ADVERTISEMENT

ಆಗಸ್ಟ್‌ 1ರಂದು ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 13:50 IST
Last Updated 29 ಜುಲೈ 2021, 13:50 IST
ಡಾ.ಜಗದೀಶ್ ಪೈ
ಡಾ.ಜಗದೀಶ್ ಪೈ   

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ‘ಗೌರವ ಪ್ರಶಸ್ತಿ’ ಹಾಗೂ ‘ಪುಸ್ತಕ ಬಹುಮಾನ’ ಪ್ರದಾನ ಸಮಾರಂಭ ಆಗಸ್ಟ್‌ 1ರಂದು ಮಧ್ಯಾಹ್ನ 2 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.

ಅರುಣ್ ಸುಬ್ರಾವ್ ಉಭಯಕರ್ (ಸಾಹಿತ್ಯ), ಪುತ್ತೂರು ಪಾಂಡುರಂಗ ನಾಯಕ್ (ಕಲೆ), ಲಕ್ಷ್ಮಿ ಕೃಷ್ಣ ಸಿದ್ದಿ (ಜಾನಪದ) ಅವರಿಗೆ ಅಕಾಡೆಮಿ ‘ಗೌರವ ಪ್ರಶಸ್ತಿ’ ಮತ್ತು ಪ್ರೇಮ್ ಮೊರಾಸ್ ಅವರ ಕವನ-ಏಕ್‌ಮೂಟ್ ಪಾವ್ಳ್ಯೊ’, ಮೋನಿಕಾ ಡೇಸಾ ಅವರ ಸಣ್ಣಕತೆ ‘ನವಿದಿಶಾ’, ಸ್ಟೀವನ್ ಕ್ವಾಡ್ರಸ್ ಅವರ ಲೇಖನ ‘ಸುಗಂದು ಸ್ವಾಸ್‌’ಗೆ ‘ಪುಸ್ತಕ ಬಹುಮಾನ’ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಡಾ.ಕೆ.ಜಗದೀಶ್ ಪೈ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಕೊಂಕಣಿ ನಟ ಹೆನ್ರಿ ಡಿಸಿಲ್ವಾ ಮೊದಲಾದವರು ಪಾಲ್ಗೊಳ್ಳುವರು. ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಅತ್ಯಂತ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರು ಮತ್ತು ಅತಿಥಿಗಳು ಮಾತ್ರ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತ ದಿನವಾದ ಆ.20ರಂದು ಕೊಂಕಣಿ ಮಾನ್ಯತಾ ದಿನಾಚರಣೆ ಆಯೋಜಿಸಲಾಗಿದೆ. ಈ ಬಾರಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಕುಮಟಾ, ಹುಬ್ಬಳ್ಳಿ, ಕಾರವಾರ, ದಾವಣಗೆರೆ, ಬೆಂಗಳೂರು ಮತ್ತು ಮಂಗಳೂರು ಸೇರಿ ಆರು ಕಡೆಗಳಲ್ಲಿ ಕಾರ್ಯಕ್ರಮ ಜರುಗಲಿದೆ. ಮಂಗಳೂರಿನ ಸೇಂಟ್‌ ಅಲೋಶಿಯಸ್ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.

ಅಕಾಡೆಮಿಯ ರಿಜಿಸ್ಟ್ರಾರ್ ಆರ್. ಮೋಹನ್ ಕಾಮತ್, ಸದಸ್ಯರಾದ ಕೆನ್ಯುಟ್ ಜೀವನ್, ನವೀನ್ ನಾಯಕ್, ಅರುಣ್ ಜಿ.ಶೇಟ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.