ADVERTISEMENT

‘ಕಾಂಚನ’ ಮಾದರಿ ಗುರುಕುಲ ಪರಿಸರ: ರಾಘವೇಶ್ವರ ಭಾರತಿ ಸ್ವಾಮೀಜಿ

ಕಾಂಚನದಲ್ಲಿ ಸಂಗೀತ ಶಾಲೆ, ಸಭಾಭವನ, ಭೋಜನ ಶಾಲೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:27 IST
Last Updated 7 ಫೆಬ್ರುವರಿ 2026, 6:27 IST
ಉಪ್ಪಿನಂಗಡಿ ಸಮೀಪ ಕಾಂಚನದಲ್ಲಿ ನೂತನ ಸಂಗೀತ ಶಾಲೆಯನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು
ಉಪ್ಪಿನಂಗಡಿ ಸಮೀಪ ಕಾಂಚನದಲ್ಲಿ ನೂತನ ಸಂಗೀತ ಶಾಲೆಯನ್ನು ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು   

ಉಪ್ಪಿನಂಗಡಿ: ಕಾಂಚನ ಎಂಬ ಈ ಊರು ಜಗತ್ಪ್ರಸಿದ್ಧವಾಗಿದೆ. ಇಲ್ಲಿನ ಮಣ್ಣು, ನೀರು, ಗಾಳಿ, ಎಲ್ಲೆಲ್ಲೂ ಸಂಗೀತ ಇದೆ. ಇದೊಂದು ಮಾದರಿ ಗುರುಕುಲ ಪರಿಸರ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಉಪ್ಪಿನಂಗಡಿ ಸಮೀಪದ ಕಾಂಚನದಲ್ಲಿ ನೂತನ ಸಂಗೀತ ಶಾಲೆ, ಸಭಾಭವನ, ಭೋಜನ ಶಾಲೆ ಲೋಕಾರ್ಪಣೆ ಸಮಾರಂಭದಲ್ಲಿ ಶುಕ್ರವಾರ ಅವರು ಆಶೀರ್ವಚನ ನೀಡಿದರು.

ಕಾಂಚನ ಸಂಗೀತ ಶಾಲೆಗೆ ಪರಂಪರೆ ಇದೆ. ಸಂಗೀತ ಮೋಕ್ಷ ವಿದ್ಯೆ‌ಯಾಗಿದ್ದು, ಕಾಂಚನ ಕುಟುಂಬದ ಉಸಿರಾಟ, ಊಟ ಎಲ್ಲವೂ ಸಂಗೀತವೇ ಆಗಿದೆ. ಬದುಕಿನಲ್ಲಿರುವ ನೋವು ದೂರ ಮಾಡಲು ಹಲವು ಕಲೆ ಇದೆ. ಆದರೆ, ಹತ್ತಿರದಲ್ಲಿ ಮತ್ತು ಸುಲಭದಲ್ಲಿ ಆಸ್ವಾದಿಸಲು ಸಾಧ್ಯವಾಗುವುದು ಸಂಗೀತ ಮೂಲಕವಾಗಿದೆ. ಸಂಗೀತ ಹಾಡುವುದು ಮತ್ತು ಹೇಳಿಕೊಡುವುದರ ಮೂಲಕ ಸಂಗೀತ ಉಳಿಸಲು ಸಾಧ್ಯ. ಆ ಕೆಲಸ ಇಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ ಪೂರ್ವಜ ಕುಟುಂಬದವರು ಸ್ಥಾಪನೆ ಮಾಡಿರುವ ಈ ಸಂಸ್ಥೆಯನ್ನು ಇಂದು ರೋಹಿಣಿ ಸುಬ್ಬರತ್ನಂ ಕುಟುಂಬ ಮುನ್ನಡೆಸುತ್ತಾ ಬಂದಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲರ ಹೊಣೆಯಾಗಿದೆ ಎಂದರು.

