
ಮಂಗಳೂರು: ಅದು, 2022ನೇ ಇಸವಿ. ರಾಜ್ಯ ಕಂಬಳ ಸಂಸ್ಥೆಯ ಆರಂಭಕ್ಕೆ ಪ್ರಯತ್ನಗಳು ಬಿರುಸು ಪಡೆದುಕೊಂಡ ಸಂದರ್ಭ. ಆ ಋತುವಿನ ಕಂಬಳ ಆರಂಭವಾಗಲು ಕೆಲವೇ ದಿನಗಳು ಉಳಿದಿದ್ದಾಗ ಕರೆಗಳಲ್ಲಿ ಮತ್ತು ಕಂಬಳ ಮಾಲೀಕರ ಮನೆಗಳಲ್ಲಿ ಸಿದ್ಧತೆಗಳ ಸಂಭ್ರಮ ನಡೆಯುತ್ತಿದ್ದರೆ, ಕರೆಯಾಚೆ ಕೆಲವರ ನಡುವೆ ಪರಸ್ಪರ ಕೆಸರೆರಚಾಟ ಜೋರಾಗಿತ್ತು.
ಈಗ ಕಂಬಳಕ್ಕೆ ರಾಜ್ಯ ಸಂಸ್ಥೆಯ ಬಲವಿದೆ. ನಿಯಮಾವಳಿಗಳ ಚೌಕಟ್ಟು ಇದೆ. ಸಂಸ್ಥೆಗೆ ಮಾನ್ಯತೆ ಲಭಿಸಿದ ನಂತರದ ಮೊದಲ ಋತುವಿನ ಕಂಬಳಗಳು ನಡೆಯುತ್ತಿವೆ. ಈಗಲೂ ಕಂಬಳದ ಸುತ್ತ ನಡೆಯುವ ಮಾತಿನ ವರಸೆಗಳು ಕಸಿವಿಸಿಯ ವಾತಾವರಣ ಸೃಷ್ಟಿಸಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ನಡೆದ ಮಂಗಳೂರು ಕಂಬಳದ ಸಂದರ್ಭದಲ್ಲಿ ಆಗಿದೆ ಎನ್ನಲಾದ ‘ಅವಮಾನ’ ಪ್ರಕರಣ ಕಂಬಳ ಕಣದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಕಾರ್ಕಳದ ಮಿಯಾರು ಕಂಬಳದಲ್ಲಿ ಮುಚ್ಚೂರು ಲೋಕೇಶ್ ಶೆಟ್ಟಿ ವಿಷಾದ ವ್ಯಕ್ತಪಡಿಸುವುದರೊಂದಿಗೆ ಅದು ಸದ್ಯಕ್ಕೆ ಶಮನ ಕಂಡಿದೆಯಾದರೂ ಒಳಬೇಗುದಿಗೆ ಕೊನೆಹಾಡಲು ಸಾಧ್ಯವೇ ಎಂಬ ಮಾತುಗಳು ಕಂಬಳ ವಲಯದಲ್ಲೇ ಕೇಳಿಬರುತ್ತಿವೆ. ಇನ್ನು ಮುಂದೆ ಅಹಿತಕರ ಪ್ರಸಂಗಗಳಿಗೆ ಅವಕಾಶ ಸಿಗದಂತೆ ಮಾಡಬೇಕು ಎಂಬ ಬೇಡಿಕೆ ಕೇಳಬಂದಿರುವುದರಿಂದ ಹೊಸ ಸೂತ್ರಗಳನ್ನು ಸಿದ್ಧಪಡಿಸಲು ಜಿಲ್ಲಾ ಕಂಬಳ ಸಮಿತಿ ಮತ್ತು ರಾಜ್ಯ ಕಂಬಳ ಸಂಸ್ಥೆ ಮದ್ದು ಹುಡುಕುತ್ತಿದೆ.
ನಾಲ್ಕು ವರ್ಷಗಳ ಹಿಂದೆ ಕರೆಯಲ್ಲಿ ಸೃಷ್ಟಿಯಾಗತೊಡಗಿದ ದಾಖಲೆಗಳು ಕರಾವಳಿ ಕೃಷಿ ಚಟುವಟಿಕೆಯ ಜೊತೆ ಮಿಳಿತವಾಗಿರುವ ಕ್ರೀಡೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿತ್ತು. ದಾಖಲೆಗಳು ಮತ್ತು ಅದರ ಪ್ರತಿಫಲನ ಎಂಬಂತೆ ಲಭಿಸಿದ ಅಪಾರ ಪ್ರಚಾರದ ಕಾರಣದಿಂದ ಆಗ ಕಂಬಳದಲ್ಲಿ ಲೇಜರ್ ಬೀಮ್‌ನಂಥ ಹೊಸ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ನಾಂದಿಯಾಗಿತ್ತು. ಅದರ ಜೊತೆಯಲ್ಲಿ ಕಸಿವಿಸಿಗಳೂ ಹೆಚ್ಚಾಗಿದ್ದವು.
