ಮಂಗಳೂರು: ವಾಟ್ಸ್ ಆ್ಯಪ್‌ನ ‘ಪಿರ್ಸ ಎಪ್ಪೊಲುಂ ಇಕ್ಕಟ್ಟ್’ ಎಂಬ ಗೂಪ್‌ನಲ್ಲಿ ವಿಡಿಯೊ ಹಾಗೂ ಬರಹ ಹಂಚಿಕೊಂಡ ಆರೋಪದ ಮೇಲೆ ಅಶ್ರಪ್ ಕಿನಾರ ಕುದ್ರೋಳಿ ಅವರ ವಿರುದ್ಧ ನಗರ ಉತ್ತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘‘ಪಿರ್ಸ ಎಪ್ಪೊಲುಂ ಇಕ್ಕಟ್ಟ್’ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಅಶ್ರಫ್ ಕಿನಾರ ಅವರು ‘ಬ್ರೇಕಿಂಗ್…, ಇದೀಗ ಸಜಿಪ ಪಾವೂರ್ ನಲ್ಲಿ ಮತ್ತೆ ಪೊಲೀಸ್ ರೈಡ್…, ಅಲ್ಲಾಹನ ಸಮರ್ಪಣೆಗೆ ತಂದಿಟ್ಟ ಉಲ್ಹಿಯಾ ಕೊಡುವ ಹಸುಗಳನ್ನು ವಶಪಡಿಸುತ್ತಿರುವ ಪೊಲೀಸರು. ಕೇಳಿದರೆ ಸರ್ಕಾರದ ಆದೇಶವಂತೆ. ಮುಸ್ಲಿಮರ ಮತಗಳಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಮುಸ್ಲಿಮರು ಒಟ್ಟಾಗಿ ಬಿಸಿ ಮುಟ್ಟಿಸಬೇಕು’ ಎಂದು ಬರೆದುಕೊಂಡಿದ್ದರು. ಅದನ್ನು ಮಾಹಿತಿದಾರರೊಬ್ಬರು ತಮ್ಮ ವಾಟ್ಸ್‌ಆ್ಯಪ‌್‌ಗೆ ಕಳುಹಿಸಿದ್ದರು ಎಂದು ಠಾಣೆಯ ಕಾನ್‌ಸ್ಟೆಬಲ್ ಸುನಿಲ್ ಕುಮಾರ್ ಎನ್.ಪಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮಾಹಿತಿದಾರರು ಅದರ ಜೊತೆ 57 ಸೆಕೆಂಡ್ ವಿಡಿಯೊವನ್ನು ಕಳಿಸಿದ್ದಾರೆ. ಅದರಲ್ಲಿ ‘ನಾನು ಸಾವರ್ಕರ್ ಅಭಿಮಾನಿ ಖಾದರ್ಕರ್. ಅಲಕ್ಕ ಪೋಯಿತಲ್ಲೇ...’ ಎಂಬುವುದಾಗಿ ಬರೆಯಲಾಗಿದೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಫೋಟೋಗಳನ್ನು ಎಡಿಟ್ ಮಾಡಿ ಬಳಸಲಾಗಿದೆ. ಕೆಳಗಡೆ ಹಾಡುಗಾರ: ದಸ್ತಕೀರ್, ಸಂಗೀತ: ಸರಾಫ್ ವಿಟ್ಲ ಬರೆಯಲಾಗಿದೆ. ಒಬ್ಬಾತ ವ್ಯಕ್ತಿಯು ಕೈಯಲ್ಲಿ ಮೊಬೈಲ್ ಫೋನ್ ಹಿಡಿದ ಚಿತ್ರವಿದೆ. ‘ಬಿಜೆಪಿ ಬರುತ್ತದೆ ಎಂದು ಹೆದರಿಸಿದರು. ಕೇಳಿದರೆ, ಕೈ ತೋರಿಸಿ, ಕಾಂಗ್ರೆಸ್ ಕಾಂಗ್ರೆಸ್ ಎಂದು ಹೇಳುತ್ತೀರಲ್ಲ, ಎಲ್ಲಿ ಉಂಟು ಕಾಂಗ್ರೆಸ್. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು, ಬ್ಯಾರಿಗಳಿಗೆ ಆದ ಅನ್ಯಾಯವನ್ನು, ಕೇಳಲು ಕಾಂಗ್ರೆಸ್ ಪಕ್ಷ ಇಲ್ಲ. ಅಧಿಕಾರದಲ್ಲಿ ಇದ್ದು ಕೂಡ, ಸಂಘಿಯ ಬಂಧನ ಆಗಿಲ್ಲ. ಬಂಧನ ಮಾಡಲು ಧಮ್ ಇಲ್ಲ. ಏಕೆ ಬೇಕು ಅಧಿಕಾರ ನಿಮಗೆ, ನಾಚಿಕೆ ಆಗಲ್ವಾ. ಬಿಟ್ಟು ಹೋಗಿ ಆಗದಿದ್ದರೆ ಬಿಟ್ಟುಹೋಗಿ. ಅಧಿಕಾರ ಬ್ಯಾರಿಗಳಿಗೆ ಬಿಟ್ಟು ಕೊಡಿ. ಬಿಟ್ಟು ಹೋಗಿ ಆಗದಿದ್ದರೆ ಬಿಟ್ಟುಹೋಗಿ. ಅಧಿಕಾರ ಬ್ಯಾರಿಗಳಿಗೆ ಬಿಟ್ಟು ಕೊಡಿ’ ಎಂದು ಬ್ಯಾರಿ ಭಾಷೆಯಲ್ಲಿ ಹಾಡಿರುವ ಹಾಡಿನ ಜೊತೆ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.