ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಭಾಗವಾಗಿ, ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ದಕ್ಷಿಣ ಕನ್ನಡ ಲೋಕಸಭಾ ವ್ಯಾಪ್ತಿಯ ಪಿಎಂ ಆವಾಸ್ ಯೋಜನೆಯ ಎಲ್ಲ ಫಲಾನುಭವಿಗಳ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಮಂಗಳವಾರ ನಗರದ ಜಪ್ಪಿನಮೊಗರಿನ ವಿನಯಾ ಶ್ರೀನಿವಾಸ್ ಅವರ ಮನೆ ಮೇಲೆ ಧ್ವಜ ಹಾರಿಸುವ ಮೂಲಕ ಚೌಟ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಕ್ಷೇತ್ರದಲ್ಲಿರುವ ಎಲ್ಲ ಪಿಎಂ ಆವಾಸ್ ಗೃಹ ಫಲಾನುಭವಿಗಳನ್ನು ಭೇಟಿಯಾಗಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆ ಯಶಸ್ವಿಗೊಳಿಸುವುದಕ್ಕೆ ಜನಪ್ರತಿನಿಧಿಗಳು ಮುಂದಾಗಬೇಕು’ ಎಂದರು.
ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ ಸದಸ್ಯರು ಪಿಎಂ ಆವಾಸ್ ಯೋಜನೆ ಫಲಾನುಭವಿಗಳ ಮನೆಗಳಿಗೆ ಭೇಟಿ ಕೊಟ್ಟು ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವಂಎ ಪ್ರೇರಣೆ ನೀಡಬೇಕು. ಮನೆಗಳ ಮೇಲೆ ತ್ರಿವರ್ಣ ಹಾರಿಸುವುದು ಅವರನ್ನು ರಾಷ್ಟ್ರೀಯತೆಯ ದಾರದಿಂದ ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದರು.
ಸೇನೆಯಲ್ಲಿ ಸಲ್ಲಿಸಿದ ಅನುಭವದ ಬಗ್ಗೆ ಮಾತನಾಡಿದ ಅವರು, ‘ನಮ್ಮ ದೇಶದ ಸೈನಿಕರ ಪಾಲಿಗೆ ತ್ರಿವರ್ಣ ಧ್ವಜ ಎನ್ನುವುದು ಉಸಿರು. ದೇಶದ ಪ್ರತೀಕವಾದ ಧ್ವಜಕ್ಕಾಗಿಯೇ ಬದುಕುತ್ತಾನೆ ಮತ್ತು ಸಾಯುತ್ತಾನೆ. ಪ್ರತಿ ಸೈನಿಕನೂ ದೇಶಕ್ಕಾಗಿ ವೀರಮರಣವನ್ನಪ್ಪಿ ಧ್ವಜದಲ್ಲಿ ಸುತ್ತಿ ಮನೆಗೆ ಹಿಂದಿರುಗುವ ಕನಸು ಕಾಣುತ್ತಾನೆ. ಬದುಕಿರುವ ಪ್ರತಿ ಕ್ಷಣವೂ ತಿರಂಗವು ಇನ್ನಷ್ಟು ಎತ್ತರದಲ್ಲಿ ಹಾರಾಡಬೇಕೆನ್ನುವ ದೃಢಸಂಕಲ್ಪ ಹೊಂದಿರುತ್ತಾನೆ’ ಎಂದರು.
ಶಾಸಕ ವೇದವ್ಯಾಸ ಕಾಮತ್, ಪಾಲಿಕೆ ಸದಸ್ಯೆ ವೀಣಾ ಮಂಗಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.