ಕಡಬ (ಉಪ್ಪಿನಂಗಡಿ): ಕಡಬ ಪಟ್ಟಣ ಪಂಚಾಯಿತಿ 13 ವಾರ್ಡ್‌ಗಳಿಗೆ ಆಗಸ್ಟ್ 17ರಂದು ನಡೆಯುವ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಶುಕ್ರವಾರ (ಆ.8) ಕೊನೆಗೊಂಡಿದ್ದು, ಒಟ್ಟು 32 ಅಭ್ಯರ್ಥಿಗಳಲ್ಲಿ ಸ್ಪರ್ಧೆಯ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 13 ವಾರ್ಡ್‌ಗಳಿಗೆ ಒಟ್ಟು 47 ನಾಮಪತ್ರ ಸಲ್ಲಿಕೆಯಾಗಿದ್ದವು. 11ನಾಮಪತ್ರ ತಿರಸ್ಕೃತಗೊಂಡಿದ್ದು, 36 ನಾಮಪತ್ರಗಳು ಕ್ರಮ ಬದ್ಧವಾಗಿದ್ದವು. ನಾಲ್ವರು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 32 ಜನ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದಾರೆ. ಚುನಾವಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದ್ದು,ಪ್ರತೀ ವಾರ್ಡ್‌ಗಳಲ್ಲಿ ಮತಗಟ್ಟೆ ತೆರೆಯಲಾಗುವುದು ಪಾರದರ್ಶಕವಾಗಿ ಚುನಾವಣೆ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ಅವರು ವಿನಂತಿಸಿದರು.
ಒಟ್ಟು 13 ವಾರ್ಡ್‌ಗಳಲ್ಲಿ 8,334 ಅರ್ಹ ಮತದಾರರಿದ್ದು, ಇದರಲ್ಲಿ 4,018 ಪುರುಷ ಹಾಗೂ 4318 ಮಹಿಳಾ ಮತದಾರಿದ್ದಾರೆ. ನೋಟ ಮತದಾನಕ್ಕೂ ಅವಕಾಶ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ., ಉಪತಹಸೀಲ್ದಾರ್ ಸೈಯುದ್ದುಲ್ಲಾ ಖಾನ್, ಚುನಾವಣಾಧಿಕಾರಿ ವಿಮಲ್ ಬಾಬು, ಸಹಾಯಕ ಚುನಾವಣಾಧಿಕಾರಿ ಭುವನೇಂದ್ರ ಕುಮಾರ್, ಸಂದೇಶ್, ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸಂಗಪ್ಪ ಹುಕ್ಕೇರಿ, ಪಟ್ಟಣ ಪಂಚಾಯಿತಿ ಎಂಜಿನಿಯರ್ ಶಿವಕುಮಾರ್ ಎಂ.ಡಿ, ಲೆಕ್ಕಪತ್ರ ನೋಂದಣಾಧಿಕಾರಿ ಭವ್ಯಾ ಎಂ.ಡಿ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.