ADVERTISEMENT

ಬೈಂದೂರು: ಮಯ್ಯಾಡಿ ಶಾಲೆಗೆ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 5:30 IST
Last Updated 27 ಜನವರಿ 2023, 5:30 IST
ಸುವರ್ಣ ಸಂಭ್ರಮದಲ್ಲಿರುವ ಬೈಂದೂರು ಮೈಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ
ಸುವರ್ಣ ಸಂಭ್ರಮದಲ್ಲಿರುವ ಬೈಂದೂರು ಮೈಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ   

ಬೈಂದೂರು: ಗುಣಮಟ್ಟದ ಶಿಕ್ಷಣದ ಮೂಲಕ ಬೈಂದೂರು ಪರಿಸರದಲ್ಲಿ ಮನೆಮಾತಾದ, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಶಾಲೆಗೆ ಈಗ 50ರ ಹರೆಯ. ಉಡುಪಿ ಜಿಲ್ಲೆಯ ಏಕೈಕ ಅನುದಾನಿತ ಶಾಲೆಯೀಗ ತನ್ನ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸುತ್ತಿದೆ. ಮಯ್ಯಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಗೆ ಸುವರ್ಣ ಸಂಭ್ರಮ.

1938ರಲ್ಲಿ ಸಮಾನ ಮನಸ್ಕರು ಸೇರಿ ಆರಂಭಿಸಿದ ಶಾಲೆ, ಮಯ್ಯಾಡಿಯ ಖಾಸಗಿ ಕಟ್ಟಡಗಳಲ್ಲಿಯೇ ಹತ್ತಾರು ವರ್ಷ ನಡೆಯಿತು. ಜಾಗ ಖರೀದಿಸಿ, ಕಟ್ಟಡ ನಿರ್ಮಿಸುವುದು ಆಡಳಿತ ಮಂಡಳಿಗೆ ಕಷ್ಟವಾದಾಗ ಶಿಕ್ಷಣ ಪ್ರಿಯರಿಗೆ ನೆನಪಾಗಿದ್ದು ಧರ್ಮಸ್ಥಳದ ಹೆಸರು. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದಾಗ, ಅವರು ಶಾಲೆ ನಡೆಸಲು ಅಸ್ತು ಎಂದರು. ಅಲ್ಲಿಂದ ಶಾಲೆ ಉನ್ನತಿಯತ್ತ ಹೆಜ್ಜೆ ಹಾಕುತ್ತ ಸಾಗಿತು.

2000 ಇಸವಿಯ ಸುಮಾರಿಗೆ ಆಂಗ್ಲ ಮಾಧ್ಯಮ ಪ್ರಭಾವ, ಫೀಡಿಂಗ್ ಶಾಲೆಗಳು ಮೇಲ್ದರ್ಗೆಜೇರಿದ ಪರಿಣಾಮದಿಂದಾಗಿ ಮಕ್ಕಳ ಸಂಖ್ಯೆ ಕ್ಷೀಣಿಸತೊಡಗಿತ್ತು. 2009ರ ಹೊತ್ತಿಗೆ ಬದಲಾದ ಕಾಲಮಾನಕ್ಕೆ ತಕ್ಕಂತೆ ಅಪ್ಡೇಟ್ ಆದ ಶಾಲಾ ಆಡಳಿತ ಮಂಡಳಿಯ ದೂರದ ಮಕ್ಕಳನ್ನು ಆಟೋ ರಿಕ್ಷಾದ ಮೂಲಕ ಕರೆತರುವ ಯೋಜನೆ ಹಾಕಿಕೊಂಡಿತು. ಮುಂದೆ ಮಕ್ಕಳ ಸಂಖ್ಯೆ ಹೆಚ್ಚಾದಾಗ 2011ರಲ್ಲಿ ಧರ್ಮಸ್ಥಳದಿಂದಲೇ ವಾಹನವೊಂದು ಶಾಲೆಗೆ ಬಂತು. ಅಂದು ಶಿಕ್ಷಕರಾಗಿದ್ದ ರಾಜು ಎಸ್. ಅವರೇ ಸ್ವತಃ ವಾಹನ ಚಲಾಯಿಸಿ ಮಕ್ಕಳನ್ನು ಪ್ರತಿನಿತ್ಯ ಶಾಲೆಗೆ ಕರೆತರಲು ಮುಂದಾದರು. ಮುಂದೆ ಅವರು ಮುಖ್ಯೋಪಧ್ಯಾಯರಾದ ಬಳಿಕವೂ ಅದು ಮುಂದುವರಿದಿದೆ. ಇದೀಗ ಶಾಲೆಯಲ್ಲಿ ಮೂರು ಶಾಲಾ ವಾಹನವಿದ್ದು, ಅದಕ್ಕಾಗಿ ಓರ್ವ ಚಾಲಕನನ್ನು ನೇಮಿಸಿಕೊಳ್ಳಲಾಗಿದೆ.

