ADVERTISEMENT

‘ಜೂಲಿಯೆಟ್–2’ ಸಿನಿಮಾ ಫೆ. 24ರಂದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 4:35 IST
Last Updated 23 ಫೆಬ್ರುವರಿ 2023, 4:35 IST
ಸುದ್ದಿಗೋಷ್ಠಿಯಲ್ಲಿ ಕುಶ್‌ ಆಚಾರ್ಯ, ವಿರಾಟ್ ಬಿ. ಗೌಡ, ಬೃಂದಾ ಆಚಾರ್ಯ ಹಾಗೂ ಸಂಜಯ್‌ ಯುವಿ ಭಾಗವಹಿಸಿದರು
ಸುದ್ದಿಗೋಷ್ಠಿಯಲ್ಲಿ ಕುಶ್‌ ಆಚಾರ್ಯ, ವಿರಾಟ್ ಬಿ. ಗೌಡ, ಬೃಂದಾ ಆಚಾರ್ಯ ಹಾಗೂ ಸಂಜಯ್‌ ಯುವಿ ಭಾಗವಹಿಸಿದರು   

ಮಂಗಳೂರು: 'ಕನ್ನಡ ಸಿನಿಮಾ ‘ಜೂಲಿಯೆಟ್–2’ ಇದೇ 24 ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ' ಎಂದು ನಿರ್ದೇಶಕ ವಿರಾಟ್ ಬಿ. ಗೌಡ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಹಿಳಾ ಸಬಲೀಕರಣ ಮತ್ತು ಸಮಾಜದ ಅಮಾನವೀಯತೆಯ ವಿರುದ್ಧ ಹೋರಾಟದ ಪರಿಕಲ್ಪನೆಯನ್ನು ಆಧರಿಸಿದ ಸಿನಿಮಾವಿದು. ಕತೆಯು ಸ್ವತಂತ್ರ ಮಹಿಳೆಯೊಬ್ಬಳ ಬದುಕಿನ ಚಿತ್ರಣವನ್ನು ಒಳಗೊಂಡಿದೆ. ಬದುಕಿನಲ್ಲಿ ಆವರಿಸುವ ಕತ್ತಲೆಗಳನ್ನು ಮೆಟ್ಟಿ ನಿಂತು ನಿರ್ದಯ ಮತ್ತು ಘೋರ ಯುದ್ಧಗಳನ್ನು ಆಕೆ ನಡೆಸುತ್ತಾಳೆ’ ಎಂದರು.

‘ಜೂಲಿಯೆಟ್‌ ಎಂದಾಗ ಜತೆಯಲ್ಲಿ ರೊಮಿಯೋ ಇರಬೇಕು ಎಂದು ಜನ ಬಯಸುತ್ತಾರೆ. ಆದರೆ ನಮ್ಮ ಸಿನಿಮಾದಲ್ಲಿ ರೋಮಿಯೊ ಇಲ್ಲದ ಜೂಲಿಯೆಟ್‌ ಅನ್ನು ಕಾಣಬಹುದು. ಇದು ಕ್ರೈಸ್ತ ಹುಡುಗಿಯಾದ ಕಾರಣ ಈ ಶೀರ್ಷಿಕೆ ಹೊಂದಾಣಿಕೆಯಾಗುತ್ತದೆ’ ಎಂದರು.

ADVERTISEMENT

ಲಿಕಿತ್ ಆರ್.ಕೋಟ್ಯಾನ್ ನಿರ್ಮಾಣದ ಚೊಚ್ಚಲ ಸಿನಿಮಾವಿದು. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದಾರೆ. ಅನೂಪ್ ಸಾಗರ್, ಕುಶ್ ಆಚಾರ್ಯ, ರಾಯ್ ಮತ್ತು ಶ್ರೀಕಾಂತ್‌ ತಾರಾಗಣದಲ್ಲಿದ್ದಾರೆ. ಮಂಗಳೂರು ಮತ್ತು ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಮಂಗಳೂರಿನ ಕಲಾವಿದರ ತಂಡವೇ ಚಿತ್ರವನ್ನು ನಿರ್ಮಿಸಿದೆ’ ಎಂದರು.

ನಟಿ ಬೃಂದಾ ಆಚಾರ್ಯ, ನಟ ಕುಶ್ ಆಚಾರ್ಯ ಮತ್ತು ನಿರ್ವಾಹಕ ನಿರ್ಮಾಪಕ ಸಂಜಯ್ ಯುವಿ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.