
ಮಂಗಳೂರು: ‘ಕನ್ನಡದಲ್ಲಷ್ಟೇ ಯಕ್ಷಗಾನ ನಡೆಯುತ್ತಿದ್ದ ಕಾಲದಲ್ಲಿ ಜನರು ತುಳು ಯಕ್ಷಗಾನ ನೋಡುವಂತೆ ಅನಂತರಾಮ ಬಂಗಾಡಿಯವರು ಮಾಡಿದ್ದಾರೆ. ತಮ್ಮ ಅಮೂಲ್ಯ ತುಳು ಪ್ರಸಂಗಗಳ ಮೂಲಕ ಯಕ್ಷಗಾನ ರಂಗಕ್ಕೆ ಹೊಸ ನೆಲೆ ತೋರಿಸಿದ್ದಾರೆ. ತನ್ಮೂಲಕ ತುಳು ಪ್ರೇಕ್ಷಕ ವರ್ಗದ ಸೃಷ್ಟಿಗೆ ಕಾರಣರಾಗಿದ್ದಾರೆ’ ಎಂದು ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಇಲ್ಲಿನ ಯಕ್ಷ ಪ್ರತಿಭೆ ಸಹಯೋಗದಲ್ಲಿ ಇಲ್ಲಿ ಆಯೋಜಿಸಿದ್ದ ಕೆ.ಅನಂತರಾಮ ಬಂಗಾಡಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತುಳು ಯಕ್ಷಗಾನವೂ ಮೇಳಗಳಿಗೆ ಆದಾಯ ತಂದುಕೊಡಬಲ್ಲುದು ಎಂಬುದನ್ನು ಸಾಬೀತು ಪಡಿಸಿದ್ದು ಕೂಡ ಅನಂತರಾಮ ಬಂಗಾಡಿ ಅವರು. ತುಳು ಯಕ್ಷಗಾನಕ್ಕೆ ಕೊಡುಗೆ ನೀಡಿದ ಅಗ್ರಗಣ್ಯರಲ್ಲಿ ಅವರೂ ಸೇರಿದ್ದಾರೆ’ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ‘ತುಳು ಭಾಷೆಯ ಬೆಳವಣಿಗೆಗೆ ತುಳು ಯಕ್ಷಗಾನದ ಕೊಡುಗೆ ಮಹತ್ವದ್ದು. 65 ತುಳು ಯಕ್ಷಗಾನ ಪ್ರಸಂಗವನ್ನು ರಚಿಸಿದ ಬಂಗಾಡಿಯವರು ಈ ನಿಟ್ಟಿನಲ್ಲಿ ಸದಾ ಸ್ಮರಣೀಯರು’ ಎಂದರು.
ಸಾಹಿತಿ ಪ್ರಭಾಕರ ನೀರುಮಾರ್ಗ, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ವೇಣಿ ಮರೋಳಿ, ಅನಂತರಾಮ ಬಂಗಾಡಿಯವರ ಅಳಿಯ ಕೇಶವ ಹೀರೆಬೆಟ್ಟು ಭಾಗವಹಿಸಿದ್ದರು. ಅಕಾಡೆಮಿ ಸದಸ್ಯ ಬೂಬ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಯಕ್ಷ ಪ್ರತಿಭೆ ತಂಡದವರು 'ಸಿರಿ ಕೃಷ್ಣೆ -ಚಂದ್ರಪಾಲಿ' ತುಳು ಯಕ್ಷಗಾನ ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.