ಉಪ್ಪಿನಂಗಡಿ/ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ತೆಕ್ಕಾರಿನಲ್ಲಿ ಈಚೆಗೆ ನಡೆದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜ, ಮುಸ್ಲಿಂ ಸಮುದಾಯದ ಬಗ್ಗೆ ಆಡಿರುವ ಮಾತಿನ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿ, ವಿಷಾದ ವ್ಯಕ್ತಪಡಿಸಿದ್ದಾರೆ.
‘ನಿಮ್ಮ ಆಹ್ವಾನದ ಮೇರೆಗೆ ಮುಸ್ಲಿಂ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ನಿಮ್ಮ ವೇದಿಕೆಯಲ್ಲಿ ಮುಸ್ಲಿಮರ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ್ದು, ಬೇಸರ ತಂದಿದೆ. ಟ್ಯೂಬ್‌ಲೈಟ್ ಹಾಗೂ ಡೀಸೆಲ್ ಕದ್ದ ಆರೋಪದ ಬಗ್ಗೆ ಸ್ಪಷ್ಟ ಸಾಕ್ಷ್ಯ ಇಲ್ಲದೆ, ನಮ್ಮ ಸಮುದಾಯದ ಮೇಲೆ ಆರೋಪ ಮಾಡಿರುವ ಬಗ್ಗೆ ಉತ್ತರ ನೀಡಬೇಕು’ ಎಂದು ತೆಕ್ಕಾರಿನ ಮುಸ್ಲಿಂ ಒಕ್ಕೂಟದವರು ದೇವಸ್ಥಾನದ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು.
ಇದಕ್ಕೆ ಸ್ಪಷ್ಟೀಕರಣ ನೀಡಲು, ದೇವಸ್ಥಾನದ ಅಧ್ಯಕ್ಷ ನಾಗಭೂಷಣ ರಾವ್ ಅವರ ಮನೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರ ಸಭೆ ನಡೆದಿದೆ. ಈ ಸಭೆಯಲ್ಲಿ ಉಪಸ್ಥಿತರಿದ್ದ ದೇವಸ್ಥಾನದ ಆಡಳಿತ ಮಂಡಳಿಯ ಕೆಲವರು ವಿಷಾದ ವ್ಯಕ್ತಪಡಿಸಿದರು. ಅಲ್ಲದೇ ಸೌಹಾರ್ದದಿಂದ ಇರೋಣ ಎಂಬ ಪತ್ರವನ್ನೂ ಮುಸ್ಲಿಂ ಸಮುದಾಯದವರಿಗೆ ನೀಡಿದರು.
ಮತ್ತೊಂದು ಸಭೆ:
ಈ ನಡುವೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿರುವ ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ನೇತೃತ್ವದಲ್ಲಿ ಗ್ರಾಮದ ಭಕ್ತರ ಸಭೆ ನಡೆದಿದೆ. ಈ ಸಭೆಯಲ್ಲಿ ಶಾಸಕರ ಮಾತನ್ನು ಹೆಚ್ಚಿನವರು ಬೆಂಬಲಿಸಿದ್ದಾರೆ. ಅಲ್ಲದೆ, ಆಡಳಿತ ಮಂಡಳಿ ಸಭೆ ನಡೆಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೊಬ್ಬರು ಮಾಹಿತಿ ನೀಡಿದ್ದಾರೆ.
‘ದೇವಸ್ಥಾನದ ವಿಚಾರದಲ್ಲಿ ಯಾರಾದರೂ ವೈಯಕ್ತಿಕವಾಗಿ ವ್ಯವಹರಿಸಿದ್ದರೆ ಅದಕ್ಕೆ ಆಡಳಿತ ಮಂಡಳಿ ಜವಾಬ್ದಾರಿಯಲ್ಲ. ಆಡಳಿತ ಮಂಡಳಿಯಿಂದ ಯಾವುದೇ ಸಭೆ ನಡೆದಿಲ್ಲ. ಯಾರೊಂದಿಗೂ ವಿಷಾದ ವ್ಯಕ್ತಪಡಿಸುವ ಪ್ರಮೇಯವೇ ಇಲ್ಲ. ಶಾಸಕರ ಹೇಳಿಕೆಗೆ ಬದ್ಧವಾಗಿದ್ದೇವೆ’ ಎಂದು ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ, ಕಾರ್ಯದರ್ಶಿ ಮಂಜುನಾಥ್ ಸಾಲ್ಯಾನ್ ಪ್ರತಿಕ್ರಿಯಿಸಿದ್ದಾರೆ.
ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಭೆಯಲ್ಲಿ ‘ಬ್ಯಾರಿ’ ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಸಿರುವ ಜೊತೆಗೆ, ಧರ್ಮಗಳ ನಡುವೆ ದ್ವೇಷ ಹುಟ್ಟಿಸಲು ಶಾಸಕರು ಯತ್ನಿಸಿದ್ದಾರೆ ಎಂದು ಆರೋಪಿಸಿ, ವರ್ತಕ ಇಬ್ರಾಹಿಂ ಎಸ್.ಬಿ ನೀಡಿದ ದೂರಿನನ್ವಯ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಮೇ 4ರಂದು ಪ್ರಕರಣ ದಾಖಲಾಗಿದೆ.
‘ಊರಿನ ಸೌಹಾರ್ದ ಮುಖ್ಯ’
‘ಊರಿನ ಸೌಹಾರ್ದ ಮುಖ್ಯ. ಪ್ರಸ್ತುತ ಉಂಟಾದ ಗೊಂದಲದಿಂದಾಗಿ ಹಿಂದಿನಿಂದ ಬಂದಿರುವ ಸೌಹಾರ್ದಕ್ಕೆ ಧಕ್ಕೆಯಾಗಬಾರದು. ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಂಡಿದ್ದೇವೆ’ ಎಂದು ದೇವಸ್ಥಾನದ ಕಾರ್ಯಾಧ್ಯಕ್ಷ ಲಕ್ಷ್ಮಣ ಭಟ್ರಬೈಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.