ಕಾಸರಗೋಡಿನ ಮಧೂರು ದೇವಾಲಯ ಸೋಮವಾರ ಜಲಾವೃತಗೊಂಡಿರುವುದು
ಕಾಸರಗೋಡು: ವರುಣನ ಅಬ್ಬರಕ್ಕೆ ಜಿಲ್ಲೆ ತತ್ತರಗೊಂಡಿದ್ದು, ಮಧೂರು ಮದನಂತೇಶ್ವರ ವಿನಾಯಕ ದೇವಾಲಯ ಮತ್ತೆ ಜಲಾವೃತವಾಗಿದೆ. ರೆಡ್ ಅಲೆರ್ಟ್ ಘೋಷಣೆಯಾಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.
ಭಾನುವಾರ ಸುರಿದ ಬಿರುಸಿನ ಮಳೆಗೆ ಜಲಾಶಯಗಳು ತುಂಬಿ ಉಕ್ಕುತ್ತಿದ್ದು, ತಗ್ಗಿನ ಪ್ರದೇಶಗಳು ಜಲಾವೃತಗೊಂಡು ಪ್ರಧಾನ ವಾಹಿನಿಯ ಸಂಪರ್ಕ ಕಡಿದುಕೊಂಡಿವೆ. ಮಧೂರು, ಉಪ್ಪಳ ಪ್ರದೇಶಗಳಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಹರಿಯುತ್ತಿದ್ದು, ನಿವಾಸಿಗಳು ಜಾಗ್ರತೆ ವಹಿಸುವಂತೆ ವಿಪತ್ತು ನಿರ್ವಹಣೆ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಬಹುತೇಕ ಒಳರಸ್ತೆಗಳು ನೀರು ತುಂಬಿ ಸಂಚಾರ ಮೊಟಕುಗೊಂಡಿವೆ. ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡು ತಾಲ್ಲೂಕಿನಲ್ಲಿ ನೆರೆಹಾವಳಿ ಅಧಿಕ ಪ್ರಮಾಣದಲ್ಲಿದೆ.
ಮಧೂರು ದೇವಾಲಯ ಕಳೆದ ತಿಂಗಳು ಸುರಿದ ಮಳೆಗೆ ಜಲಾವೃತಗೊಂಡಿತ್ತು. ಈಗ ಮತ್ತೆ ನೀರು ತುಂಬಿಕೊಂಡಿದೆ. ಅನಿವಾರ್ಯ ಪೂಜೆಗಳಲ್ಲದೆ, ಸಾರ್ವಜನಿಕ ಸೇವೆ ನಡೆಯುತ್ತಿಲ್ಲ. ಪೋಡೋತುರ್ತಿ ಕಾಯಕ್ಕಿಲ್ ಭಗವತಿ ದೇವಾಲಯ ಜಲಾವೃತವಾಗಿದೆ. ಮಡಿಕೈ ತೀಯಾರ್ ನದಿ ಉಕ್ಕಿ ಹರಿಯುತ್ತಿದ್ದು, ಆಸುಪಾಸಿನ ಪ್ರದೇಶಗಳೆಲ್ಲವೂ ಜಲಾವೃತಗೊಂಡಿವೆ.
ವೆಳ್ಳರಿಕುಂಡು ತಾಲ್ಲೂಕಿನ ಮಾಲೋತ್ ಗ್ರಾಮದ ಪರಂಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರೆಹಾವಳಿಯ ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಸೋಮವಾರ 10 ಕುಟುಂಬಗಳಿಗೆ ಸೇರಿದ 37 ಮಂದಿ ಆಶ್ರಯಪಡೆದಿದ್ದಾರೆ. ಅವರಲ್ಲಿ 18 ಮಂದಿ ಪುರುಷರು, 19 ಮಂದಿ ಮಹಿಳೆಯರು, ಕೆಲ ಮಕ್ಕಳೂ ಇದ್ದಾರೆ.
ಜಿಲ್ಲೆಯ ಎಲ್ಲ ಕರಾವಳಿ ಪ್ರದೇಶಗಳಲ್ಲೂ ಕಡಲ್ಕೊರೆತದ ಭೀತಿಯಿದೆ. ಕಡಲಕಿನಾರೆಗೆ ವಿಹಾರಕ್ಕೆ ಯಾರೂ ತೆರಳಕೂಡದು. ಮೀನುಗಾರರು ಸಮುದ್ರಕ್ಕೆ ತೆರಳಕೂಡದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಬಿರುಸಿನ ಗಾಳಿ ಮಳೆಗೆ ಸೋಮವಾರ ಕುಂಬಳೆ ಪೇಟೆಯ ಬದಿಯಡ್ಕ ರಸ್ತೆಯ ಮೂರು ಮಹಡಿಯ ಕಟ್ಟಡವೊಂದರ ಮೇಲ್ಛಾವಣಿಗೆ ಹಾಸಿದ್ದ ದೊಡ್ಡ ಗಾತ್ರದ ಪ್ಲಾಸ್ಟಿಕ್ ಶೀಟ್ ಹಾರಿ ರಸ್ತೆಗೆ ಬಿದ್ದಿದೆ. ಈ ಅವಧಿಯಲ್ಲಿ ಯಾವ ವಾಹನವೂ ಇಲ್ಲಿ ಸಂಚಾರ ನಡೆಸದೇ ಇದ್ದ ಕಾರಣ ಅಪಾಯ ಸಂಭವಿಸಿಲ್ಲ. ಈ ಕಾರಣದಿಂದ ಸಂಚಾರ ಮೊಟಕುಗೊಂಡಿದೆ. ಅಗ್ನಿಶಾಮಕದಳ ಆಗಮಿಸಿ ಶೀಟ್ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದೆ. ಬಿರುಸಿನ ಗಾಳಿಮಳೆಗೆ ಸೋಮವಾರ ಕುಂಬಳೆ-ಮಂಜೇಶ್ವರ ನಡುವಿನ ರೈಲುಹಳಿ ಮೇಲೆ ಮರವೊಂದು ಉರುಳಿದೆ. ಇಲಾಕೆ ಸಿಬ್ಬಂದಿ ಮರ ಕಡಿದು ತೆರವುಗೊಳಿಸಿದರು.
ಕೊಟ್ಟಿಯೂರಿನಲ್ಲಿ ಇಬ್ಬರು ನದಿ ಪಾಲು
ಕಾಸರಗೋಡು: ಕೇರಳದ ಕೊಟ್ಟಿಯೂರು ದೇವಾಲಯದ ದರ್ಶನಕ್ಕೆ ತೆರಳಿದ್ದ ಜಿಲ್ಲೆಯ ಹೊಸದುರ್ಗ ಚಿತ್ತಾರಿ ನಿವಾಸಿ ಅಭಿಜಿತ್ (30) ಮತ್ತು ಕೋಯಿಕೋಡ್ ಅತ್ತೋಳಿ ನಿವಾಸಿ ನಿಶಾದ್ (40) ಅಲ್ಲಿನ ಹೊಳೆಯಲ್ಲಿ ಸೋಮವಾರ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದ್ದರೂ ಸುಳಿವು ಲಭಿಸಿಲ್ಲ. ನಿಶಾದ್ ಅವರು ಕುಟುಂಬ ಸಮೇತ ಭಾನುವಾರ ಕೊಟ್ಟಿಯೂರಿಗೆ ತೆರಳಿದ್ದರು. ಹೊಳೆಗಿಳಿದು ಸ್ನಾನಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.