ADVERTISEMENT

ಕಂಬಳ ಕ್ರೀಡೆಗೆ ಕ್ರೀಡಾ ಪ್ರಾಧಿಕಾರ ಮಾನ್ಯತೆ

‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ಇನ್ನು ರಾಜ್ಯ ಕ್ರೀಡಾ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 1:15 IST
Last Updated 10 ಅಕ್ಟೋಬರ್ 2025, 1:15 IST
<div class="paragraphs"><p>ಕಂಬಳ</p></div>

ಕಂಬಳ

   

ಮಂಗಳೂರು: ಕಂಬಳ ಕ್ರೀಡೆಗೆ, ಕರ್ನಾಟಕ ಕ್ರೀಡಾ ಪ್ರಾಧಿಕಾರದಿಂದ ಅಧಿಕೃತ ಮನ್ನಣೆ ಸಿಕ್ಕಿದೆ. ಪ್ರಾಧಿಕಾರದಲ್ಲಿ ಕಂಬಳ ಕ್ರೀಡೆಗೆ ರಾಜ್ಯ ಕ್ರೀಡಾ ಸಂಸ್ಥೆಯಾಗಿ ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ಗೆ ಮಾನ್ಯತೆ ನೀಡಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆದೇಶ ಹೊರಡಿಸಿದೆ. 

ಈ ಮಾನ್ಯತೆಯು ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಅನ್ವಯವಾಗಲಿದೆ ಎಂದು  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್‌. ಅವರು ಈ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಕರ್ನಾಟಕ ಕ್ರೀಡಾ ಪ್ರಾಧಿಕಾರವು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಅನುದಾನ ನೀಡಲಿದೆ.

ಕಂಬಳ ಕ್ರೀಡೆಯನ್ನು ಸಂಘಟಿಸುವ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಮಾನ್ಯತೆ ನೀಡುವಂತೆ ಕೋರಿ ಸಂಸ್ಥೆಯ ಅಧ್ಯಕ್ಷರು ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಅಸೋಸಿಯೇಷನ್‌ಗೆ ಮಾನ್ಯತೆ ನೀಡಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಿಫಾರಸು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ 2025ರ ಮೇ 5ರಂದು ನಡೆದ ಸಭೆಯಲ್ಲಿ ರಾಜ್ಯದ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಹಾಗೂ ಕಂಬಳ ಕ್ರೀಡೆಯ ವಿಶೇಷತೆಯನ್ನು ಪರಿಗಣಿಸಿ ಅದಕ್ಕೆ ಮಾನ್ಯತೆ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು.  

ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷರಾಗಿರುವ ಈ ಅಸೋಷಿಯೇಷನ್‌ನಲ್ಲಿ 18 ಮಂದಿ ಪದಾಧಿಕಾರಿಗಳಿದ್ದಾರೆ. ಜೀವಂಧರ್ ಬಲ್ಲಾಳ್‌, ಜೀವನದಾಸ ಅಡ್ಯಂತಾಯ ಹಾಗೂ ಗುಣಪಾಲ ಕಡಂಬ  ಗೌರವ ಸಲಹೆಗಾರರಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಂಬಳವನ್ನು ಶಿಸ್ತುಬದ್ಧವಾಗಿ ಸಂಘಟಿಸಲು ಈ ಅಸೋಸಿಯೇಷನ್‌ ಕ್ರಮ ವಹಿಸುತ್ತದೆ. ಕಂಬಳ ಕ್ರೀಡೆಯ ವೇಳಾಪಟ್ಟಿಯನ್ನು ತಯಾರಿಸುತ್ತದೆ. 

ಕರಾವಳಿಯ ವಿಶೇಷ ಜಾನಪದ ಕ್ರೀಡೆಯಾದ ಕಂಬಳಕ್ಕೆ ಸರ್ಕಾರದಿಂದ ಈಗ ಅಧಿಕೃತ ಮನ್ನಣೆ ಸಿಕ್ಕಿದಂತಾಗಿದೆ. ಈ ಬಗ್ಗೆ ಅನೇಕ ವರ್ಷಗಳಿಂದ ಹೋರಾಟ ನಡೆಸಿದ್ದೆವು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧನ್ಯವಾದ
ದೇವಿಪ್ರಸಾದ ಶೆಟ್ಟಿ ಅಧ್ಯಕ್ಷರು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್‌

ಬಜೆಟ್‌ನಲ್ಲೇ ಸಿಗಲಿದೆ ಅನುದಾನ

ಇನ್ನು ಮುಂದೆ ರಾಜ್ಯ ಸರ್ಕಾರ ಬಜೆಟ್‌ನಲ್ಲೇ ಕಂಬಳ ಆಯೋಜನೆಗೂ ನಿರ್ದಿಷ್ಟ ಅನುದಾನವನ್ನು ಮೀಸಲಿಡಲಿದೆ. ಅನುದಾನವು ಕಂಬಳ ಆಯೋಜಿಸುವ ಸಂಸ್ಥೆಗೆ ನೇರವಾಗಿ ಬಿಡುಗಡೆಯಾಗಲಿದೆ. ಇದಕ್ಕಾಗಿ ವಿಶೇಷ ಅನುದಾನ ಸಂಹಿತೆಯನ್ನೂ ರೂಪಿಸಲಾಗುತ್ತಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.