ADVERTISEMENT

ನಾನು ಅಲೆಮಾರಿ ರಾಜಕಾರಣಿ ಅಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 9:13 IST
Last Updated 5 ಜನವರಿ 2023, 9:13 IST
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ನಾರಾಯಣ ಗುರು ಮೂರ್ತಿಗೆ ಪೂಜೆ ಸಲ್ಲಿಸಿದರು.
ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ನಾರಾಯಣ ಗುರು ಮೂರ್ತಿಗೆ ಪೂಜೆ ಸಲ್ಲಿಸಿದರು.   

ಮಂಗಳೂರು: 'ಚುನಾವಣೆಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಹಾಗೆಂದು ನಾನು ಅಲೆಮಾರಿ ರಾಜಕಾರಣಿಯಲ್ಲ. ಹೈಕಮಾಂಡ್ ತೀರ್ಮಾನದಂತೆ ಕ್ಷೇತ್ರದ ಆಯ್ಕೆಯಾಗಲಿದೆ' ಎಂದು ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜಿಲ್ಲೆಗೆ ಬಂದಿರುವ ಅವರು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ಪತ್ರಕರ್ತರ ಜೊತೆ ಮಾತನಾಡಿದರು.

ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ವದಂತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಕೋಲಾರದಲ್ಲಿ ಸ್ಫರ್ಧಿಸುವಂತೆ ಅಲ್ಲಿನ ಬೆಂಬಲಿಗರು ಆಗ್ರಹಿಸಿದ್ದಾರೆ. ಕಳೆದ ಬಾರಿ ಗೆದ್ದಿರುವ ಬಾದಾಮಿ‌ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವುದಕ್ಕೂ ಒತ್ತಾಯ ಇದೆ.‌ ಪುತ್ರನನ್ನು ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂದು ಬಯಸುವವರೂ ಇದ್ದಾರೆ. ಎಲ್ಲದಕ್ಕೂ ಹೈಕಮಾಂಡ್ ತೀರ್ಮಾನವೇ ಅಂತಿಮ' ಎಂದು ಅವರು ಹೇಳಿದರು.

ADVERTISEMENT

ನಾಯಿ ಮರಿ ಎಂದಿಲ್ಲ: 'ಮುಖ್ಯಮಂತ್ರಿಯನ್ನು ನಾಯಿಮರಿ ಎಂದು ಹೇಳಿಲ್ಲ. ರಾಜ್ಯಕ್ಕೆ ಬೇಕಾದಷ್ಟು ಅನುದಾನ ತರಲು ಕೇಂದ್ರದ ಜೊತೆ ಮಾತನಾಡುವ ಧೈರ್ಯ ಬೇಕು ಎಂದಷ್ಟೆ ಹೇಳಿದ್ದೆ' ಎಂದ ಸಿದ್ದರಾಮಯ್ಯ ಲವ್ ಜಿಹಾದ್ ಕುರಿತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ 'ನಳಿನ್ ಕುಮಾರ್ ಪೆದ್ದು ಪೆದ್ದಾಗಿ ಮಾತನಾಡಿ ಬಿಜೆಪಿಯ ಜೋಕರ್ ಎನಿಸಿಕೊಂಡಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಹೇಳಲು ಅವರು ಯಾರು? ಜೈಲಿಗೆ ಕಳುಹಿಸುವುದು ನ್ಯಾಯಾಲಯವೇ ಹೊರತು ನಳಿನ್ ಕುಮಾರ್ ಅಲ್ಲ. ಕಾನೂನು ತಿಳಿಯದೆ ಮಾತನಾಡಿ ವಿದೂಷಕನಂತಾಗಿದ್ದಾರೆ' ಎಂದರು.

ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆಯಾದ ವಿಷಯದ ಕುರಿತು ಮಾತನಾಡಿದ ಅವರು ಇಂಥ ಪ್ರಕರಣಗಳು ಬೇಕಾದಷ್ಟು ಇವೆ. ಆದ್ದರಿಂದಲೇ ಇದನ್ನು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರು ಕರೆದಿರುವುದು ಎಂದು ಅವರು ಹೇಳಿದರು. ಸರ್ಕಿಟ್ ಹೌಸ್ ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಖಂಡರ ಜೊತೆ‌ ಸಿದ್ದರಾಮಯ್ಯ ಮಾತುಕತೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.