ವೀಳ್ಯದ ಗೌರವ ಅಥವಾ ಕೇವಲ ಒಂದು ಬಾಳೆಗೊನೆಗಾಗಿ ಪೈಪೋಟಿ ಕಂಡುಬರುತ್ತಿದ್ದ ಜಾನಪದ ಕ್ರೀಡೆ ಹೊರಜಗತ್ತಿಗೆ ಹೆಚ್ಚು ತೆರೆದುಕೊಳ್ಳುತ್ತಿದ್ದಂತೆ ಅನಾರೋಗ್ಯಕರ ಪೈಪೋಟಿ ಕಂಡುಬಂತು. ಅದು ಮನಸ್ತಾಪಗಳಿಗೂ ಹಾದಿಯೊದಗಿಸಿತು ಎಂಬ ಮಾತು ಅಂದು ಕೇಳಿಬಂದಿತ್ತು. ಈಗ, ರಾಜ್ಯ ಸಂಸ್ಥೆಯಾಗಿ ಮಾನ್ಯತೆ ಲಭಿಸಿರುವುದರಿಂದ ಕಂಬಳಕ್ಕೆ ಮತ್ತೊಂದು ಆಯಾಮ ಲಭಿಸಿದೆ. ‘ಕಂಬಳದಲ್ಲಿ ಸಣ್ಣಪುಟ್ಟ ಅಹಿತಕರ ಘಟನೆ ನಡೆಯುವುದು ಹೊಸತೇತನಲ್ಲ’ ಎಂದು ಕಡಂಬ–ಲೋಕೇಶ್ ಶೆಟ್ಟಿ ವಿವಾದದ ವಿಷಯ ಮಾತನಾಡುವಾಗ ಎಲ್ಲರ ಬಾಯಿಂದಲೂ ಕೇಳಿಬರುತ್ತಿರುವ ಅಭಿಪ್ರಾಯ. ಆದರೆ ಹೊಸ ದಾರಿಯಲ್ಲಿ ಹೆಜ್ಜೆಹಾಕಲು ತೊಡಗಿರುವ ಇಂದಿನ ಸಂದರ್ಭದಲ್ಲಿ ಭಿನ್ನಮತ, ಇರಿಸುಮುರುಸು ಉಂಟಾಗುವ ಪ್ರಸಂಗಗಳು ನಡೆದರೆ ಒಟ್ಟಾರೆ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂಬುದು ಕಂಬಳದಲ್ಲಿ ತೊಡಗಿಸಿಕೊಂಡಿರುವವರ ಅನಿಸಿಕೆ. ಆದ್ದರಿಂದ ಭಿನ್ನಾಭಿಪ್ರಾಯಗಳಿದ್ದರೂ ಜಾಹೀರು ಆಗದಂತೆ ತಡೆಯಲು ಶಾಶ್ವತ ಮಾರ್ಗಗಳ ಹುಡುಕಾಟ ನಡೆಯುತ್ತಿದೆ.
ಉಚ್ಚಾಟನೆಯ ಎಚ್ಚರಿಕೆ
ಕುಳಿತು ಮಾತನಾಡುವುದೇ ಭಿನ್ನಾಭಿಪ್ರಾಯಗಳ ಶಮನಕ್ಕೆ ಪರಿಹಾರ ಎನ್ನುವ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು, ‘ಕಂಬಳದಲ್ಲಿ ಇಂಥ ಕಹಿ ಘಟನೆಗಳು ಹೊಸತೇನಲ್ಲ, ಹಿಂದೆಯೂ ಅನೇಕ ಬಾರಿ ಇಂಥ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಾರಿ ಸಮಿತಿ ಗಟ್ಟಿ ನಿರ್ಧಾರ ಕೈಗೊಂಡಿದೆ. ಮೇರೆ ಮೀರಿ ನಡೆದರೆ ಉಚ್ಚಾಟನೆ ಮಾಡಲಾಗುವುದು ಎಂದು ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ’ ಎಂದು ಹೇಳುತ್ತಾರೆ.
