
ಮೂಲ್ಕಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಜತೆಗೆ ಮೆನ್ನಬೆಟ್ಟು ಹಾಗೂ ಕಟೀಲು ಗ್ರಾಮ ಪಂಚಾಯಿತಿ ಸೇರ್ಪಡೆಗೊಂಡು ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ನಾಲ್ಕು ವರ್ಷದ ನಂತರ ನಡೆದ ಚುನಾವಣೆಯಲ್ಲಿ 10 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.
18 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ಈ ಮೂಲಕ ಬಿಜೆಪಿ ಸದಸ್ಯರು ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ.
ಗೆದ್ದವರು:
ವಾರ್ಡ್ 1– ಪದ್ಮಲತಾ ರಾವ್ (ಬಿಜೆಪಿ), 2– ಲೋಕಯ್ಯ ಸಾಲ್ಯಾನ್ (ಬಿಜೆಪಿ), 3– ಗುರುರಾಜ್ ಪೂಜಾರಿ (ಬಿಜೆಪಿ), 4– ಶೈಲೇಶ್ ಅಂಚನ್ (ಬಿಜೆಪಿ), 5– ಮಲ್ಲಿಕಾ ಪ್ರಕಾಶ್ (ಬಿಜೆಪಿ), 6– ದಾಮೋದರ ಶೆಟ್ಟಿ (ಬಿಜೆಪಿ), 7– ಕೋಕಿಲ (ಕಾಂಗ್ರೆಸ್), 8– ಪ್ರಕಾಶ್ ಆಚಾರ್ಯ (ಕಾಂಗ್ರೆಸ್), 9– ಪ್ರತಿಮಾ (ಕಾಂಗ್ರೆಸ್), 10 – ಚಂದ್ರ ರಾಣ್ಯ (ಕಾಂಗ್ರೆಸ್), 11– ಗೋಪಾಲಕೃಷ್ಣ (ಬಿಜೆಪಿ). 12– ಧನುಷ್ ಶೆಟ್ಟಿಗಾರ್ (ಬಿಜೆಪಿ), 13– ಸುನಿತಾ ರಾಡ್ರಿಗಸ್ (ಕಾಂಗ್ರೆಸ್), 14 ಸಂತಾನ್ ಡಿಸೋಜ (ಕಾಂಗ್ರೆಸ್), 15– ಮಲ್ಲಿಕಾ (ಬಿಜೆಪಿ) 16–ಪ್ರಣೀಕ್ ಕಿನ್ನಿಗೋಳಿ (ಬಿಜೆಪಿ), 17– ಸುನಿತಾ (ಕಾಂಗ್ರೆಸ್), 18– ಕುಶಲತಾ (ಕಾಂಗ್ರೆಸ್).
ವಾರ್ಡ್ 6ರ ಮೆನ್ನಬೆಟ್ಟುವಿನಲ್ಲಿ ಬಿಜೆಪಿಯ ದಾಮೋದರ ಶೆಟ್ಟಿ, ಕಾಂಗ್ರೆಸ್‌ನ ಜೇಮ್ಸ್ ಮಾರ್ಟಿಸ್ ಅವರ ಮಧ್ಯೆ 382 ಮತಗಳಿಂದ ಗರಿಷ್ಠ ಅಂತರ ದಾಖಲಾಗಿದೆ, 16ನೇ ವಾರ್ಡ್ ತಾಳಿಪಾಡಿಯಲ್ಲಿ ಬಿಜೆಪಿಯ ಪ್ರಣೀಕ್ ಕಿನ್ನಿಗೋಳಿ ಅವರು ಕಾಂಗ್ರೆಸ್‌ನ ಟಿ.ಎಚ್.ಮಯ್ಯದ್ದಿ ಅವರನ್ನು 12 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 62 ಮತಗಳು ನೋಟಾಗೆ ಬಿದ್ದಿವೆ.
ಮತ ಸೆಳೆದ ಎಸ್‌ಡಿಪಿಐ:
ವಾರ್ಡ್ 15ರ ತಾಳಿಪಾಡಿಯಲ್ಲಿ ಎಸ್‌ಡಿಪಿಐನ ಸುಂದರಿ (292), ಕಾಂಗ್ರೆಸ್‌ನ ಸುಂದರ (265) ಸ್ಪರ್ಧಿಸಿದ್ದು, ಬಿಜೆಪಿಯ ಮಲ್ಲಿಕಾ (316) ಗೆಲುವಿನ ನಗೆ ಬೀರಿದರು. ಜೆಡಿಎಸ್ ಅಭ್ಯರ್ಥಿ ವಾರ್ಡ್ 14ರಲ್ಲಿ ಸ್ಪರ್ಧಿಸಿದರೂ 12 ಮತ ಸೆಳೆಯಲು ಸಫಲರಾಗಿದ್ದರು. ಟೆಂಪೊ ಚಿಹ್ನೆಯೊಂದಿಗೆ ಗಮನ ಸೆಳೆದಿದ್ದ ಪಕ್ಷೇತರ ಅಭ್ಯರ್ಥಿ ಅರುಣ್ ಡಿಸೋಜ 76 ಮತಗಳನ್ನು ಪಡೆದರು. ವಾರ್ಡ್ 5ರಲ್ಲಿ ಕಾಂಗ್ರೆಸ್‌ನ ಮಲ್ಲಿಕಾ 5 ಮತಗಳನ್ನು ಪಡೆದಿದ್ದಾರೆ. ಕುತೂಹಲ ಕೆರಳಿಸಿದ್ದ ಈ ವಾರ್ಡ್‌ನಲ್ಲಿ ಪಕ್ಷೇತರ ವಿದ್ಯಾ ಶೆಟ್ಟಿ 196 ಮತಗಳನ್ನು ಪಡೆದರೂ ಗೆಲುವು ಸಿಗಲಿಲ್ಲ. ಬಿಜೆಪಿಯ ಲೋಕಯ್ಯ ಸಾಲ್ಯಾನ್ 495 ಮತ ಸೆಳೆದಿದ್ದಾರೆ.
