ADVERTISEMENT

ಖಾಸಗಿ ಕ್ಲಿನಿಕ್‌ನಲ್ಲಿ ಸರ್ಕಾರಿ ವೈದ್ಯರು: ಆಕ್ರೋಶ

ಬೆಳ್ತಂಗಡಿ ಪಟ್ಟಣ ಪಂಚಾಯಿತಿ, ಇಲಾಖಾ ಮಟ್ಟದ ಜನಸ್ಪಂದನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:05 IST
Last Updated 3 ಜನವರಿ 2026, 6:05 IST
ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಹಾಗೂ ಇಲಾಖಾ ಮಟ್ಟದ ಜನಸ್ಪಂದನ ಸಭೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು
ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಶ್ರೀಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಹಾಗೂ ಇಲಾಖಾ ಮಟ್ಟದ ಜನಸ್ಪಂದನ ಸಭೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು   

ಬೆಳ್ತಂಗಡಿ: ಇಲ್ಲಿನ ಪಟ್ಟಣ ಪಂಚಾಯಿತಿ ಹಾಗೂ ಇಲಾಖಾ ಮಟ್ಟದ ಜನಸ್ಪಂದನ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳ್ತಂಗಡಿ ಸಂತೆಕಟ್ಟೆ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಿತು.

ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ, ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಮುಖ್ಯಾಧಿಕಾರಿ ರಾಜೇಶ್ ಕೆ., ಗುರುವಾಯನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮುಗಳಿ ನಾರಾಯಣ ರಾವ್, ಕೃಷಿ, ತೋಟಗಾರಿಕೆ, ಮೆಸ್ಕಾಂ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ, ಕೆಆರ್‌ಡಿಎಲ್, ಮುಡಾ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.

ಬೆಳ್ತಂಗಡಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಜರಿ ಹಾಕಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದಿಲ್ಲ. ಅವರು ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಈ ಬಗ್ಗೆ ತನಿಖೆ ನಡೆಸಬೇಕು. ಈ ಬಗ್ಗೆ ದಾಖಲೆ ಇದೆ. ಆಸ್ಪತ್ರೆ ಸೇರಿದಂತೆ ಕೆಲವು ಇಲಾಖೆಗಳಲ್ಲಿ ಅಧಿಕಾರಿಗಳು ಮೂವ್‌ಮೆಂಟ್ ರಿಜಿಸ್ಟ್ರರ್ ಪುಸ್ತಕ ಮಾಡಿಲ್ಲ, ಎಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ಇಲ್ಲ ಎಂದು ಗ್ರಾಮಸ್ಥರು ಹೇಳಿದರು.

ADVERTISEMENT

ಶಾಸಕ ಹರೀಶ್ ಪೂಂಜ ಮಾತನಾಡಿ, ‘ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಈ ಬಗ್ಗೆ ಡಿಎಚ್‌ಒ ಗಮನಕ್ಕೆ ತರಲಾಗುವುದು. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕಿನ ಯಾವುದೇ ಇಲಾಖಾ ಕಚೇರಿಯಲ್ಲಿ ಅಧಿಕಾರಿಗಳು ಚಲಾವಣಾ ಪುಸ್ತಕ ಇಲ್ಲ. ಜನರು ಇಲಾಖೆಗೆ ಹೋದರೆ ಅಧಿಕಾರಿಗಳು ಇರುವುದಿಲ್ಲ ಎಂದು ನಾಗರಿಕರು ಹೇಳಿದಾಗ ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ತಕ್ಷಣವೇ ಈ ಪದ್ಧತಿಯನ್ನು ಪಾಲಿಸಿ ಅಧಿಕಾರಿಗಳು ಚಲಾವಣಾ ವಹಿಯನ್ನು ಕಚೇರಿಯಲ್ಲಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಆರ್‌ಡಿಎಲ್ ಸಂಸ್ಥೆ ₹ 10 ಕೋಟಿ ವೆಚ್ಚದ ಕಾಮಗಾರಿಯನ್ನು ಸಮರ್ಪಕವಾಗಿ ನಡೆಸಿಲ್ಲ. ನಾಲ್ಕು ಕಾಮಗಾರಿಗಳನ್ನು ಇನ್ನೂ ಕೈಗೊತ್ತಿಕೊಂಡಿಲ್ಲ ಎಂದು ನಾಗರಿಕರು ಹೇಳಿದಾಗ ಸರ್ಕಾರದಿಂದ ಅನುದಾನ ಸಂಪೂರ್ಣವಾಗಿ ಬಿಡುಗಡೆ ಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಕೆಆರ್‌ಡಿಎಲ್ ಸರ್ಕಾರದಿಂದ ಅನುದಾನ ಬಂದರೆ ಮಾತ್ರ ಕಾಮಗಾರಿಯನ್ನು ನಿರ್ವಹಿಸುತ್ತದೆ. ಮಾಡಿದ ಕೆಲಸಕ್ಕೆ ಇನ್ನೂ ಅನುದಾನ ಬಂದಿಲ್ಲ ಎಂದು ತಿಳಿಸಿದರು.