ADVERTISEMENT

ಸಾಹಿತ್ಯ, ಸಂಗೀತ ಧರ್ಮದ ಭಾಗ-ಡಿಕೆಶಿ: ಸಂಗೀತ ಶಾಲೆಯನ್ನು ಉದ್ಘಾಟಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾಹಿತ್ಯ, ಸಂಗೀತ ಧರ್ಮದ ಭಾಗವಾಗಿದೆ. ಕಾಂಚನ ಸಂಗೀತದ ಮೂಲಕ ದೇಶದಾದ್ಯಂತ ಹೆಸರು ಗಳಿಸಿದೆ. ಇಲ್ಲಿನ ಸಂಗೀತ ಪಾವಿತ್ರ್ಯವನ್ನು ಉಳಿಸಿಕೊಂಡಿದೆ. ದೇಶದಾದ್ಯಂತ ಇರುವ ಸಂಗೀತ ಕ್ಷೇತ್ರದ ಬಹಳಷ್ಟು ವಿದ್ವಾಂಸರು ಈ ಕಾಂಚನದಿಂದ ಅರ್ಪಣೆಯಾದವರು. ಹೀಗಿರುವಾಗ ಕಾಂಚನದ ಮಹಿಮೆಯನ್ನು ಉಳಿಸಿಕೊಂಡು ಸಂಗೀತ ಲೋಕಕ್ಕೆ ಶಕ್ತಿ ಕೊಡಬೇಕಾಗಿದೆ ಎಂದು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಕಾಂಚನ ವಿಶೇಷವಾದ ಗುಡಿ. ಹಲವಾರು ಸಂಗೀತ ದಿಗ್ಗಜರನ್ನು ನೀಡಿದ ಕಾಂಚನ ದಕ್ಷಿಣ ಭಾರತದ ತಿರುವಾನ್ನೂರು ಎನ್ನುವುದರಲ್ಲಿ ತಪ್ಪಿಲ್ಲ. ಸಂಗೀತ ಕ್ಷೇತ್ರ ಬಹಳ ಖುಷಿ ಕೊಡುವ ಮತ್ತು ಬಹಳ ಕಷ್ಟದ ಕೆಲಸ. ಆದರೆ ಇವರ ಕುಟುಂಬ ಇದನ್ನು ಉಳಿಸಿಕೊಂಡು ಬಂದಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಕೀಲ ರಾಜಶೇಖರ್ ಹಿಲ್ಯಾರು, ಕೆ.ಯು.ಜಯಚಂದ್ರ ರಾವ್ ಮಾತನಾಡಿದರು. ನಾಗರತ್ನ ವಿಷ್ಣುಪ್ರಸಾದ್ ಹೆಬ್ಬಾರ್ ವೇದಿಕೆಯಲ್ಲಿ ಇದ್ದರು.

ಧರ್ಮಸ್ಥಳದ ಹರ್ಷೇಂದ್ರ ‌ಕುಮಾರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ವಿನಯಕುಮಾರ್ ಸೊರಕೆ, ಇನಾಯತ್ ಅಲಿ, ಎಂ.ಎಸ್.ಮಹಮ್ಮದ್, ಮುರಳೀಧರ ರೈ, ಜಿ.ಕೃಷ್ಣಪ್ಪ ರಾಮಕುಂಜ, ಪಂಜಿಗುಡ್ಡೆ ಈಶ್ವರ ಭಟ್, ಧನ್ಯಕುಮಾರ್ ರೈ, ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜಿನಿ, ಕಾಂಚನ ಶ್ರುತಿರಂಜಿನಿ, ಕಾಂಚನ ಸುಮನಸರಂಜಿನಿ, ಶ್ರೀಧರ ಗೌಡ ನಡ್ಪ, ಮುಕುಂದ ಗೌಡ ಭಾಗವಹಿಸಿದ್ದರು.

ಕಾಂಚನ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂ ಸ್ವಾಗತಿಸಿ, ಮೋಹನಚಂದ್ರ ಕಾಂಚನ ವಂದಿಸಿದರು. ಮಹೇಶ್ ಕಜೆ, ಗಣರಾಜ್ ಕುಂಬ್ಳೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.