
ಮಂಗಳೂರಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯವರು ಭಾನುವಾರ ಆಯೋಜಿಸಿದ್ದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಭಾಗವಹಿಸಿದ ಜನರು
ಪ್ರಜಾವಾಣಿ ಚಿತ್ರ
ಮಂಗಳೂರು: ‘ಭಾರತದಲ್ಲಿ ಹಿಂದೂಗಳು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಹಿಂದೂ ರಾಷ್ಟ್ರ ನಿರ್ಮಾಣವೇ ಪರಿಹಾರ. ಈ ಕಾರ್ಯದಲ್ಲಿ ನಮ್ಮ ಜೊತೆಯಾದರೆ ಒಳ್ಳೆಯದು. ಇದಕ್ಕೆ ವಿರೋಧ ಮಾಡಿದರೆ, ಅವರನ್ನು ಮೆಟ್ಟಿಯಾದರೂ ಹಿಂದೂ ರಾಷ್ಟ್ರ ನಿರ್ಮಿಸುತ್ತೇವೆ’ ಎಂದು ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ವಕ್ತಾರ ಗುರುಪ್ರಸಾದ್ ಗೌಡ ಹೇಳಿದರು.
ಹಿಂದೂ ಜನ ಜಾಗೃತಿ ಸಮಿತಿ ಆಶ್ರಯದಲ್ಲಿ ಇಲ್ಲಿ ಭಾನುವಾರ ಎರ್ಪಡಿಸಿದ್ದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಮಾತ್ರಕ್ಕೆ ನಮಗೆ ಸಮಾಧಾನವಿಲ್ಲ. ಕಾಶಿ, ಮಥುರಾ, ತಾಜ್‌ಮಹಲ್ ಕೂಡಾ ಬೇಕು. ಎಲ್ಲೆಲ್ಲಿ ದೇವಸ್ಥಾನಗಳನ್ನು ಕಳೆದುಕೊಂಡಿದ್ದೇವೋ, ಅವೆಲ್ಲವನ್ನೂ ಮರಳಿ ಪಡೆಯಬೇಕು. ಆರಾಧನಾ ಸ್ಥಳಗಳ ಕಾಯ್ದೆ ಪ್ರಕಾರ ಯಾವುದೇ ಧಾರ್ಮಿಕ ಸ್ಥಳವನ್ನು 1947ರಲ್ಲಿದ್ದ ಸ್ಥಿತಿಗಿಂತ ಮೂಲಸ್ಥಿತಿಗೆ ಒಯ್ಯಲು ಸಾಧ್ಯವಿಲ್ಲ. ದೇಶದಲ್ಲಿ ಅನೇಕ ಕಡೆ ದೇವಸ್ಥಾನಗಳನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ. ಇದಕ್ಕೆ ಸಾಕ್ಷ್ಯಗಳಿದ್ದರೂ ಅವುಗಳನ್ನು ಮರಳಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಕಾಯ್ದೆಯನ್ನು ಒಮ್ಮತದಿಂದ ವಿರೋಧಿಸಬೇಕಿದೆ’ ಎಂದರು.
‘ಭಾರತ ಯಾವತ್ತಿದ್ದರೂ ಹಿಂದೂ ರಾಷ್ಟ್ರವೇ. ಅದಕ್ಕೆ ‘ಜಾತ್ಯತೀತ’ದ ಗ್ರಹಣ ಹಿಡಿದಿದೆ. ಅದನ್ನು ಸರಿಸಲು ನಾವೆಲ್ಲ ಒಟ್ಟಾಗಬೇಕಿದೆ. ದೇವಸ್ಥಾನಗಳ ಸರ್ಕಾರೀಕರಣವನ್ನು ಕೊನೆಗಾಣಿಸಿ ಸಾತ್ವಿಕ ಸಮಾಜ ನಿರ್ಮಿಸಲು ರಾಮರಾಜ್ಯದ ಮಾದರಿಯೇ ಬೇಕು. ‘ಲವ್ ಜಿಹಾದ್’, ‘ಹಲಾಲ್ ಜಿಹಾದ್’, ಗೋಹತ್ಯೆ... ಮೊದಲಾದ ಸಮಸ್ಯೆಗಳಿಗೆ ಹಿಂದೂ ರಾಷ್ಟ್ರವೇ ಪರಿಹಾರ’ ಎಂದರು.
