ADVERTISEMENT

ಅಪ್ಪ, ಮಗ ನಾಪತ್ತೆ ಪ್ರಕರಣ: ಇನ್ನೂ ನಿಗೂಢ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 11:59 IST
Last Updated 25 ಫೆಬ್ರುವರಿ 2020, 11:59 IST
  ಪುತ್ರ ನಮೀಶ್ ರೈ ಜತೆ ಗೋಪಾಲಕೃಷ್ಣ ರೈ
  ಪುತ್ರ ನಮೀಶ್ ರೈ ಜತೆ ಗೋಪಾಲಕೃಷ್ಣ ರೈ   

ಉಳ್ಳಾಲ: ನೇತ್ರಾವತಿ ಸೇತುವೆಯಿಂದ ನಾಪತ್ತೆಯಾದ ತಂದೆ ಹಾಗೂ ಮಗನ ಸುಳಿವು ಹತ್ತು ದಿನಗಳಾದರೂ ಲಭಿಸಿಲ್ಲ. ಅಲ್ಲಿ ಅವರು ಬಿಟ್ಟು ಹೋದ ಕಾರಿನಲ್ಲಿ ಪತ್ತೆಯಾದ ಪತ್ರವೊಂದರ ಆಧಾರದಂತೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆಯಿಂದ ಐದು ದಿನ ನದಿಯಲ್ಲಿ ಹುಡುಕಿದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.

ಬಂಟ್ವಾಳ ಬಾಳ್ತಿಲ ನಿವಾಸಿ ಗೋಪಾಲಕೃಷ್ಣ ರೈ (55) ಮತ್ತು ಪುತ್ರ ನಮೀಶ್ ರೈ (6) ಫೆ.16 ನಸುಕಿನ ಜಾವದಿಂದ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು.

ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿರುವ ಗೋಪಾಲಕೃಷ್ಣ ರೈ ಇವರು ಪತ್ನಿ ಪಾವೂರುಗುತ್ತು ಮನೆ ಸಮೀಪ ನಡೆಯುತ್ತಿದ್ದ ಗ್ರಾಮದ ಪೈಚಿಲ್ ನೇಮಕ್ಕೆಂದು ಮುಂಬೈನಿಂದ ಊರಿಗೆ ಆಗಮಿಸಿದ್ದರು. ಮಗನೊಂದಿಗೆ ಹೊರಹೋಗಿದ್ದ ಅವರ ಕಾರು ನೇತ್ರಾವತಿ ಸೇತುವೆಯಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿ ಎಂಟು ಪುಟಗಳ ಪತ್ರ, ಪುತ್ರನ ಚಪ್ಪಲಿ, ₹6ಸಾವಿರ ನಗದು ಹಾಗೂ ಮದ್ಯದ ಬಾಟಲಿ ಪತ್ತೆಯಾಗಿತ್ತು.

ಪತ್ನಿ ಅಶ್ವಿನಿ ರೈ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನೇತ್ರಾವತಿ ನದಿಯಲ್ಲಿ ಐದು ದಿನ ಸ್ಥಳೀಯ ಈಜುಗಾರರು, ದೋಣಿ ಮಾಲೀಕರು, ಕರಾವಳಿ ರಕ್ಷಣಾ ಪಡೆ, ಅಗ್ನಿ ಶಾಮಕ ಸಿಬ್ಬಂದಿ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾವು ಸಂಭವಿಸಿದ್ದರೆ ಹಾರಿದ 24 ಗಂಟೆ ಬಳಿಕ ಮೃತದೇಹ ಸಾಮಾನ್ಯವಾಗಿ ನದಿ ತೀರಕ್ಕೆ ಬರುವ ವಿಶ್ವಾಸದಿಂದ 24 ಗಂಟೆ ಕಾದು ಬಳಿಕ ಶೋಧ ಕಾರ್ಯ ಆರಂಭಿಸಲಾಗಿತ್ತು. ನದಿ ಆಳದಲ್ಲಿಯೂ ತಂತ್ರಜ್ಞಾನ ಬಳಕೆ ಮಾಡಿ ಶೋಧ ನಡೆಸಿದರೂ ಯಾವುದೇ ರೀತಿಯ ಕುರುಹು ಲಭ್ಯವಾಗಿಲ್ಲ. ಪ್ರಕರಣ ನಿಗೂಢವಾಗಿಯೇ ಉಳಿದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.