ADVERTISEMENT

ಮಂಗಳೂರು: ನಿವೃತ್ತ ಯೋಧನಿಂದ ಮಹಿಳಾ ಕಾನ್‌ಸ್ಟೆಬಲ್‌ಗೆ ಲೈಂಗಿಕ ಕಿರುಕುಳ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 6:54 IST
Last Updated 1 ಆಗಸ್ಟ್ 2023, 6:54 IST
   

ಉಳ್ಳಾಲ: ಕುಂಪಲದ ಬಗಂಬಿಲ ಎಂಬಲ್ಲಿ ಮಹಿಳಾ ಪೊಲೀಸ್ ಕಾನ್ ಸ್ಟೆಬಲ್ ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ನಿವೃತ್ತ ಯೋಧನೊಬ್ಬನನ್ನು ಮಂಗಳವಾರ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲ್ಯ ಕನೀರುತೋಟ ನಿವಾಸಿ, ಸದ್ಯ ಕುಂಪಲ ಅಮೃತನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಪ್ರಶಾಂತ್ (45) ಮಹಿಳಾ ಕಾನ್ಸ್ಟೆಬಲ್ ಗೆ ಕಿರುಕುಳ ನೀಡಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಕಾನ್ಸ್ಟೆಬಲ್ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಡ್ಡಗಟ್ಟಿದ ನಿವೃತ್ತ ಯೋಧ ಪ್ರಶಾಂತ್, ಆಕೆ ಮೈಮೇಲೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ತಕ್ಷಣ ಬೊಬ್ಬಿಟ್ಟಾಗ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ನಿವೃತ್ತ ಯೋಧನನ್ನು ಹಿಡಿದು ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

ಆರೋಪಿ ವಿರುದ್ಧ ಹಲವು ಪ್ರಕರಣಗಳು!

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಿವೃತ್ತ ಯೋಧ ಪ್ರಶಾಂತ್ ವಿರುದ್ಧ ಹಲವರು ದೂರುಗಳು ದಾಖಲಾಗಿದ್ದು, ಕೆಲ ಪ್ರಕರಣಗಳು ವಿಚಾರಣೆ ಹಂತದಲ್ಲಿದೆ. ನೆರೆಮನೆಯವರಿಗೆ, ಊರಿನವರಿಗೆ ನಿತ್ಯ ಕುಡಿದು ಬಂದು ಕಿರುಕುಳ ನೀಡುವ ಈತನ ವಿರುದ್ಧ ಹಲವರು ದೂರು ನೀಡಿದ್ದರು. ಆತನ ವಿರುದ್ಧ ದೆಹಲಿ ಯೋಧರ ಅಸೋಸಿಯೇಷನ್ ನಲ್ಲಿಯೂ ಎರಡು ದೂರುಗಳು ವಿಚಾರಣಾ ಹಂತದಲ್ಲಿವೆ ಎಂದು ಮೂಲಗಳು ತಿಳಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.