ADVERTISEMENT

ಕಡಬ: ಅರಣ್ಯ, ಕಂದಾಯ ಇಲಾಖೆಯಿಂದ ಜಂಟಿ ಸರ್ವೆ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 5:10 IST
Last Updated 9 ನವೆಂಬರ್ 2025, 5:10 IST
   

ಕಡಬ(ಉಪ್ಪಿನಂಗಡಿ): ಕಡಬ ತಾಲ್ಲೂಕಿನ ವ್ಯಾಪ್ತಿಯ ಐನೆಕಿದು, ಸುಬ್ರಮಣ್ಯ, ಬಿಳಿನೆಲೆ, ಶಿರಿಬಾಗಿಲು, ಕೊಂಬಾರು, ಕೊಣಾಜೆ, ಐತ್ತೂರು, ನೂಜಿಬಾಳ್ತಿಲ, ರೆಂಜಿಲಾಡಿ, ಶಿರಾಡಿ ಈ ಗ್ರಾಮಗಳ ಅರಣ್ಯ ಮೀಸಲು ಅರಣ್ಯಗಳ ಜಂಟಿ ಸರ್ವೆ ನಡೆಸಿ ವರದಿ ನೀಡುವಂತೆ ಸರ್ಕಾರ ಆದೇಶ ಮಾಡಿದ್ದು, ನವೆಂಬರ್ 10ರಿಂದ ಜಂಟಿ ಸರ್ವೆ ಕಾರ್ಯ ನಡೆಯಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಡಬ ತಾಲ್ಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.

ತಾಲ್ಲೂಕಿನಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆಯು ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಇದರಿಂದ ರೈತಾಪಿ ಜನರು ತೀವ್ರ ಸಮಸ್ಯೆ ಎದುರಾಗಿತ್ತು. ಅರಣ್ಯದಂಚಿನ ಭೂಮಿ ಅಕ್ರಮ ಸಕ್ರಮದಡಿ ಮಂಜೂರಾದರೂ ರೈತರಿಗೆ ಆ ಭೂಮಿಗೆ ಯಾವುದೇ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಸಿಗುತ್ತಿರಲಿಲ್ಲ. ಪ್ಲಾಟಿಂಗ್ ಸಾಧ್ಯವಾಗದೆ ಮನೆ ಇತರ ಕಟ್ಟಡ ಪರವಾನಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಕಂದಾಯ, ಅರಣ್ಯ ಇಲಾಖೆ ಸಚಿವರಿಗೆ ಮನವರಿಕೆ ಮಾಡಿ ಜಂಟಿ ಸರ್ವೆಗೆ ಆಗ್ರಹಿಸಿದ್ದೆವು. ಪರಿಣಾಮ ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸಲು ಆದೇಶಿಸಲಾಗಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುಬ್ರಹ್ಮಣ್ಯ, ಪಂಜ, ಉಪ್ಪಿನಂಗಡಿ ವಲಯ ಅರಣ್ಯಧಿಕಾರಿಗಳು, ಭೂದಾಖಲೆಗಳ ಭೂಮಾಪಕರು ಹಾಗೂ ಕಾರ್ಯ ಯೋಜನೆ ಮೋಜಣಿ ಭೂ ಮಾಪಕರಗಳ ಜಂಟಿ ಸರ್ವೆಗೆ ದಿನ ನಿಗದಿ ಪಡಿಸಲಾಗಿತ್ತು. ವಿಪರೀತ ಮಳೆಯ ಪರಿಣಾಮ ಸರ್ವೆ ಸ್ಥಗಿತಗೊಂಡಿತ್ತು. ಮುಂದುವರಿದ ಭಾಗವಾಗಿ ನವೆಂಬರ್ 10ರಿಂದ ಸರ್ವೆ ಕಾರ್ಯ ಆರಂಭಿಸಲು ಆದೇಶಿಸಲಾಗಿದೆ ಎಂದರು

ADVERTISEMENT

ಎರಡು ತಂಡಗಳಲ್ಲಿ ಸರ್ವೆ ಕಾರ್ಯ ನಡೆಯಲಿದ್ದು, ಒಂದೇ ಸರ್ವೆ ನಂಬರಿನಲ್ಲಿ ಅತೀ ಹೆಚ್ಚು ಭೂಮಿ ಇರುವ ಪ್ರದೇಶದಿಂದ ಸರ್ವೆ ಆರಂಭಿಸಲಾಗುತ್ತದೆ. ಆ ಪ್ರಕಾರ ಬಿಳಿನೆಲೆ ಹಾಗೂ ಕೊಣಾಜೆ ಗ್ರಾಮಗಳಿಂದ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ರೈತರು ಅಧಿಕಾರಿಗಳಿಗೆ ಸೂಕ್ತ ಸಹಕಾರ ನೀಡಬೇಕು ಎಂದು ಸುಧೀರ್ ಕುಮಾರ್ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ. ವರ್ಗೀಸ್ ಮಾತನಾಡಿ ಭೂ ಪರಿವರ್ತನೆಗೊಂಡ ಭೂಮಿಯ ಏಕ ವಿನ್ಯಾಸ ನಕ್ಷೆ, 9/11 ಪಡೆಯಲು ಯೋಜನಾ ಪ್ರಾಧಿಕಾರಕ್ಕೆ ಅಧಿಕಾರ ನೀಡಿರುವುದರಿಂದ ರೈತರಿಗೆ ಆಗುವ ಸಮಸ್ಯೆಯನ್ನು ಮನಗಂಡು ಅದನ್ನು ಹಿಂದಿನಂತೆ ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡಬೇಕು ಎನ್ನುವ ನಮ್ಮ ಮನವಿಗೆ ಸರ್ಕಾರ ಈಗಾಗಲೇ ಪಂಚಾಯಿತಿಗೆ ವಹಿಸಲು ಮೌಖಿಕ ಆದೇಶ ನೀಡಿದೆ. ಶೀಘ್ರ ಅದು ಕಾರ್ಯ ರೂಪಕ್ಕೆ ಬರಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ದಿನೇಶ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಕ್ ಮೇಲಿನಮನೆ, ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕೂಜುಗೋಡು, ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಕಡಬ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕಳ್ಳಿಗೆ, ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಭವ್ಯಾ ಸಂತೋಷ್, ಯುವ ಕಾಂಗ್ರೆಸ್ ಮುಖಂಡ ಸತೀಶ್ ಮೀನಾಡಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.