ಬೆಳ್ತಂಗಡಿ ನಗರದ ಅಲ್ಲಟ್ಟಬೈಲು ಬಳಿ ಸುಮಾರು 10 ಮನೆಗಳಿಗೆ ರಸ್ತೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಎರಡು ಕಡೆ ರಸ್ತೆ ಇದ್ದು, ಮಧ್ಯೆ ಸುಮಾರು 10 ಅಡಿಯಷ್ಟು ಜಾಗ ಖಾಸಗಿಯವರದ್ದು, ಅವರಲ್ಲಿ ಮಾತನಾಡಿ ರಸ್ತೆ ಮಾಡಿಕೊಡಬೇಕು ಎಂದು ಸಾರ್ವಜನಿಕರು ಹೇಳಿದರು. ಜಾಗ ಪರಿಶೀಲನೆ ನಡೆಸಿ ಕ್ರಮ ವಹಿಸಲು ಅಧಿಕಾರಿಗಳಿಗೆ ಶಾಸಕ ಸೂಚಿಸಿದರು.

ಬೆಳ್ತಂಗಡಿ ನಗರದ ಕೊಳಚೆ ನೀರು ನದಿಯನ್ನು ಸೇರುತ್ತಿದೆ. ಅದೇ ನದಿಯಿಂದ ಕುಡಿಯುವ ನೀರು ಲಾಯಿಲ ಗ್ರಾಮಕ್ಕೆ ಸರಬರಾಜು ಆಗುತ್ತಿದೆ. ನೀರು ನದಿಗೆ ಬಿಡಬಾರದು, ಬದಲಿ ವ್ಯವಸ್ಥೆ ಮಾಡಬೇಕು ಎಂದು ಎಂದು ಸಾರ್ವಜನಿಕರು ಹೇಳಿದಾಗ ಪರಿಶೀಲನೆ ನಡೆಸಿ ನೋಟಿಸ್ ಜಾರಿಗೊಳಿಸಲು ಶಾಸಕ ಮುಖ್ಯಾಧಿಕಾರಿಗೆ ತಿಳಿಸಿದರು.

ಬೆಳ್ತಂಗಡಿ ಪಟ್ಟಣಕ್ಕೆ ಪ್ರತ್ಯೇಕ ಫೀಡರ್ ಅಳವಡಿಸಬೇಕು, ಪುಂಡಿಕ್ಕು ಪರಿಸರದಲ್ಲಿ ಕಾಡುಕೋಣ, ಚಿರತೆ ಹಾವಳಿ ಬಗ್ಗೆ ಗ್ರಾಮಸ್ಥರು ಗಮನ ಸೆಳೆದರು‌.

ವಾಹನ ಪರವಾನಿಗೆ ಇಲ್ಲದ ವಿದ್ಯಾರ್ಥಿಗಳು ಬೈಕ್ ಚಲಾಯಿಸುವ ಬಗ್ಗೆ, ಬೆಳ್ತಂಗಡಿಯಲ್ಲಿ ಸೋಮವಾರ ಸಂತೆ ದಿನ ರಸ್ತೆ ಬದಿ ಸಂತೆ ಅಂಗಡಿ ಇರುವುದರಿಂದ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ತಾಲ್ಲೂಕು ಕಚೇರಿ, ಪಟ್ಟಣ ಪಂಚಾಯಿತಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುತ್ತಿದ್ದು, ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು  ನಾಗರಿಕರು ಆಗ್ರಹಿಸಿದರು.

ನಗರದಲ್ಲಿ ಬೀದಿ ನಾಯಿಗಳ ಹಾವಳಿ, ಕುಡಿಯುವ ನೀರಿನ ಸಮಸ್ಯೆ,  ಸಾರ್ವಜನಿಕ ಕೆರೆಯ ಒತ್ತುವರಿ, ಪೈಪ್‌ಲೈನ್‌ಗೆ ಹಾನಿಯಾಗಿರುವ ಬಗ್ಗೆ ನಾಗರಿಕರು ಗಮನಸೆಳೆದರು.

ಮುಖ್ಯಾಧಿಕಾರಿ ರಾಜೇಶ್ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.