
ಮಂಗಳೂರು: ಕದ್ರಿ ಉದ್ಯಾನದ ಹಳೆ ಜಿಂಕೆ ಪಾರ್ಕ್‌ನಲ್ಲಿ ಕೆಲ ಕಾಲ ಜನರನ್ನು ರಂಜಿಸಿದ್ದ ಸಂಗೀತ ಕಾರಂಜಿ ಹಾಗೂ ಲೇಸರ್ ಶೋ ಆರು ವರ್ಷಗಳಿಂದ ಸ್ಥಗಿತಗೊಂಡಿದೆ. ಈ ಉದ್ಯಾನವನ್ನು ನಗರದ ಸಾಂಸ್ಕೃತಿಕ ಹಾಗೂ ಮನರಂಜನಾ ಕೇಂದ್ರವನ್ನಾಗಿ ರೂಪಿಸುವ ಭರವಸೆಯೂ ಈಡೇರಿಲ್ಲ. ಅಧಿಕಾರಿಶಾಹಿ ನಿರ್ಲಕ್ಷ್ಯ, ವಿಳಂಬ ಧೋರಣೆಗೆ ಈ ಯೋಜನೆ ಕನ್ನಡಿ ಹಿಡಿದಿದೆ.
ಕದ್ರಿ ಉದ್ಯಾನದ ಸಂಗೀತ ಕಾರಂಜಿ ಮತ್ತು ಲೇಸರ್ ಶೋ ಸಲುವಾಗಿ 4.01 ಎಕರೆ ಜಾಗದಲ್ಲಿ ₹ 5 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿತ್ತು. ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2018ರ ಜ.7ರಂದು ಇದನ್ನು ಲೋಕಾರ್ಪಣೆ ಮಾಡಿದ್ದರು.
ಶುರುವಾದ ಕೆಲವೇ ದಿನಗಳಲ್ಲಿ ಇಲ್ಲಿ ಸಂಗೀತದ ಲಯಕ್ಕನುಗುಣವಾಗಿ ನರ್ತಿಸುವ ಬಣ್ಣ ಬಣ್ಣದ ಕಾರಂಜಿ ಪ್ರೇಕ್ಷಕರನ್ನು ಬೆರಗುಗೊಳಿಸಿತ್ತು. ತುಳುನಾಡಿನ ಸಮೃದ್ಧಿ ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನ, ಕಂಬಳ, ಭೂತಾರಾಧನೆಯಂತಹ ಜನಪದೀಯ ಚಿತ್ರಣಗಳು ಭಾರಿ ಪ್ರಮಾಣದಲ್ಲಿ ಪ್ರೇಕ್ಷಕರನ್ನೂ ಸೆಳೆದಿದ್ದವು. ತಂತ್ರಜ್ಞಾನ ಹಾಗೂ ಸಂಸ್ಕೃತಿಯ ಸಮ್ಮಿಲನದಂತಿದ್ದ ಈ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಜನ ಕುಟುಂಬ ಸಮೇತ ಭೇಟಿ ನೀಡಿದ್ದರು.
ಮುದನೀಡುವ ಈ ಅನುಭವ ಹೆಚ್ಚು ದಿನ ಮುಂದುವರಿಯಲಿಲ್ಲ. ಕೋವಿಡ್ ಬಳಿಕ ನರ್ತನ ನಿಲ್ಲಿಸಿದ ಕಾರಂಜಿ ಮತ್ತೆ ನರ್ತಿಸಲೇ ಇಲ್ಲ. ಇಲ್ಲಿನ ನೀರಿನ ತೊಟ್ಟಿಯಲ್ಲಿ ಅಳವಡಿಸಿರುವ ಯಂತ್ರಗಳಿಗೆ ಈಗ ತುಕ್ಕು ಹಿಡಿದಿದೆ. ಈ ಪರಿಸರದಲ್ಲಿ ಹುಲ್ಲು ಹಾಗೂ ಕಳೆ ಆವರಿಸಿದೆ. ಇಲ್ಲಿ ಕಲ್ಪಿಸಲಾಗಿದ್ದ ಆಸನಗಳು ಹದಗೆಟ್ಟಿವೆ.
ಹೊಸ ವಿಷಯಗಳನ್ನು ಅಳವಡಿಸಿಕೊಂಡು ಈ ಸಂಗೀತ ಕಾರಂಜಿಯನ್ನು ಪುನರುಜ್ಜೀವನ ಗೊಳಿಸಬೇಕು ಹಾಗೂ ಇದನ್ನು ಶಾಶ್ವತವಾದ ಜನಾಕರ್ಷಣೆಯ ಕೇಂದ್ರವನ್ನಾಗಿ ರೂಪಿಸಬೇಕು. ಈ ಯೋಜನೆಗಾಗಿ ಮಾಡಲಾದ ಕೋಟ್ಯಂತರ ರೂಪಾಯಿ ಹೂಡಿಕೆ ವ್ಯರ್ಥವಾಗಬಾರದು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಲೇ ಇದ್ದಾರೆ.
ಈ ಸಂಗೀತ ಕಾರಂಜಿಯ ಪುನರುಜ್ಜೀವನಗೊಳಿಸಿದರೆ ವಿದ್ಯುತ್ ಬಿಲ್ ಸುಮಾರು ₹ 30 ಸಾವಿರದಿಂದ ₹ 35 ಸಾವಿರ ಸೇರಿ ಅದರ ನಿರ್ವಹಣೆಗೆ ತಿಂಗಳಿಗೆ ಏನಿಲ್ಲವೆಂದರೂ ₹ 70 ಸಾವಿರ ಖರ್ಚು ಬರುತ್ತದೆ ಎನ್ನುತ್ತವೆ ತೋಟಗಾರಿಕೆ ಇಲಾಖೆಯ ಮೂಲಗಳು. ಉದ್ಯಾನ ಅಭಿವೃದ್ಧಿ ನಿಧಿ ಅಥವಾ ಮಂಗಳೂರು ಮಹಾನಗರ ಪಾಲಿಕೆಯ ಅನುದಾನ ಅಥವಾ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ ಬಳಸಿ ಸಂಗೀತ ಕಾರಂಜಿ ಹಾಗೂ ಲೇಸರ್ ಶೋಗೆ ಮರುಚಾಲನೆ ನೀಡುವ ಪ್ರಸ್ತಾವ ಇದೆ ಎನ್ನುತ್ತಾರೆ ತೊಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ ಡಿ.