ADVERTISEMENT

ಹೆದ್ದಾರಿ ಬದಿಯ ಅಂಗಡಿಗಳ ತೆರವು: ಸ್ಥಳೀಯಾಡಳಿತ–ಲೋಕೋಪಯೋಗಿ ಇಲಾಖೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:09 IST
Last Updated 10 ಫೆಬ್ರುವರಿ 2026, 7:09 IST
ತೊಕ್ಕೊಟ್ಟುವಿನಿಂದ ಅಸೈಗೋಳಿವರೆಗಿನ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ಸೋಮವಾರ ನಡೆಯಿತು
ತೊಕ್ಕೊಟ್ಟುವಿನಿಂದ ಅಸೈಗೋಳಿವರೆಗಿನ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ಸೋಮವಾರ ನಡೆಯಿತು   

ಉಳ್ಳಾಲ: ಸಾರ್ವಜನಿಕ ದೂರು ಹಾಗೂ ಅಪಘಾತದ ಕಾರಣದಿಂದ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯಾಡಳಿತದ ನೇತೃತ್ವದಲ್ಲಿ ತೊಕ್ಕೊಟ್ಟು– ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ತೊಕ್ಕೊಟ್ಟುವಿನಿಂದ ಅಸೈಗೋಳಿವರೆಗೆ ಹೆದ್ದಾರಿ ಬದಿಯ ಗೂಡಂಗಡಿಗಳ ತೆರವು ಕಾರ್ಯಾಚರಣೆ ಸೋಮವಾರ ನಡೆಯಿತು.

ಎರಡು ಜೆಸಿಬಿಗಳು ಹಾಗೂ 10 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸಿ ಸುಮಾರು 50 ಗೂಡಂಗಡಿಗಳನ್ನು ತೆರವು ಗೊಳಿಸಿದರು.

ಹೆದ್ದಾರಿ ಸಮೀಪದ ಗೂಡಂಗಡಿ‌, ಬೀದಿ ಬದಿ ವ್ಯಾಪಾರದ ಶೆಡ್‌ ತೆರವುಗೊಳಿಸುವಂತೆ ಸಾರ್ವಜನಿಕರ ದೂರು ಆಧರಿಸಿ ಫೆ.2ರಂದು ಸೂಚನೆ ಅಂಟಿಸಲಾಗಿತ್ತು. ಫೆ.5ರ ಒಳಗೆ ತೆರವು ನಡೆಸುವಂತೆ ಸೂಚನೆ ನೀಡಲಾಗಿತ್ತು.

ADVERTISEMENT

ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಬಸ್‌ ನಿಲ್ದಾಣದ 100 ಮೀ. ಅಂತರದಲ್ಲಿ ಎಲ್ಲಿಯೂ ಮೀನು ಮಾರಾಟ ನಡೆಸದಂತೆಯೂ ಸೂಚಿಸಲಾಯಿತು. 

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರೀತಮ್, ಸಹಾಯಕ ಎಂಜಿನಿಯರ್ ದಾಸ್ ಪ್ರಕಾಶ್, ಉಳ್ಳಾಲ ನಗರಸಭೆ ಆಯುಕ್ತ ಸಂತೋಷ್, ಆರೋಗ್ಯ ಅಧಿಕಾರಿ ನವೀನ್ ಕುಮಾರ್, ಬೆಳ್ಮ ಅಭಿವೃದ್ಧಿ ಅಧಿಕಾರಿ ರಮೇಶ್, ಉಳ್ಳಾಲ, ಕೊಣಾಜೆ ಮತ್ತು ಸಿಎಆರ್ ಸಿಬ್ಬಂದಿ ಭಾಗಿಯಾಗಿದ್ದರು.

ಬೀದಿ ಬದಿ ಅಂಗಡಿಗಳಿಗೆ ಸ್ಥಳೀಯಾಡಳಿತದಿಂದ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ತಳ್ಳುವ ಗಾಡಿಗಳಲ್ಲಿ ವ್ಯಾಪಾರ ನಡೆಸಲು ಅಡ್ಡಿಯಿಲ್ಲ. ಆದರೆ, ಸಂಬಂಧಿಸಿದ ಸ್ಥಳೀಯಾಡಳಿತ ಸಂಸ್ಥೆಯಿಂದ ಬೀದಿ ಬದಿ ವ್ಯಾಪಾರ ಪರವಾನಗಿ ಪಡೆದುಕೊಂಡಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಆಕ್ರಮಿಸದೆ ವ್ಯಾಪಾರ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.