
ಪುತ್ತೂರು: ನಿವೇಶನ ರಹಿತರಿಗೆ ಕನಿಷ್ಠ 3 ಸೆಂಟ್ಸ್ ಜಾಗ ನೀಡಬೇಕಾಗಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರು ಹಾಗೂ ಬಂಟ್ವಾಳ ವ್ಯಾಪ್ತಿಗಳಲ್ಲಿ 2 ಸಾವಿರ ನಿವೇಶನಗಳನ್ನು ನೀಡಲು ತಾಲ್ಲೂಕು ಪಂಚಾಯಿತಿಗೆ ಗುರಿ ನೀಡಲಾಗಿದೆ. ಸುಮಾರು 300 ಎಕರೆ ಜಾಗವನ್ನು ಕ್ಷೇತ್ರದ ವಿವಿಧ ಪಂಚಾಯಿತಿ ವ್ಯಾಪ್ತಿಗಳಲ್ಲಿ ಗುರುತಿಸಲಾಗಿದೆ. ಇದು ರಾಜ್ಯದಲ್ಲೇ ಗುರುತಿಸಿಕೊಳ್ಳುವ ಯೋಜನೆಯಾಗಲಿದೆ. ಅಧಿಕಾರಿಗಳು ಪ್ರಯತ್ನಪಟ್ಟರೆ ಎಲ್ಲವೂ ಸಾಧ್ಯವಾಗುತ್ತದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ನಗರದ ಪರ್ಲಡ್ಕದಲ್ಲಿ ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ₹5.50 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಲು ಉದ್ದೇಶಿಸಿರುವ ಪುತ್ತೂರು ತಾಲ್ಲೂಕು ಪಂಚಾಯಿತಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಜಿಲ್ಲಾ ಕೇಂದ್ರವಾಗುವತ್ತ ಹೆಜ್ಜೆ ಇಡುತ್ತಿರುವ ಪುತ್ತೂರಿಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಒಳಗೊಂಡ ಸುಸಜ್ಜಿತ ತಾಲ್ಲೂಕು ಪಂಚಾಯಿತಿ ಕಟ್ಟಡ ಒಂದು ವರ್ಷದಲ್ಲಿ ನಿರ್ಮಾಣ ಆಗಲಿದೆ. ನಗರ ವ್ಯಾಪ್ತಿಯಲ್ಲೇ ತಾಲ್ಲೂಕು ಪಂಚಾಯಿತಿ ಕಟ್ಟಡ ನಿರ್ಮಾಣ ಆಗುತ್ತಿರುವುದರಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಮುಂದೆ ಪುತ್ತೂರಿನಲ್ಲಿ ಸಿಟಿ ಬಸ್ ಆರಂಭಿಸುವ ಯೋಚನೆಯೂ ಇದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಇಒ ನವೀನ್ ಕುಮಾರ್ ಭಂಡಾರಿ, ಹಿಂದಿನ ಅವಧಿಯಲ್ಲಿ ತಾಲ್ಲೂಕು ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿದ್ದ ಅನುದಾನ ಕಾರಣಾಂತರಗಳಿಂದ ಕಡಬಕ್ಕೆ ಹೋಗಿತ್ತು. ಶಾಸಕರು ನಿರಂತರ ಫಾಲೋಅಪ್ ಮಾಡಿ ಪುತ್ತೂರಿಗೆ ದೊಡ್ಡ ಕೊಡುಗೆ ಸಿಗುವಂತೆ ಮಾಡಿದ್ದಾರೆ. ಇದು ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಿಗೆ ಮಾತ್ರವಾಗಿರದೆ 29 ಇಲಾಖೆಗಳಿಗೆ ಸಂಬಂಧಪಟ್ಟ ಕಟ್ಟಡವಾಗುತ್ತದೆ ಎಂದರು.
ಪುತ್ತೂರು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಲ ರಾಮಚಂದ್ರ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪಂಚಾಯಿತಿರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭರತ್ ಬಿ.ಎಂ ಇದ್ದರು. ತಾಲ್ಲೂಕು ಪಂಚಾಯಿತಿಯ ಭರತ್ ರಾಜ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.