ADVERTISEMENT

ಧರ್ಮಾಧಾರಿತ ಕಾನೂನುಗಳು ರದ್ದಾಗಲಿ: ಜಿತೇಂದ್ರಾನಂದ ಶ್ರೀ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 20:01 IST
Last Updated 31 ಮಾರ್ಚ್ 2024, 20:01 IST
<div class="paragraphs"><p>ಅಖಿಲ ಭಾರತೀಯ ಸಂತ ಸಮಿತಿಯ ಸಹಯೋಗದಲ್ಲಿ ನಗರದ ಓಂ ಶ್ರೀ ಮಠ ಭಾನುವಾರ ಆಯೋಜಿಸಿದ್ದ ಶ್ರೀ ಚಕ್ರ ಮಹಾಯಾಗದ ಅಂಗವಾಗಿ ನಡೆದ ಸಂತ ಸಮಾವೇಶದಲ್ಲಿ ಭಾಗವಹಿಸದ ಸಾಧು ಸಂತರು </p></div>

ಅಖಿಲ ಭಾರತೀಯ ಸಂತ ಸಮಿತಿಯ ಸಹಯೋಗದಲ್ಲಿ ನಗರದ ಓಂ ಶ್ರೀ ಮಠ ಭಾನುವಾರ ಆಯೋಜಿಸಿದ್ದ ಶ್ರೀ ಚಕ್ರ ಮಹಾಯಾಗದ ಅಂಗವಾಗಿ ನಡೆದ ಸಂತ ಸಮಾವೇಶದಲ್ಲಿ ಭಾಗವಹಿಸದ ಸಾಧು ಸಂತರು

   

ಪ್ರಜಾವಾಣಿ ಚಿತ್ರ

ಮಂಗಳೂರು: ‘ವಕ್ಫ್‌ ನಿಯಮ, ಹಿಂದೂ ದೇವಾಲಯಗಳ ನಿಯಂತ್ರಣ ಕಾಯ್ದೆ ಒಳಗೊಂಡಂತೆ ದೇಶದಲ್ಲಿ ಜಾರಿಯಲ್ಲಿರುವ ಧರ್ಮಾಧಾರಿತ ನಿಯಮಗಳೆಲ್ಲವನ್ನೂ ರದ್ದು ಮಾಡಿದ ನಂತರವಷ್ಟೇ ಸಿಎಎ ರದ್ದುಪಡಿಸಿದರೆ ಸಾಕು’ ಎಂದು ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರಾನಂದ ಸರಸ್ವತಿ ಅಭಿಪ್ರಾಯಪಟ್ಟರು.

ADVERTISEMENT

ಅಖಿಲ ಭಾರತೀಯ ಸಂತ ಸಮಿತಿಯ ಸಹಯೋಗದಲ್ಲಿ ನಗರದ ಓಂ ಶ್ರೀಮಠ ಭಾನುವಾರ ಶ್ರೀಚಕ್ರ ಮಹಾಯಾಗದ ಅಂಗವಾಗಿ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ  ಅವರು ಮಾತನಾಡಿದರು. ‘ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಎಂಬ ನೆಲೆಯ ಕಾನೂನುಗಳು ದೇಶಕ್ಕೆ ಮಾರಕ’ ಎಂದರು.

‘ಕರ್ನಾಟಕದಲ್ಲಿ 49 ಸಾವಿರ ದೇವಸ್ಥಾನಗಳನ್ನು ಸರ್ಕಾರ ನಡೆಸುತ್ತಿದೆ. ಸಂವಿಧಾನದಲ್ಲಿ ಜಾತ್ಯತೀತ ಮತ್ತು ಸಮಾಜವಾದ ಎಂಬ ಪದಗಳನ್ನು ತೆಗೆದು ಹಾಕಿ, ಹಿಂದೂ ರಾಷ್ಟ್ರ ಎಂದು ಘೋಷಿಸಿದ ನಂತರ ದೇವಾಲಯಗಳ ಮೇಲೆ ಕಣ್ಣಿಟ್ಟರೆ ಅರ್ಥಪೂರ್ಣ. ದೇವಸ್ಥಾನದ ಕಾಣಿಕೆ ಹುಂಡಿಯಿಂದ ಹಣ ತಿಂದು ಸನಾತನ ಧರ್ಮವನ್ನು ಒಪ್ಪುವುದಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

ವಿಶ್ವ ಹಿಂದೂ ಪರಿಷತ್‌, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅಖಿಲ ಭಾರತ ಸಂತ ಸಮಿತಿ ಒಂದೇ ಧ್ಯೇಯದ ಭಿನ್ನ ಸಂಸ್ಥೆಗಳು. ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಸಂತ ಸಮಿತಿ ಸಂಪೂರ್ಣವಾಗಿ ತೊಡಗಿಸಿಕೊಂಡಿತ್ತು. ರಾಮಜನ್ಮಭೂಮಿ ಟ್ರಸ್ಟ್‌ನಲ್ಲಿದ್ದವರನ್ನು ಈಗ ಕೃಷ್ಣ ಜನ್ಮಭೂಮಿ ಮತ್ತು ಕಾಶಿ ವಿಶ್ವನಾಥ ಮಂದಿರ ಹೋರಾಟದ ನಿರ್ದೇಶಕ‌ರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು.

