ADVERTISEMENT

ಮಂಗಳೂರು| ಭಾರತದಲ್ಲಿ ಗೋಲ್‌ಕೀಪರ್‌ಗಳ ಉದಯ ಕಾಲ: ಧನರಾಜ್ ಪಿಳ್ಳೈ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 5:20 IST
Last Updated 13 ಅಕ್ಟೋಬರ್ 2025, 5:20 IST
<div class="paragraphs"><p>ಈಜು&nbsp;ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಯನ್‌ ಧನರಾಜ್ ಪಿಳ್ಳೆ ಅವರನ್ನು ಗೌರವಿಸಲಾಯಿತು. ಯತೀಶ್ ಬೈಕಂಪಾಡಿ, ಅಜಿತ್ ಕುಮಾರ್ ರೈ ಮಾಲಾಡಿ,&nbsp;ಕಿಶೋರ್ ಕುಮಾರ್,&nbsp;ಐವನ್ ಡಿಸೋಜ ಪಾಲ್ಗೊಂಡಿದ್ದರು&nbsp; </p></div>

ಈಜು ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಯನ್‌ ಧನರಾಜ್ ಪಿಳ್ಳೆ ಅವರನ್ನು ಗೌರವಿಸಲಾಯಿತು. ಯತೀಶ್ ಬೈಕಂಪಾಡಿ, ಅಜಿತ್ ಕುಮಾರ್ ರೈ ಮಾಲಾಡಿ, ಕಿಶೋರ್ ಕುಮಾರ್, ಐವನ್ ಡಿಸೋಜ ಪಾಲ್ಗೊಂಡಿದ್ದರು 

   

ಪ್ರಜಾವಾಣಿ ಚಿತ್ರ

ಮಂಗಳೂರು: ಹಾಕಿ ಇಂಡಿಯಾ ಗೋಲ್‌ಕೀಪಿಂಗ್ ಶಿಬಿರಗಳನ್ನು ಏರ್ಪಡಿಸುತ್ತಿರುವುದರಿಂದ ಅತ್ಯುತ್ತಮ ಗೋಲ್‌ಕೀಪರ್‌ಗಳ ಉದಯವಾಗುತ್ತಿದ್ದು ಎ.ಬಿ ಸುಬ್ಬಯ್ಯ, ಆಶಿಶ್ ಬಲ್ಲಾಳ್‌, ಶ್ರೀಜೇಶ್ ಅವರಂಥ ಆಟಗಾರರು ಇದ್ದ ಕಾಲ ಮರುಕಳಿಸಲಿದೆ ಎಂದು ಒಲಿಂಪಿಯನ್ ಹಾಕಿ ಪಟು ಧನರಾಜ್ ಪಿಳ್ಳೈ ಅಭಿಪ್ರಾಯಟ್ಟರು. 

ADVERTISEMENT

ನಗರದ ಮಂಗಳ ಈಜು ಕ್ಲಬ್, ಲಕ್ಷ್ಯನ್‌ ಕ್ರೀಡಾ ಅಕಾಡೆಮಿ ಮತ್ತು ಪನಾಮ ಕಾರ್ಪೊರೇಷನ್ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಈಜು ಸ್ಪರ್ಧೆ ಉದ್ಘಾಟಿಸಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು ಸುಮಾರು 20ರಷ್ಟು ಮಂದಿಯನ್ನು ಒಂದೇ ಕಡೆ ಸೇರಿಸಿ ತರಬೇತಿ ನೀಡುವುದರಿಂದ ಉತ್ತಮ ಗೋಲ್‌ಕೀಪರ್‌ಗಳ ಶೋಧನೆ ಮಾಡಲು ಅನುಕೂಲ ಆಗುತ್ತಿದೆ ಎಂದರು. 

ಒಂದು ದಶಕದಿಂದ ಭಾರತ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು ಜಗತ್ತಿನ ಎಲ್ಲ ಪ್ರಬಲ ತಂಡಗಳ ವಿರುದ್ಧ ಪ್ರಮುಖ ಟೂರ್ನಿಗಳಲ್ಲಿ ಗೆಲುವು ಸಾಧಿಸಿರುವುದು ಅತ್ಯುತ್ತಮ ಬೆಳವಣಿಗೆ. ಈಗಿನ ಭಾರತ ಹಾಕಿ ತಂಡದ ಪ್ರದರ್ಶನ ತೃಪ್ತಿಕರವಾಗಿದ್ದು ಒಲಿಂಪಿಕ್ಸ್‌ನಲ್ಲಿ ಸತತ ಕಂಚಿನ ಪದಕ ಗೆದ್ದಿರುವ ತಂಡ ಏಷ್ಯಾಕಪ್‌ನಲ್ಲೂ ಜಯ ಗಳಿಸಿದೆ. ಆಟಗಾರರ ಫಿಟ್‌ನೆಸ್‌ ಮಟ್ಟ ಚೆನ್ನಾಗಿದ್ದು ಆಸ್ಟ್ರೇಲಿಯಾ, ಜರ್ಮನಿ, ಬೆಲ್ಜಿಯಂ, ಹಾಲೆಂಡ್, ನೆದರ್ಲೆಂಡ್‌, ಅರ್ಜೆಂಟೀನಾ ಮುಂತಾದ ದೇಶಗಳಿಗೆ ಪ್ರಬಲ ಪೈಪೋಟಿ ನೀಡುವಷ್ಟ ಸಮರ್ಥವಾಗಿದೆ ಎಂದು ಅವರು ಹೇಳಿದರು. 

