
ಮಂಗಳೂರು: ಪುತ್ತೂರಿನ ಉಪ್ಪಳಿಗೆಯಲ್ಲಿ ಈಚೆಗೆ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ಭಾಷಣ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಕಲ್ಲಡ್ಕ ಪ್ರಭಾಕರ ಭಟ್ ಅವರ ಭಾಷಣವು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಪ್ರಸಾರಗೊಂಡಿದೆ. ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಅಪಾಯ ಉಂಟುಮಾಡುವಂತೆ ಅವರು ಮಾತನಾಡಿದ್ದಾರೆ. ಹಿಂದೂ-ಮುಸ್ಲಿಂ ಸಮುದಾಯಗಳ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಮತದಾರರ ಸಂಖ್ಯೆಯನ್ನು ಉಲ್ಲೇಖ ಮಾಡಿ ಧಾರ್ಮಿಕ ವೈಮನಸ್ಸು ಉಂಟುಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ತಾಲ್ಲೂಕಿನ ಈಶ್ವರಿ ಪದ್ಮುಂಜ ಶನಿವಾರ ದೂರು ನೀಡಿದ್ದರು.’
‘ಅದರನ್ವಯ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆಯನ್ನುಂಟು ಮಾಡುವುದು), ಸೆಕ್ಷನ್ 196 (ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವುದು), ಸೆಕ್ಷನ್ 299 (ಉದ್ದೇಶಪೂರ್ವಕವಾಗಿ ಧಾರ್ಮಿಕ ದ್ವೇಷವನ್ನು ಹರಡುವುದು), ಸೆಕ್ಷನ್ 302 (ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವುದುಊ) ಹಾಗೂ 3(5) (ಸಮಾನ ಉದ್ದೇಶದಿಂದ ಕೃತ್ಯ) ಸೆಕ್ಷನ್ ಅಡಿಯಲ್ಲಿ ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.