ADVERTISEMENT

ಕೇಂದ್ರದಿಂದ ತೈಲದ ಹೆಸರಿನಲ್ಲಿ ಲೂಟಿ: ಐವನ್ ಡಿಸೋಜ ಆರೋಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 9:28 IST
Last Updated 1 ಸೆಪ್ಟೆಂಬರ್ 2018, 9:28 IST
ಐವನ್ ಡಿಸೋಜ
ಐವನ್ ಡಿಸೋಜ   

ಮಂಗಳೂರು: ‘ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಮೂಲಕ ‘ತೈಲ’ದ ಹೆಸರಿನಲ್ಲಿ ಜನರ ಹಣ ಲೂಟಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೇಶದ ಸಂಪತ್ತಿನ ಕಾವಲುಗಾರನಾಗುವ ಬದಲಿಗೆ ಜನರ ಹಣದ ಲೂಟಿಯ ಪಾಲುದಾರ ಆಗಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 12 ಬಾರಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿದರೂ ಇಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರುತ್ತಿದೆ. ಹೀಗೆ ಸಂಗ್ರಹವಾಗಿರುವ ಲಕ್ಷಾಂತರ ಕೋಟಿ ರೂಪಾಯಿ ಎಲ್ಲಿಗೆ ಹೋಗಿದೆ ಎಂಬುದರ ಸುಳಿವು ಸಿಗುತ್ತಿಲ್ಲ’ ಎಂದರು.

2013ರಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರ 102.02 ಅಮೆರಿಕನ್ ಡಾಲರ್ ಇತ್ತು. ಆಗ ಭಾರತದಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹ 67 ಇತ್ತು. ಈಗ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 70.04 ಅಮೆರಿಕನ್‌ ಡಾಲರ್‌ ಇದೆ. ಈಗ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ₹ 78.86ಗೆ ಏರಿಕೆಯಾಗಿದೆ. ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ₹ 70.04ಕ್ಕೆ ಹೆಚ್ಚಳವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯೇ ಕಾರಣ ಎಂದು ದೂರಿದರು.

ADVERTISEMENT

ಪ್ರತಿ ಲೀಟರ್‌ ಮೇಲಿನ ಅಬಕಾರಿ ತೆರಿಗೆ 2013ರಲ್ಲಿ ₹ 9.2 ಇತ್ತು. ಈಗ ಅದು ₹ 19.48ಕ್ಕೆ ಹೆಚ್ಚಳವಾಗಿದೆ. ಪ್ರತಿ ಲೀಟರ್‌ ಡೀಸೆಲ್‌ ಮೇಲಿನ ಅಬಕಾರಿ ತೆರಿಗೆ ₹ 3.46ರಿಂದ ₹ 19.48ಕ್ಕೆ ಏರಿಕೆಯಾಗಿದೆ. ಅಬಕಾರಿ ತೆರಿಗೆ ಹೆಚ್ಚಳದಿಂದ ಸಂಗ್ರಹವಾದ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ಕೇಂದ್ರ ಸರ್ಕಾರ ಹೇಳುತ್ತಿಲ್ಲ. ಈ ಲಾಭವನ್ನು ಹಂಚಿಕೊಳ್ಳುತ್ತಿರುವವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಅಗ್ಗದ ದರದಲ್ಲಿ ರಫ್ತು:ದೇಶದಲ್ಲಿ ದುಬಾರಿ ದರಕ್ಕೆ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರುತ್ತಿರುವ ಸರ್ಕಾರ, ವಿದೇಶಗಳಿಗೆ ಅಗ್ಗದ ದರದಲ್ಲಿ ರಫ್ತು ಮಾಡುತ್ತಿದೆ. ಬ್ರಿಟನ್‌, ಅಮೆರಿಕ, ಆಸ್ಟ್ರೇಲಿಯಾ, ಮಲೇಷಿಯಾ, ಇಸ್ರೇಲ್‌ ಮುಂತಾದ ರಾಷ್ಟ್ರಗಳಿಗೆ ಪ್ರತಿ ಲೀಟರ್‌ಗೆ ₹ 29ರ ದರದಲ್ಲಿ ಪೆಟ್ರೋಲ್‌ ಮತ್ತು ₹ 34ರ ದರದಲ್ಲಿ ಡೀಸೆಲ್‌ ಪೂರೈಕೆ ಮಾಡಲಾಗುತ್ತಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳು ಇದನ್ನು ಖಚಿತಪಡಿಸಿವೆ ಎಂದು ಐವನ್‌ ಹೇಳಿದರು.

‘ವಿದೇಶಕ್ಕೆ ಅಗ್ಗದ ದರದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿ, ದೇಶದ ಜನರ ಮೇಲೆ ಭಾರ ಹೇರುವ ಧೋರಣೆ ಖಂಡನೀಯ. ಇಂತಹ ಲೂಟಿಯ ವಿರುದ್ಧ ಕಾಂಗ್ರೆಸ್‌ ಹೋರಾಟ ನಡೆಸಲಿದೆ. ಮುಂದಿನ ವಾರ ಮಂಗಳೂರಿನಲ್ಲೂ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು’ ಎಂದರು.

ವೈಫಲ್ಯ ಸಾಬೀತು:₹ 500 ಮತ್ತು ₹ 1,000ದ ನೋಟುಗಳ ಅಮಾನ್ಯೀಕರಣ ಫಲ ನೀಡಿಲ್ಲ ಎಂಬುದು ಸಾಬೀತಾಗಿದೆ. ಚಲಾವಣೆಯಲ್ಲಿದ್ದ ಶೇಕಡ 99.3ರಷ್ಟು ನೋಟುಗಳು ವಾಪಸ್‌ ಬಂದಿರುವುದನ್ನು ಭಾರತೀಯ ರಿಸರ್ವ್ ಬ್ಯಾಂಕ್‌ ಖಚಿತಪಡಿಸಿದೆ. ಮೋದಿ ಅವರು ನೋಟುಗಳ ಅಮಾನ್ಯೀಕರಣದ ಮೂಲಕ ದೇಶದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವುದು ಖಚಿತವಾಗಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.