ADVERTISEMENT

ರಾಜ್ಯ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಅನ್ಯಾಯ: ಸಂಸದ ಬ್ರಿಜೇಶ್ ಚೌಟ

ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಣಿ -ವಿಕಸಿತ ಭಾರತ ಸಂಕಲ್ಪ ಸಭೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:08 IST
Last Updated 21 ಜೂನ್ 2025, 14:08 IST
ಲಾಯಿಲದ ಸ್ಥಾನಿಕ ಸಭಾ ಭವನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸಿದರು
ಲಾಯಿಲದ ಸ್ಥಾನಿಕ ಸಭಾ ಭವನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಸಂಸದ ಬ್ರಿಜೇಶ್ ಚೌಟ ಉದ್ಘಾಟಿಸಿದರು   

ಬೆಳ್ತಂಗಡಿ: 'ಜಿಲ್ಲೆಗೆ ಬೇಕಾದ ಮೂಲ ಸೌಕರ್ಯ ನೀಡದ, ಕಾನೂನು ಸುವ್ಯವಸ್ಥೆಗಳನ್ನು ಕಾಪಾಡದೇ ರಾಜ್ಯ ಸರ್ಕಾರ ಜಿಲ್ಲೆಗೆ ಅನ್ಯಾಯ ಮಾಡುತ್ತಿದೆ. ಜಿಲ್ಲೆಯ ಜನರ ಮೇಲೆ ದ್ವೇಷ ಸಾಧಿಸುತ್ತಾ ಜಿಹಾದಿ ಮಾನಸಿಕ ಅಧಿಕಾರ ನಡೆಸುತ್ತಿದೆ. ಇದರಿಂದ ಇಲ್ಲಿ ವಿಚಿತ್ರ ಪರಿಸ್ಥಿತಿಯಲ್ಲಿ ಕೆಲಸ ಮಾಡುವ ಸ್ಥಿತಿ ಉಂಟಾಗಿದೆ' ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.

ಇಲ್ಲಿನ ಲಾಯಿಲದ ಸ್ಥಾನಿಕ ಸಭಾ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಬೆಳ್ತಂಗಡಿ ಮಂಡಲ ಕಾರ್ಯಕಾರಿಣಿ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಮಾತನಾಡಿದರು.

‘ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಮಾದರಿಯಾಗಿದ್ದು ಎಲ್ಲಾ ಚುನಾವಣೆಗಳಲ್ಲೂ ಪಕ್ಷಕ್ಕೆ ಶಕ್ತಿಯನ್ನು ತುಂಬುತ್ತಿದೆ. ಇಲ್ಲಿನ ಕಾರ್ಯಕರ್ತರ ಬದ್ಧತೆ ಶ್ಲಾಘನೀಯ. ಕೇಂದ್ರ ಸರ್ಕಾರದ ಪ್ರತಿ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಿವೆ. ರಾಷ್ಟ್ರ ವಿರೋಧಿಗಳಿಗೆ ಕೇಂದ್ರ ಸರ್ಕಾರ ರಾಮಬಾಣವಾಗಿದೆ' ಎಂದು ಹೇಳಿದರು.

ADVERTISEMENT

ಶಾಸಕ ಹರೀಶ್ ಪೂಂಜ ಮಾತನಾಡಿ, ‘ಕೇಂದ್ರ ಸರ್ಕಾರ ತಾಲ್ಲೂಕಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹1,500 ಕೋಟಿಗಿಂತ ಹೆಚ್ಚಿನ ಅನುದಾನ ನೀಡಿದೆ. ರಾಜ್ಯ ಸರ್ಕಾರ ಕಳೆದ ಅವಧಿಯಲ್ಲಿ ಬಿಡುಗಡೆಗೊಂಡ ಅನುದಾನವನ್ನು ವಾಪಸ್‌ ಪಡೆದು ಅನ್ಯಾಯ ಮಾಡಿದೆ. ಮೋದಿ ಸರ್ಕಾರವು ಕಳೆದ 11 ವರ್ಷಗಳಲ್ಲಿ ಬಲಿಷ್ಠ ಭಾರತವನ್ನು ನಿರ್ಮಾಣ ಮಾಡಿದ್ದು, ಇದು ಜಗತ್ತಿನ ಜನರೇ ಮೆಚ್ಚುವಂತಾಗಿದೆ. ಗ್ರಾಮೀಣ ಭಾಗದ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿದ್ದು ಪ್ರತಿ ಯೋಜನೆಗಳು ಬೂತ್ ಮಟ್ಟವನ್ನು ತಲುಪಿವೆ' ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿದರು.

ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಆಳ್ವ, ಪ್ರೇಮಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೆಳಾಲು, ಕಾರ್ಯದರ್ಶಿ ವಸಂತಿ ಮಚ್ಚಿನ , ಜಿಲ್ಲಾ ಉಪಾಧ್ಯಕ್ಷರಾದ ಹರೀಶ್ ಕಂಜಿಪಿಲಿ, ರಾಕೇಶ್ ರೈ, ಹರಿಕೃಷ್ಣ ಬಂಟ್ವಾಳ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಗಣೇಶ್ ನಾವೂರು ವಂದೇ ಮಾತರಂ ಗೀತೆ ಹಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ಸ್ವಾಗತಿಸಿ, ಪ್ರಶಾಂತ್ ಪಾರೆಂಕಿ ವಂದಿಸಿದರು. ಲಾಯಿಲ ಗ್ರಾಮ ಪಂಚಾಯಿತಿ ಸದಸ್ಯ ಅರವಿಂದ ಲಾಯಿಲ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.