
ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಸಂಘದ ಸಮ್ಮೇಳನದಲ್ಲಿ ರಾಘವೇಂದ್ರ ಎಸ್ ಭಟ್ ಮತ್ತು ಸುರೇಶ್ ಎ.ಎನ್ ಚರ್ಚೆಯಲ್ಲಿ ತೊಡಗಿದ್ದರು. ಫಣೀಂದ್ರ ಕೆ.ಜಿ ಪಾಲ್ಗೊಂಡಿದ್ದರು
ಪ್ರಜಾವಾಣಿ ಚಿತ್ರ
ಮಂಗಳೂರು: ಗಟ್ಟಿ ನೆಲೆ ಇರುವ ಕರ್ಣಾಟಕ ಬ್ಯಾಂಕ್ ಅಸ್ಮಿತೆ ಉಳಿಸಲು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾದ ತುರ್ತು ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಘವೇಂದ್ರ ಭಟ್ ಏಳಿ, ಎದ್ದೇಳಿ, ಬ್ಯಾಂಕ್ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲಿ ಎಂದು ಕರೆ ನೀಡಿದರು.
ಕರ್ಣಾಟಕ ಬ್ಯಾಂಕ್ ಅಧಿಕಾರಿಗಳ ಸಂಘ ನಗರದಲ್ಲಿ ಆಯೋಜಿಸಿದ್ದ 20ನೇ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಬ್ಯಾಂಕಿಂಗ್ ಜಗತ್ತು ತೀವ್ರಗತಿಯಲ್ಲಿ ಬದಲಾಗುತ್ತಿದ್ದು ಹೊಸ ಹಣಕಾಸು ಸಂಸ್ಥೆಗಳ ಸವಾಲು ಎದುರಿಸಲು ಆರಂಭಕಾಲದ ಬ್ಯಾಂಕ್‌ಗಳು ಪರದಾಡುತ್ತಿವೆ. ಇದನ್ನು ಅಪಾಯ ಎಂದು ಪರಿಗಣಿಸದೆ ಅವಕಾಶವಾಗಿ ಪರಿವರ್ತಿಸಿಕೊಂಡು ಮುನ್ನುಗ್ಗಲು ಪ್ರಯತ್ನಿಸಬೇಕು ಎಂದರು.
ಸಂಘಟಿತವಾಗಿ ಶ್ರಮಿಸಿದರೆ ಬಯಸಿದ್ದೆಲ್ಲವನ್ನೂ ಸಾಧಿಸಬಹುದು. ಗ್ರಾಹಕರು ಬದಲಾವಣೆ ಬಯಸಿದಾಗಲೆಲ್ಲ ಅಧಿಕಾರಿಗಳು, ನೌಕರರ ಸಂಘಟನೆ ಮತ್ತು ಆಡಳಿತ ಜೊತೆಯಾಗಿ ನಿಂತು ಸ್ಪಂದಿಸಿದೆ. ಈಗ ಪ್ರತಿಯೊಬ್ಬರೂ ಬ್ಯಾಂಕ್‌ನ ರಾಯಭಾರಿಗಳಾಗಬೇಕು. ಗ್ರಾಹಕರ ಜೊತೆ ವ್ಯವಹರಿಸುವಾಗ ಶತಮಾನದ ಪರಂಪರೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಅಪಪ್ರಚಾರಕ್ಕೆ ಉತ್ತರ ನೀಡಿ
ಸಾಮಾಜಿಕ ಮಾಧ್ಯಮಗಳಲ್ಲಿ ಈಚೆಗೆ ಬ್ಯಾಂಕ್ ಬಗ್ಗೆ ಇಲ್ಲಸಲ್ಲದ ಅಪವಾದಗಳು ಪೋಸ್ಟ್‌ಗಳು ಹರಿದಾಡಿದ್ದವು. ಅದನ್ನು ಕೆಲವು ಮುಖ್ಯವಾಹಿನಿ ಮಾಧ್ಯಮಗಳು ಕೂಡ ಸುದ್ದಿ ಮಾಡಿದ್ದವು. ಇಂಥ ಕುತಂತ್ರಗಳು ನಡೆದಾಗ ಗಾಬರಿಯಾಗಬಾದರು. ವಾಸ್ತವವನ್ನು ಹೇಳಿ ಕುತಂತ್ರ ಮೀರಿ ನಿಲ್ಲಲು ಪ್ರಯತ್ನಿಸಬೇಕು. ಅಪಪ್ರಚಾರಗಳು ಆಡಳಿತವನ್ನು ಮಾತ್ರ ಬಾಧಿಸದೆ ಪ್ರತಿಯೊಬ್ಬರ ನೌಕರನ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಬ್ಯಾಂಕ್ ಈಚೆಗೆ ಗಮನಾರ್ಹ ಸಾಧನೆ ಮಾಡಿದೆ. ಆದರೂ ಅದು ತೃಪ್ತಿಕರವಲ್ಲ. ಹೀಗಾಗಿ ಗೃಹನಿರ್ಮಾಣ ಸಾಲ, ಕಾರು ಖರೀದಿ ಸಾಲ, ಚಿನ್ನದ ಮೇಲಿನ ಸಾಲ ಮತ್ತು ಠೇವಣಿ ಹೆಚ್ಚಿಸಲು ಎಲ್ಲರೂ ಗುರಿಮೀರುವ ಸಾಧನೆ ಮಾಡಬೇಕು ಎಂದು ರಾಘವೇಂದ್ರ ಭಟ್ ಹೇಳಿದರು.
ಆಧುನಿಕ ತಂತ್ರಜ್ಞಾನದ ಬಗ್ಗೆ ಮಾತನಾಡಿದ ಹಣಕಾಸು ಮಾಹಿತಿ ಮತ್ತು ಭದ್ರತಾ ಸಲಹೆಗಾರ ನಾಗರಾಜನ್ ಸುಬ್ಬು ಅವರು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳದೇ ಇದ್ದರೆ ಉಳಿಗಾಲವಿಲ್ಲ. ತಂತ್ರಜ್ಞಾನದ ಸ್ಫೋಟದಿಂದ ಕೆಲವೊಮ್ಮೆ ಅಪಾಯಗಳು ಸಂಭವಿಸುವ ಸಾಧ್ಯತೆಯೂ ಇದೆ. ಆದ್ದರಿಂದ ಡಿಜಿಟಲ್ ವಿಷಯದಲ್ಲಿ ಅರಿವು ಮೂಡಿಸಲು ಬ್ಯಾಂಕ್ ಆಡಳಿತ ಗಮನ ನೀಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸುರೇಶ್ ಹೆಗ್ಡೆ ಎಸ್ ಖಾಸಗಿ ಬ್ಯಾಂಕ್‌ಗಳನ್ನು ವಿದೇಶೀಕರಣ ಮಾಡುವ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡುವ ಪ್ರಯತ್ನ ನಡೆಯುತ್ತಿದೆ. ಇದು ಹೀಗೆಯೇ ಮುಂದುವರಿದರೆ ಉಳಿದುಕೊಳ್ಳುವ ಬ್ಯಾಂಕ್‌ಗಳ ಸಂಖ್ಯೆ ನಾಲ್ಕು ಅಥವಾ ಐದು ಅಷ್ಟೇ ಇರಬಹುದು ಎಂದರು.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜನ್, ಅಖಿಲ ಭಾರತ ಕರ್ಣಾಟಕ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಫಣೀಂದ್ರ ಕೆ.ಜಿ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಅಧ್ಯಕ್ಷ ಸುರೇಶ್ ಎ.ಎನ್, ಗಿರೀಶ್ ವಿ.ಎಸ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.