ADVERTISEMENT

ಶಾಲಾ ವಾಹನದೊಂದಿಗೆ, ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಿದ ಪರಿಣಾಮವಾಗಿ ಪ್ರಸಕ್ತ ವರ್ಷದಲ್ಲಿ 522 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬೈಂದೂರು ವಲಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿ ಗುರುತಿಸಿಕೊಂಡಿದೆ. ಪ್ರಸ್ತುತ 15 ಮಂದಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ಈ ಪೈಕಿ ಮುಖ್ಯೋಪಾಧ್ಯಾಯರಾದ ರಾಜು ಎಸ್. ಅವರು ಅನುದಾನಿತ ಶಿಕ್ಷಕರಾಗಿದ್ದಾರೆ. ಉಳಿದ 14 ಮಂದಿಯನ್ನು ಧರ್ಮಸ್ಥಳದ ಟ್ರಸ್ಟ್ ವತಿಯಿಂದ ನೇಮಿಸಿಕೊಳ್ಳಲಾಗಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ, ಕಂಪ್ಯೂಟರ್ ಶಿಕ್ಷಣದೊಂದಿಗೆ ಸೆಲ್ಕೊ ಡಿಜಿಟಲ್ ಕ್ಲಾಸ್, ವಾಚನಾಲಯ, ಮಧ್ಯಾಹ್ನದ ಬಿಸಿಯೂಟಕ್ಕಾಗಿ ಅನ್ನಬ್ರಹ್ಮ ಸಭಾಂಗಣ, ಸುಸಜ್ಜಿತ ಶೌಚಾಲಯ ಹೊಂದಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಸೊಸೈಟಿಯು ಶಾಲಾ ಮೂಲ ಸೌಕರ್ಯ, ಶಿಕ್ಷಕರ ವೇತನ, ನೋಟ್ ಪುಸ್ತಕ ಹಾಗೂ ಇನ್ನಿತರ ನಿರ್ವಹಣಾ ವೆಚ್ಚ ಸೇರಿದಂತೆ ಪ್ರತಿ ವರ್ಷ 25 ಲಕ್ಷಕ್ಕೂ ಅಧಿಕ ಹಣವನ್ನು ಮಯ್ಯಾಡಿಯ ಶಾಲೆಗಾಗಿ ವಿನಿಯೋಗಿಸುತ್ತಿದೆ. ಟ್ರಸ್ಟ್ ವತಿಯಿಂದಲೇ ವಾಹನ, ನಿರ್ವಹಣಾ ವೆಚ್ಚ, ಹೊಸ ಪಿಠೋಪಕರಣಗಳು ಮೊದಲಾದವುಗಳು ಬರುತ್ತಿದ್ದರೆ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಒಂದಿಷ್ಟು ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸರಕಾರ ಬಿಸಿಯೂಟ ಆರಂಭಿಸುವ ಮೊದಲೇ ಉಡುಪಿ ಮಠದಿಂದ ನೇತೃತ್ವದಲ್ಲಿ ಬಿಸಿಯೂಟ ದೊರೆಯುತ್ತಿದ್ದರೆ, ಸರಕಾರದ ಬಿಸಿಯೂಟ ಆರಂಭವಾದ ಬಳಿಕ ಮಠದ ಮಧ್ಯಸ್ಥಿಕೆಯಲ್ಲಿ ಬಿಸಿಯೂಟ ಯೋಜನೆ ಮುನ್ನೆಡೆದಿತ್ತು. ಕಳೆದೆರಡು ವರ್ಷದಿಂದ ನೇರವಾಗಿ ಸರಕಾರದಿಂದ ಬಿಸಿಯೂಟದ ಸೌಲಭ್ಯ ಶಾಲೆಗೆ ನೀಡಲಾಗುತ್ತಿದೆ.

ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರುಗಳಾದ ರಾಮ ದೇವಾಡಿಗ, ಕುಪ್ಪಯ್ಯ ದೇವಾಡಿಗ, ರಮಾಬಾಯಿ, ನಾಗಪ್ಪ ಶೇರುಗಾರ್, ರವಿಕಲಾ, ಸದಾಶಿವ ಎಸ್., ರಘುನಾಥ ಶೆಟ್ಟಿ, ಜಗನ್ನಾಥ ಶೆಟ್ಟಿ, ರಾಮ ನಾಯ್ಕ್, ತಿಮ್ಮಪ್ಪ ಪೂಜಾರಿ, ಕೆ. ಜಯಶೀಲ ಶೆಟ್ಟಿ, ಡಿ. ನಾರಾಯಣ ಶೇರುಗಾರ್, ಡಿ. ಬಾಲಕೃಷ್ಣ ರಾವ್, ಎಸ್. ಸದಾಶಿವ ಸೂರಾಲ್. ಬಿ. ಸೋಮಶೇಖರ ಶೆಟ್ಟಿ, ಬಿ.ಎನ್. ವೇದಾವತಿ, ಎಂ. ಸದಾನಂದ, ತಿಮ್ಮಪ್ಪ ಗೌಡ, ಡಿ. ಕೃಷ್ಣಪ್ಪ ಪೂಜಾರಿ, ಜಿ. ಹನುಮಂತ, ಬಿ. ಸಾವಿತ್ರಿ, ಜಯಭಾರತಿ, ಕೆ. ರಾಮಣ್ಣ ನಾಯ್ಕ್, ಕೆ. ಗಣಪತಿ, ಅಮಿತಾನಂದ ಹೆಗ್ಡೆ ಮೊದಲಾದವರುಗಳನ್ನು ವಿದ್ಯಾರ್ಥಿಗಳು ಈಗಲೇ ನೆನೆಯುತ್ತಾರೆ.

ಜನವರಿ 27, 28ರಂದು ಸುವರ್ಣ ಮಹೋತ್ಸವ ಸಂಭ್ರಮ:
ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಮಯ್ಯಾಡಿ ಶಾಲೆ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜ.27ರ ಶುಕ್ರವಾರ ಬೆಳಿಗ್ಗೆ ಗಂಟೆ 9ಕ್ಕೆ ಧ್ವಜಾರೋಹಣ ಮತ್ತು ಬಹುಮಾನ ವಿತರಣಾ ಸಮಾರಂಭ, ಮಧ್ಯಾಹ್ನ ಗಂಟೆ 3ಕ್ಕೆ ಪುರ ಮೆರವಣಿಗೆಯೊಂದಿಗೆ ಖಾವಂದರು ಹಾಗೂ ಅತಿಥಿಗಳ ಭವ್ಯ ಸ್ವಾಗತ, ಮಧ್ಯಾಹ್ನ ಗಂಟೆ 3:30ರಿಂದ ಶಾಲೆಯಲ್ಲಿ ಸುವರ್ಣ ಸಂಭ್ರಮದ ಉದ್ಘಾಟನಾ ಸಮಾರಂಭ ಜರುಗಲಿದೆ. ಅಂದು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅನ್ನ ಬ್ರಹ್ಮ ಸಭಾಭವನ ಉದ್ಘಾಟನೆ ಹಾಗೂ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್, ಹಿಂದುಳಿದ ವರ್ಗಗಳ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ಬಿ.ವೈ. ರಾಘವೇಂದ್ರ, ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಶಾಸಕರುಗಳಾದ ಕೆ. ಲಕ್ಷ್ಮೀನಾರಾಯಣ, ಕೆ. ಗೋಪಾಲ ಪೂಜಾರಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮವಾಗಿ, ಕಿರು ಪ್ರಹಸನ, ನೃತ್ಯ ವೈಭವ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಜ.28ರ ಶನಿವಾರ ಬೆಳಿಗ್ಗೆ ಗಂಟೆ 8:30ಕ್ಕೆ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಮತ್ತು ಭಜನಾ ಪರಿಷತ್ ಗೋಳಿಹೊಳೆ ವಲಯದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಗಂಟೆ 11ಕ್ಕೆ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಈ ಹಿಂದೆ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರಿಗೆ ಗುರುವಂದನೆ ಹಾಗೂ ಗುರುಗಳೊಂದಿಗೆ ಸಂವಾದ ನಡೆಯಲಿದೆ. ಸಂಜೆ ಗಂಟೆ 4ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಅಧ್ಯಕ್ಷ ಬಿ. ರಾಮಕೃಷ್ಣ ಶೇರುಗಾರ್ ಅವರು ವಹಿಸಲಿದ್ದು, ಮಂಗಳೂರು ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲರಾದ ಎಂ. ಬಾಲಕೃಷ್ಣ ಶೆಟ್ಟಿ ನಿಯೋಜಿತ ಭಾಷಣ ಮಾಡಲಿದ್ದಾರೆ. ಮಂಗಳೂರು ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಎಚ್. ದಿವಾಕರ ಶೆಎಟ್ಟಿ ಶುಭಾಶಂಸನೆಗೈಯಲಿದ್ದು, ವಿವಿಧ ಅತಿಥಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ಕಿರು ಪ್ರಹಸನ ಪ್ರದರ್ಶನ, ಹಿರಿಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.