲಿ ಇದ್ದೇವೆ. ರಾಜಕಾರಣಿಗಳು ಮಾತ್ರ ಅಪರಾಧಿಗಳು ಎಂದು ಬೊಟ್ಟುಮಾಡಿ ತೋರಿಸಿ ಹೇಳುವುದಕ್ಕಿಂತ, ಇಡೀ ಸಮಾಜ ಪರಿವರ್ತನೆಯ ಬಗ್ಗೆ ಯೋಚಿಸಬೇಕು. ವಿಶೇಷವಾಗಿ ಯುವಜನರು ಹೆಚ್ಚು ಜಾಗೃತರಾಗಬೇಕು’ ಎಂದರು.

ಚುನಾವಣಾ ವ್ಯವಸ್ಥೆಯಲ್ಲಿ ಕಾಲಕ್ಕೆ ಅನುಗುಣವಾಗಿ ಆಧುನೀಕರಣಗೊಳ್ಳುತ್ತಿದೆ. ಮತ ಪತ್ರದಿಂದ ಇವಿಎಂ ಯಂತ್ರದವರೆಗೆ ಬಂದಿದೆ. ಮತದಾರರ ಪಟ್ಟಿ ಪರಿಷ್ಕರಣೆ ಆಗುತ್ತದೆ. ಆದರೆ, ಇನ್ನೂ 18 ವರ್ಷಆದಾಕ್ಷಣ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳ್ಳುವ ಅಥವಾ ಮರಣ ಹೊಂದಿದ ವ್ಯಕ್ತಿಯ ಹೆಸರನ್ನು ಪಟ್ಟಿಯಿಂದ ಕೈ ಬಿಡುವ ವ್ಯವಸ್ಥೆ ಸುಧಾರಣೆಗೆ ಇನ್ನೂ ಸಾಧ್ಯವಾಗಿಲ್ಲ. ಕಾನೂನು ಜಾಗೃತಿಯ ಜತೆಗೆ ಮತದಾರರಲ್ಲಿ ಜಾಗೃತಿ ಮೂಡಬೇಕು. ಪರಿವರ್ತನೆಯ ಹರಿಕಾರರಾಗಿರುವ ಯುವಜನರು ಮತದಾನದಲ್ಲಿ ಭಾಗವಹಿಸಬೇಕು’ ಎಂದರು.

ADVERTISEMENT

ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಕೆ. ಕೃಷ್ಣಮೂರ್ತಿ, ಲೀಡ್ ಕಾಲೇಜಿನ ಮುಖ್ಯಸ್ಥ ರಾಜಶೇಖರ ಹೆಬ್ಬಾರ್, ಬಾರ್ ಅಸೋಸಿಯೇಶನ್ ಉಪಾಧ್ಯಕ್ಷ ಜಿನೇಂದ್ರ, ಪ್ರಾಂಶುಪಾಲ ಡಾ. ತಾರಾನಾಥ್, ಪ್ರಾಧ್ಯಾಪಕ ಡಾ. ಜಯರಾಜ್ ಅಮೀನ್, ಶಾಹಿಮಾ ಇದ್ದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸ್ವಾಗತಿಸಿದರು.

‘ಸಂವಿಧಾನದ ಪೀಠಿಕೆ ಚಿತ್ರ ಇಟ್ಟುಕೊಳ್ಳಿ’
‘ಶರೀರದಲ್ಲಿ ಆತ್ಮವಿರುವಂತೆ, ಸಂವಿಧಾನದ ಪೀಠಿಕೆ ಈ ದೇಶದ ಆತ್ಮವಾಗಿದೆ. ಈ ಪೀಠಿಕೆಯ ಚಿತ್ರವನ್ನು ವಿದ್ಯಾರ್ಥಿಗಳು ತಮ್ಮ ಮನೆಯ ಗೋಡೆಯ ಮೇಲೆ ಇಟ್ಟುಕೊಳ್ಳಬೇಕು. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಿ, ದೇಶವನ್ನು ಇನ್ನಷ್ಟು ಮಶಕ್ತಿಶಾಲಿಯಾಗಿಸಲು ಸಾಧ್ಯವಾಗುತ್ತದೆ’ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.

ವಿದ್ಯಾರ್ಥಿಗಳ ಜೊತೆ ಅವರು ಸಂವಾದ ನಡೆಸಿದರು. ವಿದ್ಯಾರ್ಥಿಗಳಾದ ವಿದ್ವತ್ ಶೆಟ್ಟಿ, ಶಿವಶಂಕರ್, ಗುರನಾಥ ಚೌಹಾಣ್, ಶ್ರೀವರ, ನೇಹಾ ಎನ್. ಪೂಜಾರಿ, ಸಹನಾ ಜಯಪ್ರಕಾಶ್, ಝೈಬುನ್ನಿಸಾ ಮೊದಲಾದವರು ಪಾಲ್ಗೊಂಡು, ಕಡ್ಡಾಯ ಮತದಾನ, ನೋಟಾದ ಮಹತ್ವ, ಅಪರಾಧ ಪ್ರಕರಣದಲ್ಲಿ ಭಾಗಿಯಾದವರ ಸ್ಪರ್ಧೆಗೆ ತಡೆ, ಜನಪ್ರತಿನಿಧಿಗಳ ನಿವೃತ್ತಿ ವಯಸ್ಸು, ಕನಿಷ್ಠ ವಿದ್ಯಾರ್ಹತೆ, ಪಕ್ಷಾಂತರ ನಿಷೇಧ ಕಾಯ್ದೆಯ ಕಟ್ಟುನಿಟ್ಟಿನ ಪಾಲನೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.