ADVERTISEMENT

ಎಲ್ಲ‌ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಯತ್ನ: ನಳಿನ್ ಕುಮಾರ್ ಕಟೀಲ್

ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ‌‌ ಮನೆಗೆ ಸಂಸದ ನಳಿನ್ ಕುಮಾರ್,‌ ಶಾಸಕ ಕಾಮತ್ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 8:09 IST
Last Updated 2 ಮಾರ್ಚ್ 2022, 8:09 IST
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ‌‌ ಮನೆಗೆ ಸಂಸದ ನಳಿನ್ ಕುಮಾರ್,‌ ಶಾಸಕ ಕಾಮತ್ ಭೇಟಿ
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ‌‌ ಮನೆಗೆ ಸಂಸದ ನಳಿನ್ ಕುಮಾರ್,‌ ಶಾಸಕ ಕಾಮತ್ ಭೇಟಿ   

ಮಂಗಳೂರು: ಉಕ್ರೇನ್ ನಲ್ಲಿ ಸಿಲುಕಿರುವ‌ ಜಿಲ್ಲೆಯ ವಿದ್ಯಾರ್ಥಿಗಳ‌ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ‌ ವೇದವ್ಯಾಸ ಕಾಮತ್ ಬುಧವಾರ ಭೇಟಿ ನೀಡಿದರು.

ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ಅವರು ಧೈರ್ಯ ತುಂಬಿದರು. ವಿದ್ಯಾರ್ಥಿಗಳ ಜೊತೆಗೂ ವಿಡಿಯೊ ಕಾಲ್ ಮೂಲಕ ಮಾತನಾಡಿ, ಸುರಕ್ಷಿತವಾಗಿ ಕರೆತರಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲೆಯ 18 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ‌ ಇರುವುದಾಗಿ ಮಾಹಿತಿ ಸಿಕ್ಕಿದೆ. ಈಗಾಗಲೇ ನಾಲ್ಕೈದು ವಿದ್ಯಾರ್ಥಿಗಳು ಪಕ್ಕದ ದೇಶಗಳನ್ನು ತಲುಪಿದ್ದು, ಅವರನ್ನು‌ ವಾಪಸ್ ಕರೆತರಲಾಗುತ್ತಿದೆ ಎಂದು ಹೇಳಿದರು.

ಎಲ್ಲ‌ ವಿದ್ಯಾರ್ಥಿಗಳ ಪಾಲಕರ ಜೊತೆಗೆ‌ ಮಾತನಾಡುತ್ತಿದ್ದೇನೆ.‌ ವಿದ್ಯಾರ್ಥಿಗಳ ಜೊತೆಗೂ ನಿರಂತರ‌ ಸಂಪರ್ಕದಲ್ಲಿದ್ದೇವೆ. ಇದಕ್ಕಾಗಿ ಬಿಜೆಪಿಯಿಂದ ಪ್ರತ್ಯೇಕ ವಾರ್ ರೂಂ ಆರಂಭಿಸಲಾಗಿದೆ. ಶಾಸಕ ವೇದವ್ಯಾಸ ಕಾಮತ್ ಅವರು ವಿದ್ಯಾರ್ಥಿಗಳ ಜೊತೆಗೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ವಿದೇಶಾಂಗ‌‌ ಸಚಿವಾಲಯದ ಜೊತೆಗೂ ಸಂಪರ್ಕ ಹೊಂದಿದ್ದು, ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಈ‌‌ ಕಾರ್ಯಕ್ಕಾಗಿ ನಾಲ್ವರು‌‌ ಕೇಂದ್ರ‌‌ ಸಚಿವರನ್ನು ನಿಯೋಜಿಸಿದೆ. ಈ ಸಚಿವರು ಉಕ್ರೇನ್ ನ ನೆರೆ ದೇಶಗಳಿಗೆ ತೆರಳಿ,‌ವಿದ್ಯಾರ್ಥಿಗಳನ್ನು ದೇಶಕ್ಕೆ ಕರೆತರುವ‌ ಕೆಲಸ ಮಾಡುತ್ತಿದ್ದಾರೆ ಎಂದರು.

ಹಾವೇರಿಯ ವಿದ್ಯಾರ್ಥಿ ನವೀನ ಉಕ್ರೇನ್ ನಲ್ಲಿ ಮೃತಪಟ್ಟಿರುವುದು ದುಃಖದ ಸಂಗತಿ. ಅವರ ಪಾಲಕರ ಜೊತೆಗೂ ಮಾತನಾಡಿ, ಸಾಂತ್ವನ‌ ಹೇಳಲಾಗಿದೆ. ಸರ್ಕಾರ ಎಲ್ಲ ರೀತಿಯ ನೆರವು ನೀಡುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.