ವಕೀಲ ಜಯಪ್ರಕಾಶ್ ಆರ್.,‘ಯಾವುದೇ ರಾಜಕೀಯ ವ್ಯಕ್ತಿ ಅಥವಾ ಪಕ್ಷವನ್ನು ನಂಬಿ ನಾವು ಕೆಲಸ ಮಾಡುತ್ತಿಲ್ಲ. ರಾಜಕೀಯ ಪಕ್ಷವನ್ನು ನಂಬಿಕೊಂಡರೆ ಹಿಂದೂಗಳ ಭವಿಷ್ಯ ಸುಭದ್ರವಾಗದು. ಪಕ್ಷ ರಾಜಕೀಯದಿಂದ ಹೊರಬಂದು ಹಿಂದೂಗಳ ಒಳಿತಿನ ಬಗ್ಗೆ ಆಲೋಚಿಸಬೇಕು. ದೇಶದಲ್ಲಿ ರಚನೆಯಾಗುತ್ತಿರುವ ಕಾನೂನುಗಳು, ನೀತಿಗಳು ನಿಜಕ್ಕೂ ಹಿಂದೂಗಳ ಪರವಾಗಿವೆಯೇ ಎಂಬುದನ್ನೂ ಪರಿಶೀಲಿಸಬೇಕು’ ಎಂದರು.
‘ಚುನಾವಣೆಯ ಕಾರ್ಯಸೂಚಿಗಳನ್ನು ರಾಜಕಾರಣಿಗಳು ಗೊತ್ತುಪಡಿಸುವುದಲ್ಲ. ಮತ ಕೇಳಲು ಮನೆಗೆ ಬಂದವರಿಗೆ ನಾವೂ ಪ್ರಶ್ನೆ ಮಾಡಬೇಕು. ಹಿಂದೂಗಳ ನೀರೀಕ್ಷೆ ಏನೆಂದು ಹೇಳಬೇಕು. ಇಲ್ಲದೇ ಹೋದರೆ ಹಿಂದೂ ಹಿತದ ಜೊತೆ ರಾಜಿ ಮಾಡಿಕೊಂಡೇ ಬದುಕಬೇಕಾಗುತ್ತದೆ’ ಎಂದರು.
‘ಮಹಮ್ಮದ್ ಘೋರಿ, ಘಜನಿಯಂತಹ ಮೊಗಲ್ ರಾಜರು ಲೂಟಿ ಮಾಡುತ್ತಿದ್ದಾಗಲೂ ಜನ ನಿಂತು ನೋಡಿದ್ದರು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಾಗಿದೆ. ಆದರೆ ತಲಾ ಆದಾಯ ಹೆಚ್ಚಾಗಿದೆಯೇ. ಕಾಂಕ್ರೀಟ್ ರಸ್ತೆಗಳನ್ನು ಮತ್ತೆ ಮತ್ತೆ ಅಗೆಯಲು ಬಳಕೆಯಾಗುವ ನಮ್ಮ ತೆರಿಗೆ ದುಡ್ಡು ಯಾರ ಜೇಬು ಸೇರುತ್ತಿದೆ ಎಂಬ ಬಗ್ಗೆಯೂ ಯೋಚಿಸಬೇಕು. ಸ್ಥಿತಿ ಹೀಗೆಯೇ ಮುಂದುವರಿದರೆ ಹಿಂದೂಗಳು ಘನಘೋರ ಸ್ಥಿತಿ ಎದುರಿಸಬೇಕಾಗುತ್ತದೆ’ ಎಂದರು.
ಸಮಿತಿಯ ದ.ಕ ಜಿಲ್ಲಾ ಘಟಕದ ಸಂಚಾಲಕ ಪ್ರಣವ್ ಮಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
‘ಹಿಂದೂ ರಾಷ್ಟ್ರ ರಾಜಕೀಯ ಪರಿಕಲ್ಪನೆಯಲ್ಲ’
'ಭಾರತ ಹಿಂದೂ ರಾಷ್ಟ್ರವಾಗಿ ರೂಪುಗೊಳ್ಳುತ್ತಿರುವ ಬಗ್ಗೆ ವಿದೇಶಗಳಲ್ಲೂ ಚರ್ಚೆ ನಡೆಯುತ್ತಿದೆ. ನಾವು ಪ್ರತಿಪಾದಿಸುವ ಹಿಂದೂ ರಾಷ್ಟ್ರ ರಾಜಕೀಯ ಪರಿಕಲ್ಪನೆ ಅಲ್ಲ. ಈಶ್ವರ ಸರ್ವೋತ್ಕೃಷ್ಟ ನ್ಯಾಯ ವ್ಯವಸ್ಥೆಯೇ ಹಿಂದೂರಾಷ್ಟ್ರ’ ಎಂದು ಸಮಿತಿಯ ವಕ್ತಾರರಾದ ಲಕ್ಷ್ಮೀ ಪೈ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.