ಸೋಲುಂಡ ಮಾಜಿ ಅಧ್ಯಕ್ಷರು:
ಮಂಡಲ ಪಂಚಾಯಿತಿ ಸದಸ್ಯರಾಗಿ, 5 ಬಾರಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಒಂದು ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಟಿ.ಎಚ್.ಮಯ್ಯದ್ದಿ, ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದ ತಿಮ್ಮಪ್ಪ ಕೋಟ್ಯಾನ್, ಜೆಡಿಎಸ್ ಬೆಂಬಲಿತ ಪಂಚಾಯಿತಿ ಅಧ್ಯಕ್ಷರಾಗಿ ಕಳೆದ ತಿಂಗಳು ಕಾಂಗ್ರೆಸ್ ಸೇರ್ಪಡೆಗೊಂಡ ಸಂಜೀವ ಮಡಿವಾಳ, ಕಿನ್ನಿಗೋಳಿ ಪಂಚಾಯಿತಿಯ ಅಧ್ಯಕ್ಷರಾಗಿದ್ದ ಉಮಾವತಿ, ಅದೇ ಪಂಚಾಯಿತಿಯ ಶ್ಯಾಮಲಾ ಹೆಗ್ಡೆ ಕಾಂಗ್ರೆಸ್ ಬೆಂಬಲಿತ ಆಡಳಿತದಲ್ಲಿ ಅಧ್ಯಕ್ಷರಾಗಿ ಈ ಬಾರಿ ಬಿಜೆಪಿಯಲ್ಲಿ ಸ್ಪರ್ಧಿಸಿದ್ದರೂ ಸೋಲು ಕಂಡಿದ್ದಾರೆ. ವಾರ್ಡ್‌ನಲ್ಲಿ ಗೆಲುವು ಕಂಡಿರುವ ಸಂತಾನ್ ಡಿಸೋಜ ನಾಲ್ಕು ಬಾರಿ ಪಂಚಾಯಿತಿ ಸದಸ್ಯರಾಗಿದ್ದರು. ದಾಮೋದರ ಶೆಟ್ಟಿ, ಸುನಿತಾ ರಾಡ್ರಿಗಸ್ ಈ ಹಿಂದೆ ಪಂಚಾಯಿತಿ ಸದಸ್ಯರಾಗಿದ್ದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 18 ವಾರ್ಡ್‌ಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಬಿಜೆಪಿ ಕಾರ್ಯಕರ್ತರು ಗೆದ್ದ ಅಭ್ಯರ್ಥಿಗಳೊಂದಿಗೆ ಸಂಭ್ರಮಿಸಿದರು. ಶಾಸಕ ಉಮಾನಾಥ ಕೋಟ್ಯಾನ್ ಅವರು ಮತ ಎಣಿಕೆ ಕೇಂದ್ರದಲ್ಲಿಯೇ ಬಿಜೆಪಿಯಿಂದ ಗೆದ್ದವರನ್ನು ಅಭಿನಂದಿಸಿದರು. ಬಳಿಕ ಬಸ್ ನಿಲ್ದಾಣದವರೆಗೆ ಸಂಭ್ರಮ ಆಚರಿಸಿದರು.
ಈಶ್ವರ ಕಟೀಲು, ಸುನಿಲ್ ಆಳ್ವಾ, ದಿನೇಶ್ ಪುತ್ರನ್, ಸತೀಶ್ ಅಂಚನ್, ಅಭಿಲಾಷ್ ಶೆಟ್ಟಿ, ಭುವನಾಭಿರಾಮ ಉಡುಪ, ಶೈಲೇಶ್‌ಕುಮಾರ್, ವಿಠಲ ಭಾಗವಹಿಸಿದ್ದರು.
ಕಾಂಗ್ರೆಸ್‌ನಿಂದ ಗೆದ್ದ ಅಭ್ಯರ್ಥಿಗಳನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ಕಚೇರಿಯಲ್ಲಿ ಅಭಿನಂದಿಸಿದರು. ವಸಂತ ಬೆರ್ನಾಡ್, ಮೋಹನ್ ಕೋಟ್ಯಾನ್, ಮಂಜುನಾಥ ಕಂಬಾರ, ಅಶೋಕ್ ಪೂಜಾರ್ ಜತೆಗಿದ್ದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಬಿಜೆಪಿಯ ವಿಜೇತರನ್ನು ಅಭಿನಂದಿಸಿದರು.
ಚುನಾವಣಾ ಅಧಿಕಾರಿ ರಾಮಕೃಷ್ಣ ಐತಾಳ್ ಅವರ ತಂಡ ಮತ ಎಣಿಕೆಯ ಮಾಡಿತ್ತು. ಮೂಲ್ಕಿ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.