ಗಿರೀಶ್ ಮಟ್ಟಣ್ಣವರ್
ಮಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳಕನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲು ತೆರಳಿದ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಮಾನಹಾನಿಕರ ಸಂದೇಶಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಗಿರೀಶ್ ಮಟ್ಟೆಣ್ಣವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಅರುಣ್ ಕೆ. ತಿಳಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಆ ಠಾಣೆಯ ತನಿಖಾಧಿಕಾರಿ, ಸಬ್ ಇನ್‌ಸ್ಪೆಕ್ಟರ್ ಮತ್ತು ಹಿರಿಯ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲು ಆ.21ರಂದು ಬೆಳಿಗ್ಗೆ ಬೆಳ್ತಂಗಡಿ ತಾಲ್ಲೂಕು ಉಜಿರೆ ಗ್ರಾಮದ ತಿಮರೋಡಿ ಹೌಸ್‌ಗೆ ತೆರಳಿದ್ದರು.
ಆಗ ಅಲ್ಲಿದ್ದ ಗಿರೀಶ್ ಮಟ್ಟೆಣ್ಣವರ, ಜಯಂತ್ ಹಾಗೂ ಇತರ 10 ಮಂದಿ ಅಕ್ರಮ ಕೂಟ ರಚಿಸಿ ಬಂಧನಕ್ಕೆ ತಡೆಯೊಡ್ಡಿದ್ದಾರೆ. ಅಧಿಕಾರಿಗಳ ಮೇಲೆ ಬಲಪ್ರಯೋಗ ಮಾಡಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾನಹಾನಿಕರ ಸಂದೇಶಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ ಎಂದು ಅರುಣ್ ತಿಳಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿದ ನಂತರ ಇಲಾಖೆಯ ವಾಹನದಲ್ಲಿ ಬರಲು ನಿರಾಕರಿಸಿದ್ದಾರೆ. ಅವರು ಸ್ವಂತ ಕಾರಿನಲ್ಲಿ ಬರುತ್ತಿದ್ದ ವೇಳೆ 10 ರಿಂದ 15 ಕಾರುಗಳಲ್ಲಿ ಜನರು ಪೊಲೀಸರ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದು ತೊಂದರೆ ಮಾಡಿದ್ದಾರೆ. ಈ ಬಗ್ಗೆ ಭಾರತೀಯ ನ್ಯಾಯಸಂಹಿತೆ 2023ರ ಕಲಂ 132, 189(2), 351(2), 263(a), 190, 262ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.