‘ಕಂಬಳ ಸಂಸ್ಥೆ ಸರ್ಕಾರದ ಆಧೀನದ್ದು. ಆದ್ದರಿಂದ ಮನಸ್ತಾಪ ಇದ್ದರೆ ಬಹಿರಂಗವಾಗಿ ಹೇಳಬಾರದು ಎಂದು ಅರುಣ್ ಶೆಟ್ಟಿ ಮತ್ತು ಲೋಕೇಶ್ ಶೆಟ್ಟಿ ಅವರಿಗೆ ಸೂಚಿಸಿದ್ದು ವೀಕ್ಷಕ ವಿವರಣೆ ಸಂದರ್ಭಯಲ್ಲಿ ಟೀಕೆಯ ಧ್ವನಿ ಇರಬಾರದು ಎಂದು ಗುಣಪಾಲ ಕಡಂಬ ಅವರಿಗೂ ತಿಳಿಸಲಾಗಿದೆ’ ಎಂದು ಅವರು ಹೇಳುತ್ತಾರೆ.
ಕಂಬಳವೆಂಬ ಜಾತ್ರೆಯಲ್ಲಿ ಗೊಂದಲಗಳು ಇಲ್ಲದಾಗಲಿ ಎಂಬುದು ಸರ್ವರ ಆಶಯ
ಶಿಸ್ತಿಗೆ ಆದ್ಯತೆ; ಅದಕ್ಕೆ ಕೋಪ
ನಾನು ಕಂಬಳದಲ್ಲಿ ಶಿಸ್ತು ಮೂಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಗಾಗ ನೆನಪಿಸುತ್ತಿರುತ್ತೇನೆ. ಅದಕ್ಕೆ ಕೆಲವರು ಪದೇ ಪದೇ ತಗಾದೆ ತೆಗೆಯುತ್ತಾರೆ. ನನ್ನ ಬಗ್ಗೆ ವೃಥಾ ಆರೋಪಗಳು ಕೇಳಿಬರುತ್ತಲೇ ಇವೆ. ರಾಜ್ಯ ಕಂಬಳ ಸಂಸ್ಥೆ ಸ್ಥಾಪಿಸುವ ಪ್ರಯತ್ನಕ್ಕೆ ಹುಳಿ ಹಿಂಡಿದ್ದಾರೆ ಎಂದು ಹೇಳಿದವರು ಲೇಜರ್ ಬೀಮ್ ಪದ್ಧತಿ ಜಾರಿಗೆ ಬಂದಾಗಲೂ ಆಕ್ಷೇಪ ವ್ಯಕ್ತಪಡಿಸಿದರು. ಒಕ್ಕಾಡಿಗೋಳಿ ಕಂಬಳದ ವಿವಾದ ಒಬ್ಬ ವ್ಯಕ್ತಿ ತೋಟದ ಜಾಗವನ್ನೇ ಕಂಬಳ ಕರೆಗೆ ನೀಡಿದ್ದು ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದಾಗ ಮಂಗಳೂರು ಕಂಬಳದಲ್ಲಿ ವಿವಾದ ಮಾಡಿದರು. ನನಗೆ 71 ವರ್ಷ ವಯಸ್ಸು. ಈಗಲೂ ಕಂಬಳಕ್ಕಾಗಿ ದುಡಿಯುತ್ತಿದ್ದೇನೆ. ಯಾವ ಕಂಬಳದಲ್ಲೂ ಸಂಭಾವನೆಯಾಗಿ ಕವರ್ ತೆಗೆದುಕೊಳ್ಳುತ್ತಿಲ್ಲ. ಆದರೂ ಮತ್ಸರದಿಂದ ಕೆಲವರು ದೂರುತ್ತಿದ್ದಾರೆ.ಗುಣಪಾಲ ಕಡಂಬ ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ
ಕ್ಯಾತೆ ತೆಗೆಯುವುದು ನಿಲ್ಲಲಿ
ಕೆಲವರಿಗೆ ಪ್ರತಿಯೊಂದು ಸಂದರ್ಭದಲ್ಲೂ ಕ್ಯಾತೆ ತೆಗೆಯುವ ಸ್ವಭಾವ. ಅದು ನಿಲ್ಲಬೇಕು. ನಾನೀನ ಕಂಬಳಕ್ಕೆ ಸಂಬಂಧಿಸಿದ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಮಂಗಳೂರು ಕಂಬಳದಲ್ಲಿ ಅನಗತ್ಯ ತಗಾದೆ ತೆಗೆದವರು ಏಕವಚನದಲ್ಲಿ ಕರೆದರು. ಅದು ಸರಿಯಲ್ಲ ಎಂದು ಹೇಳಿದ ನಂತರ ಏನೇನೋ ನಡೆಯಿತು. ಕಂಬಳದಲ್ಲಿ ಸಣ್ಣಪುಟ್ಟ ಅಸಮಾಧಾನದ ಘಟನೆಗಳು ಹಿಂದೆಯೂ ಆಗಿವೆ. ಅದಕ್ಕೆಲ್ಲ ಕುಳಿತು ಮಾತನಾಡಿ ಪರಿಹಾರ ಕಂಡುಕೊಳ್ಳಲಾಗಿದೆ. ಹಾಗೆಂದು ಅಂಥ ಪ್ರಸಂಗಗಳು ಆಗಾಗ ನಡೆಯುವುದು ಸರಿಯಲ್ಲ.