‘ರಾಮಜನ್ಮಭೂಮಿಗಾಗಿ ಸುಪ್ರಿಂ ಕೋರ್ಟ್‌ವರೆಗೆ ಹೋಗಿದ್ದೇವೆ. ಸಂವಿಧಾನಾತ್ಮಕವಾಗಿಯೇ ಕಾಶಿಯ ಗ್ಯಾನ್‌ವ್ಯಾಪಿ ಮರಳಿ ಪಡೆಯುತ್ತೇವೆ. ಕೃಷ್ಣಜನ್ಮಭೂಮಿಯೂ ನಮ್ಮದಾಗುತ್ತದೆ. ಮಧ್ಯಪ್ರದೇಶದಲ್ಲಿ ಭೋಜಶಾಲಾ ದೇವಾಲಯದಲ್ಲಿ ಸರ್ವೆ ನಡೆಯುತ್ತಿದ್ದು ವರದಿ ಬಂದ ನಂತರ ಹೋರಾಟ ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು. 

ಸಂವಿಧಾನ, ಷರಿಯತ್‌ ಜೊತೆಗೆ ಬೇಡ:

ಮುಖ್ಯ ಭಾಷಣ ಮಾಡಿದ ಅಯೋಧ್ಯೆಯ ನಿತ್ಯಗೋಪಾಲ ದಾಸ್‌ಜಿ ಆಶ್ರಮದ ಕಮಲನಯನ ದಾಸ, ‘ದೇಶದಲ್ಲಿ ಸಂವಿಧಾನ ಜಾರಿಯಲ್ಲಿರುವಾಗ ಪ್ರತ್ಯೇಕವಾಗಿ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನೂ ಜಾರಿ ಮಾಡಲಾಗಿದೆ. ಈ ಪರಿಸ್ಥಿತಿಯಿಂದ ದೇಶವನ್ನು ರಕ್ಷಿಸಲು ವೇದಿಕೆ ಸಜ್ಜಾಗಿದ್ದು, ಹಿಂದೂಗಳು ಪ್ರಜ್ಞಾವಂತಿಕೆ ಮೆರೆಯದೇ ಇದ್ದರೆ ಭವಿಷ್ಯದಲ್ಲಿ ಅಪಾಯವಿದೆ’ ಎಂದರು.

ದೇವಸ್ಥಾನಗಳಿಗೆ ಸಂಬಂಧಿಸಿದ ಕಾನೂನು ಮತ್ತು ಸಂವಿಧಾನದ 30ನೇ ವಿಧಿಯಿಂದಾಗಿ ದೇಶದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರಿಗೆ ಅನುಕೂಲ ಆಗಿದೆ. ದೇವಸ್ಥಾನಗಳ ಹಣ ಮದರಸಾ ಮತ್ತು ಚರ್ಚ್‌ಗಳಿಗೆ ಹೋಗುತ್ತಿದೆ. ಹಿಂದೂಗಳ ಹಣವನ್ನು ಬಳಸಿ ಹಿಂದೂಗಳನ್ನೇ ಮತಾಂತರ ಮಾಡುವ ವ್ಯವಸ್ಥೆ ನಿರ್ಮಾಣ ಆಗಿದೆ ಎಂದರು.

ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಅವಿಚಲ್ ದಾಸ್‌, ದಕ್ಷಿಣ ಭಾರತ ಪ್ರಮುಖ ಪ್ರಭಾಕರಾನಂದ ಸ್ವಾಮೀಜಿ, ಕರ್ನಾಟಕದ ಮುಖ್ಯಸ್ಥ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಕಾರ್ಯದರ್ಶಿ ಪರಮಾತ್ಮಜಿ, ಕೊಡಗು ಜಿಲ್ಲಾ ಮುಖ್ಯಸ್ಥ ರಾಜನಾಥ್ ಗುರು, ಸನ್ಯಾಸಿಗಳಾದ ಕೀರ್ತೇಂದ್ರಾನಂದ, ಶ್ಯಾಮಲಾ ಶೋಭಾನಂದ ಸರಸ್ವತಿ, ಸುಲೋಚನಾನಂದ ಸರಸ್ವತಿ, ವಿಷ್ಣುಪ್ರಿಯಾನಂದ ಸರಸ್ವತಿ, ಪದ್ಮನಾಭಾನಂದ ಸರಸ್ವತಿ, ವಿಶ್ವ ಹಿಂದೂ ಪರಿಷತ್‌ನ ಶರಣ್ ಪಂಪುವೆಲ್, ಎಂ.ಬಿ.ಪುರಾಣಿಕ್, ಆರ್‌ಎಸ್‌ಎಸ್‌ ಮುಖಂಡ ವಾಮನ್ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.