‘ಒಂದೂವರೆ ದಶಕದಿಂದ ಭಾರತದಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಹಾ ಸಿಗುತ್ತಿದೆ. ಸರ್ಕಾರ, ಹಾಕಿ ಇಂಡಿಯಾ, ಹಾಕಿ ಲೀಗ್‌ನ ಫ್ರಾಂಚೈಸಿಗಳು, ಇಂಡಿಯನ್ ಏರ್‌ಲೈನ್ಸ್, ಏರ್‌ ಇಂಡಿಯಾ, ರೈಲ್ವೆ, ಕಸ್ಟಮ್ಸ್‌, ಸರ್ವಿಸಸ್‌ ಮುಂತಾದ ಸಂಸ್ಥೆಗಳಿಂದ ಉತ್ತಮ ಬೆಂಬಲ ಸಿಗುತ್ತಿದೆ. ಏಷ್ಯಾ ಕಪ್‌ನಲ್ಲಿ ಗೆದ್ದ ತಂಡದಲ್ಲಿದ್ದ ಆಟಗಾರರು, ಕೋಚ್ ಮತ್ತು ನೆರವು ಸಿಬ್ಬಂದಿಗೆ ಬಿಹಾರ ಸರ್ಕಾರ ತಲಾ ₹ 10 ಲಕ್ಷ ನೀಡಿದೆ. ಇಂಥ ಪ್ರೋತ್ಸಾಹದಿಂದ ಕ್ರೀಡೆ ಎತ್ತರಕ್ಕೆ ಬೆಳೆಯಲಿದೆ ಎಂದು ಅವರು ಹೇಳಿದರು. 

‘ಪೆನಾಲ್ಟ್ ಕಾರ್ನರ್ ‘ಕಲೆ’ ಈಗಲೂ ಉಳಿದಿದೆ. ಭಾರತದ ಹರ್ಮನ್ ಪ್ರೀತ್‌ ಸಿಂಗ್ ಅವರಂಥ ಆಟಗಾರರು ಇನ್ನೂ ಅನೇಕ ಮಂದಿ ಇದ್ದಾರೆ. ಅವರ ಸಾಮರ್ಥ್ಯದ ಬಲ ವಿವಿಧ ಟೂರ್ನಿಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಅದರ ಫಲ ತಂಡಗಳಿಗೆ ಸಿಗುತ್ತಿದೆ’ ಎಂದ ಅವರು ‘ನವೆಂಬರ್‌ 7ರಂದು ಭಾರತದ ಹಾಕಿಗೆ 100 ವರ್ಷ ತುಂಬಲಿದ್ದು ಅದರ ಅಂಗವಾಗಿ ವಿವಿಧ ಕಡೆಗಳಲ್ಲಿ ಮಕ್ಕಳು ಪ್ರದರ್ಶನ ಪಂದ್ಯಗಳನ್ನು ಆಡಲಿದ್ದಾರೆ ಎಂದರು.

ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪದಕ ವಿತರಿಸಿ ಮಾತನಾಡಿದ ಧನರಾಜ್ ಪಿಳ್ಳೈ ‘ಕ್ರೀಡಾಪಟುಗಳು ಕನಸು ಕಾಣಬೇಕು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಪೋಷಕರು ಅವರಿಗೆ ಬೆಂಬಲ ನೀಡಬೇಕು’ ಎಂದರು.

ದಕ್ಷಿಣ ಕನ್ನಡ ಈಜು ಸಂಸ್ಥೆಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಮಾತನಾಡಿ ಜಿಲ್ಲೆಯಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದಾರೆ. ಆದರೆ ಅವರಿಗೆ ಸೂಕ್ತ ಸೌಲಭ್ಯಗಳ ಕೊರತೆ ಇದೆ. ನಗರದ ಈಜುಪಟುಗಳಿಗಾಗಿ ಡೈವಿಂಗ್ ಬೋರ್ಡ್ ಸೌಲಭ್ಯವನ್ನು ಒದಗಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಕೋರಿದರು. 

ಶಾಸಕರಾದ ಐವನ್ ಡಿಸೋಜ, ಕಿಶೋರ್ ಕುಮಾರ್, ಲಕ್ಷ್ಯನ್‌ ಕ್ರೀಡಾ ಅಕಾಡೆಮಿಯ ಸಹ ಸ್ಥಾಪಕ ಜೀವನ್ ಮಹಾದೇವು, ಪನಾಮ ಕಾರ್ಪೊರೇಷನ್‌ನ ವಿವೇಕ್ ರಾಜ್‌ ಪೂಜಾರಿ, ಮಂಗಳ ಈಜು ಕ್ಲಬ್‌ನ ಕಾರ್ಯದರ್ಶಿ ಶಿವಾನಂದ ಗಟ್ಟಿ, ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್‌ಕುಮಾರ್ ಮಾಲಾಡಿ, ದರ್ಶನ್ ಶೆಟ್ಟಿ ಮತ್ತು ದಿನೇಶ್ ಕುಂದರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.