ಮುಚ್ಚೂರು ಲೋಕೇಶ್ ಶೆಟ್ಟಿ ರಾಜ್ಯ ಕಂಬಳ ಸಮಿತಿಯ ಕೋಶಾಧಿಕಾರಿ
ಹೆಚ್ಚಿನ ಅನುದಾನಕ್ಕೆ ಬೇಡಿಕೆ
ಈ ಬಾರಿ 10 ಕಂಬಳಗಳಿಗೆ ತಲಾ ₹5 ಲಕ್ಷ ಬಿಡುಗಡೆ ಆಗಿದೆ. ಅದನ್ನು 20 ಕಂಬಗಳಿಗೂ ವಿಸ್ತರಿಸಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು. ವಿಶೇಷ ಅನುದಾನ ಮಾತ್ರವಲ್ಲದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 20 ಕಂಬಗಳಿಗೂ ತಲಾ ₹2 ಲಕ್ಷ ಬಿಡುಗಡೆ ಆಗಿದೆ ಎಂದು ಅವರು ವಿವರಿಸಿದರು.
ಕಂಬಳ ಸಮಿತಿ ವಿಷಾದ
‘ಮಂಗಳೂರು ಕಂಬಳದ ಸಂದರ್ಭದಲ್ಲಿ ಆಗಿರುವ ಘಟನೆಗೆ ರಾಜ್ಯ ಕಂಬಳ ಸಂಸ್ಥೆಯ ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮತ್ತು ಸದಸ್ಯ ಅರುಣ್ ಶೆಟ್ಟಿ ಮಾತ್ರವಲ್ಲ ಜಿಲ್ಲಾ ಕಂಬಳ ಸಮಿತಿಯೂ ಬೇಸರ ವ್ಯಕ್ತಪಡಿಸಿದೆ’ ಎಂದು ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು. ‘ಮಿಯಾರು ಕಂಬಳದಲ್ಲಿ ನಾನು ಸಾರ್ವಜನಿಕವಾಗಿ ವಿಷಾದದ ಮಾತುಗಳನ್ನು ಆಡಿದ್ದೇನೆ. ಮಂಗಳೂರಿನಲ್ಲಿ ನಡೆದ ಘಟನೆಗೆ ನಾನೇ ಜವಾಬ್ದಾರಿ ಎಂದು ಒಪ್ಪಿಕೊಂಡಿದ್ದೇನೆ. ಗುಣಪಾಲ ಕಡಂಬ ಅವರಿಗೆ ಕಂಬಳದಲ್ಲಿ ಗುರುಸ್ಥಾನ ಇದ್ದು ಮುಂದೆಯೂ ಗೌರವ ಇರುತ್ತದೆ ಎಂದು ಹೇಳಿರುವೆ’ ಎಂದು ದೇವಿಪ್ರಸಾದ್ ತಿಳಿಸಿದರು. ‘ಕಂಬಳದ ತೀರ್ಪುಗಾರರು ಕೋಣಗಳ ಯಜಮಾನರು ಮತ್ತು ಕೆಲಸ ಮಾಡುವವರಿಗೆ ಅಪಮಾನ ಆದರೆ ಸಮಿತಿ ಸುಮ್ಮನಿರುವುದಿಲ್ಲ. ಹಾಸ್ಯಕ್ಕಾಗಿಯಾದರೂ ಏನೂ ಹೇಳುವಂತಿಲ್ಲ. ಹಾಗೆ ಹೇಳಿದರೆ ಕೆಲವೊಮ್ಮೆ ಅಪಹಾಸ್ಯವಾಗುವ ಸಾಧ್ಯತೆ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.