ADVERTISEMENT

ಕೋಳಿ ಅಂಕ: ಬಿಜೆಪಿ ಜಿಲ್ಲಾಧ್ಯಕ್ಷ ಸೇರಿ 27 ಮಂದಿ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:02 IST
Last Updated 22 ಡಿಸೆಂಬರ್ 2025, 5:02 IST
   

ವಿಟ್ಲ (ದಕ್ಷಿಣ ಕನ್ನಡ ಜಿಲ್ಲೆ): ಇಲ್ಲಿನ ಕೇಪು ಗ್ರಾಮದ ಮುರಳೀಧರ ರೈ ಎಂಬವರ ಗದ್ದೆಯಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದವರ ಮೇಲೆ ಭಾನುವಾರ ದಾಳಿ ಮುಂದುವರೆಸಿರುವ ವಿಟ್ಲ ಪೊಲೀಸರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿ 27 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಖಚಿತ ಮಾಹಿತಿ ಬಂದ ಮೇರೆಗೆ ವಿಟ್ಲ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಹಲವು ಜನರು ಗುಂಪು ಸೇರಿ ಹಿಂಸಾತ್ಮಕವಾಗಿ ಕೋಳಿ ಅಂಕ ಆಟವಾಡುತ್ತಿರುವುದು ಕಂಡು ಬಂದಿದೆ.  ಅಲ್ಲಿ ನೆರೆದಿದ್ದವರಿಗೆ ಅಕ್ರಮ‌ ಕೋಳಿ ಅಂಕದ ಬಗ್ಗೆ ಕಾನೂನು ತಿಳುವಳಿಕೆ ನೀಡಿದರೂ ಸೇರಿದ್ದ ಜನರು ಸ್ಥಳದಿಂದ ತೆರಳದೇ ನಿಂತಿದ್ದರು. ಅಲ್ಲದೇ ಸ್ಥಳದಲ್ಲಿದ್ದ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ, ಮುಖಂಡರಾದ ಮುರಳೀಧರ ರೈ, ದಯಾನಂದ ಉಜಿರೆಮಾರು, ಹರಿಪ್ರಸಾದ್‌ ಯಾದವ್‌, ಅಶೋಕ ಶೆಟ್ಟಿ ವಿಟ್ಲ, ರಾಜೇಶ್‌ ಬಾಳೆಕಲ್ಲು ಅವರು ಅಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ನೀಡಿರುತ್ತಾರೆ ಎಂದು ಆರೋಪಿಸಲಾಗಿದೆ.

ಮುಂದುವರೆದು ಸ್ಥಳದಲ್ಲಿ ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ ಕೃತ್ಯದಲ್ಲಿ ತೊಡಗಿದ್ದ 20 ಜನರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ 20 ಹುಂಜ ಹಾಗೂ ಕೋಳಿ ಅಂಕಕ್ಕೆ ಬಳಸುವ ಕತ್ತಿ (ಬಾಲು) ವಶಪಡಿಸಿಕೊಳ್ಳಲಾಗಿದೆ. ಕಾನೂನು ಬಾಹಿರ ಕೃತ್ಯಕ್ಕೆ ಪ್ರಚೋದನೆ ನೀಡಿದ  ಹಾಗೂ ಕೃತ್ಯದಲ್ಲಿ ತೊಡಗಿದ್ದವರು ಸೇರಿ ಒಟ್ಟು 27 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.